ಚುನಾವಣಾ ಅಕ್ರಮ ಪ್ರಕರಣಗಳಲ್ಲಿ ಅಧಿಕಾರಿಗಳಿಂದ ಉದ್ದೇಶಪೂರಿತ ಲೋಪ: ಹೈಕೋರ್ಟ್‌ ಕಿಡಿ

“ಅಧಿಕಾರಿಗಳಿಗೆ ತಮಗೆ ಏನಾದರೂ ಆದರೆ ಎಂಬ ಭಯ ಇರುತ್ತದೆ. ತಮ್ಮ ಸುರಕ್ಷತೆ ದೃಷ್ಟಿಯಿಂದ ಹೀಗೆ ನಡೆದುಕೊಳ್ಳುತ್ತಾರೆ. ಪ್ರಕರಣ ದಾಖಲಿಸಬೇಕು, ಆದರೆ ಅದು ವಿಫಲವಾಗಲಿ ಎಂಬುದು ಅಧಿಕಾರಿಗಳಿಗೆ ಧೋರಣೆ” ಎಂದು ನ್ಯಾಯಾಲಯ ಹೇಳಿದೆ.
Karnataka High Court and Justice S Sunil Dutt Yadav
Karnataka High Court and Justice S Sunil Dutt Yadav
Published on

“ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಂಬಂಧಿತ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ದೋಷಪೂರಿತ ಆರೋಪ ಪಟ್ಟಿ ಸಲ್ಲಿಸುತ್ತಾರೆ. ಇದೆಲ್ಲವೂ ಅವರಿಗೆ ಗೊತ್ತಿಲ್ಲ ಎಂದು ಹೇಳಲಾಗದು” ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಕಳೆದ ವಿಧಾನಸಭೆ ಚುನಾವಣೆ ವೇಳೆ ದಾಖಲಾಗಿದ್ದ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ರದ್ದತಿ ಕೋರಿ ಬಿಜೆಪಿಯ ಮಾಜಿ ಸಂಸದ ಪ್ರತಾಪ್‌ ಸಿಂಹ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠವು ಮೇಲಿನಂತೆ ಹೇಳಿದೆ.

“ಅಧಿಕಾರಿಗಳಿಗೆ ತಮಗೆ ಏನಾದರೂ ಆದರೆ ಎಂಬ ಭಯ ಇರುತ್ತದೆ. ತಮ್ಮ ಸುರಕ್ಷತೆ ದೃಷ್ಟಿಯಿಂದ ಹೀಗೆ ನಡೆದುಕೊಳ್ಳುತ್ತಾರೆ. ಪ್ರಕರಣ ದಾಖಲಿಸಬೇಕು, ಅದರೆ ಅದು ವಿಫಲವಾಗಲಿ ಎಂಬುದು ಅಧಿಕಾರಿಗಳ ಧೋರಣೆ. ಇದೆಲ್ಲವೂ ಗೊತ್ತಿದ್ದೇ ಅಧಿಕಾರಿಗಳು ಹಾಗೆ ಮಾಡುತ್ತಾರೆ. ಇದು ತಪ್ಪು” ಎಂದು ನ್ಯಾಯಾಲಯ ಬೇಸರಿಸಿತು.

“ಆರೋಪ ಪಟ್ಟಿಯಲ್ಲಿನ ಅಂಶಗಳು ಐಪಿಸಿ ಸೆಕ್ಷನ್‌ 171ಎಚ್‌ ಅಪರಾಧಕ್ಕೆ ಅನ್ವಯಿಸುವುದಿಲ್ಲ. ಆದರೆ, ಐಪಿಸಿ ಸೆಕ್ಷನ್‌ 188 ಅಡಿ ಅಪರಾಧಕ್ಕೆ ಅನ್ವಯಿಸುತ್ತವೆ. ಹೀಗಾಗಿ, ಪ್ರಕ್ರಿಯೆ ಮುಂದುವರಿಸಲು ಅರ್ಥವಿಲ್ಲ. ಹೀಗಾಗಿ, ವಿಶೇಷ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣ ರದ್ದುಪಡಿಸಲಾಗುತ್ತಿದೆ” ಎಂದು ನ್ಯಾಯಾಲಯ ಹೇಳಿದೆ.

