ಶಾಲೆಗಳಲ್ಲಿನ ದೈಹಿಕ ಶಿಕ್ಷೆಯ ನಿರ್ಮೂಲನೆಗಾಗಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಒದಗಿಸಿದ ಮಾರ್ಗಸೂಚಿಗಳನ್ನು (ಜಿಇಸಿಪಿ) ಕಟ್ಟುನಿಟ್ಟಾಗಿ ಜಾರಿಗೊಳಿಸುವುದಕ್ಕಾಗಿ ಪ್ರತಿ ಶಾಲೆಯಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸುವಂತೆ ಮದ್ರಾಸ್ ಹೈಕೋರ್ಟ್ ಈಚೆಗೆ ಸರ್ಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ [ಕಾಮಚಿ ಶಂಕರ್ ಅರುಮುಗಂ ಮತ್ತು ತಮಿಳುನಾಡು ಶಾಲಾ ಶಿಕ್ಷಣ ಇಲಾಖೆ ಇನ್ನಿತರರ ನಡುವಣ ಪ್ರಕರಣ].
ಶಾಲಾ ಮುಖ್ಯಸ್ಥರು ಅಥವಾ ಪೋಷಕರು, ಶಿಕ್ಷಕರು ಮತ್ತು ಹಿರಿಯ ವಿದ್ಯಾರ್ಥಿಗಳು ಮೇಲ್ವಿಚಾರಣಾ ಸಮಿತಿಗಳ ನೇತೃತ್ವ ವಹಿಸಬಹುದು ಎಂದು ನ್ಯಾಯಮೂರ್ತಿ ಎಸ್.ಎಂ.ಸುಬ್ರಮಣ್ಯಂ ತಿಳಿಸಿದರು.
ಅಂತಹ ಸಮಿತಿಗಳು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು ಮತ್ತು ಪರಿಹಾರಕ್ಕಾಗಿ ಯಾವುದೇ ಅಹಿತಕರ ಘಟನೆಗಳು ಅಥವಾ ಸಿಬ್ಬಂದಿ ಮತ್ತು ಮಕ್ಕಳ ಯಾವುದೇ ವಿಭಿನ್ನ ನಡವಳಿಕೆಯನ್ನು ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ನ್ಯಾಯಾಲಯ ಹೇಳಿದೆ.
ದೈಹಿಕ ಶಿಕ್ಷೆ ಮಾತ್ರವಲ್ಲದೆ, ಶಾಲೆಗಳಲ್ಲಿ ಮಕ್ಕಳ ಮೇಲೆ ಯಾವುದೇ ಪರೋಕ್ಷ ಕಿರುಕುಳ ತೊಡೆದುಹಾಕಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಎಲ್ಲಾ ಶಾಲೆಗಳಿಗೆ ಮಾರ್ಗಸೂಚಿಗಳನ್ನು ಒದಗಿಸಿ ಮಕ್ಕಳ ಮಾನಸಿಕ ಆರೋಗ್ಯವನ್ನು ರಕ್ಷಿಸಲು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಸಂಬಂಧಪಟ್ಟವರು ಈ ಕುರಿತು ಸಂವೇದನಾಶೀಲರಾಗಿರುವಂತೆ ಜಿಲ್ಲಾ ಶೈಕ್ಷಣಿಕ ಅಧಿಕಾರಿಗಳು ನೋಡಿಕೊಳ್ಳಲು ಸರ್ಕಾರಕ್ಕೆ ಅದು ನಿರ್ದೇಶನ