“ಚುನಾವಣಾ ಅಕ್ರಮಗಳನ್ನು ಗಂಭೀರವಾಗಿ ನಡೆಸುವುದರ ಬಗ್ಗೆ ಅಭಿಪ್ರಾಯಿಸುವುದು ಅಗತ್ಯವಾಗಿದೆ. ಚುನಾವಣಾ ಅಪರಾಧಕ್ಕೆ ಪ್ರತ್ಯೇಕವಾಗಿ ಐಪಿಸಿಯಲ್ಲಿ ಅಧ್ಯಾಯವಿದೆ. ಹಾಲಿ ಪ್ರಕರಣದಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಶ್ರೇಣಿಯ ಅಧಿಕಾರಿಯು ಆರೋಪ ಪಟ್ಟಿ ಸಲ್ಲಿಸಿದ್ದು, ಐಪಿಸಿ ಸೆಕ್ಷನ್‌ 171ಎಚ್‌ ಮತ್ತು ಸೆಕ್ಷನ್‌ 188 ನಡುವಿನ ಮೂಲಭೂತ ವ್ಯತ್ಯಾಸವನ್ನು ಗುರುತಿಸಿಲ್ಲ. ಪ್ರಮುಖರಿಗೆ ಸಂಬಂಧಿಸಿದ ಕೆಲವು ಪ್ರಕರಣಗಳಲ್ಲಿ ಸಂಬಂಧಿತ ಅಧಿಕಾರಿಗಳು ಕೆಲವೊಮ್ಮೆ ದೋಷಪೂರಿತ ಆರೋಪ ಪಟ್ಟಿ ಸಲ್ಲಿಸುವ ಮೂಲಕ ಅದನ್ನು ನ್ಯಾಯಾಲಯವೇ ವಾಸ್ತವಿಕ ನೆಲೆಯಲ್ಲಿ ಬದಿಗೆ ಸರಿಸಿದೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಾರೆ. ಅಧಿಕಾರಿಗಳ ಇಂಥ ನಡೆಯ ಬಗ್ಗೆ ಎಚ್ಚರವಹಿಸಬೇಕಿದೆ” ಎಂದು ನ್ಯಾಯಾಲಯ ಹೇಳಿದೆ.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯು ಐಪಿಸಿ ಸೆಕ್ಷನ್‌ 188 ಅಡಿ ಅಪರಾಧವಾಗುತ್ತದೆ. ಆದರೆ, ದುರದೃಷ್ಟಕರವೆಂದರೆ ನಮ್ಮ ಅಧಿಕಾರಿಗಳು ಐಪಿಸಿ ಸೆಕ್ಷನ್ 171ಎಚ್‌ ಅಡಿ ಪ್ರಕರಣ ದಾಖಲಿಸಿದ್ದಾರೆ.‌ ಈ ಸಂಬಂಧ ನ್ಯಾಯಾಲಯವು ಆದೇಶದಲ್ಲಿ ಕಟುವಾದ ಅಭಿಪ್ರಾಯ ವ್ಯಕ್ತಪಡಿಸಬೇಕು. ತನಿಖೆ ನಡೆಸುವ ಅಧಿಕಾರಿಗಳಿಗೆ ಸಂದೇಶ ರವಾನೆಯಾಗಬೇಕು” ಎಂದರು.

“ಅನುಮತಿ ಪಡೆಯದೇ ಬೈಕ್‌  ರ‍್ಯಾಲಿ ಮೂಲಕ ಚುನಾವಣೆ ಪ್ರಚಾರ ನಡೆಸುವುದು ಐಪಿಸಿ ಸೆಕ್ಷನ್‌ 188 ಅಡಿ ಅಪರಾಧವಾಗಿದೆ” ಎಂದರು.

ಪ್ರಕರಣದ ಹಿನ್ನೆಲೆ: ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲ್ಲೂಕಿನ ರಂಗಸಮುದ್ರದ ಸಮೀಪ ಪ್ರತಾಪ್‌ ಸಿಂಹ ಮತ್ತಿತರರ ನಾಯಕರು ತಮ್ಮ ಪಕ್ಷದ ಕಾರ್ಯಕರ್ತರ ಜೊತೆ ಬೈಕ್  ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಪ್ರತಾಪ್‌ ಮತ್ತು ಇತರರು ಕಾರಿನಲ್ಲಿದ್ದರು. ಇದಕ್ಕೆ ಯಾವುದೇ ಅನುಮತಿ ಪಡೆದಿರಲಿಲ್ಲ. ಇದಕ್ಕೆ ಸೂಕ್ತ ಪ್ರತಿಕ್ರಿಯೆ ಬಾರದಿದ್ದಾಗ ಐಪಿಸಿ ಸೆಕ್ಷನ್‌ 171ಎಚ್‌ ಅಡಿ ಪ್ರತಾಪ್‌ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

Kannada Bar & Bench
kannada.barandbench.com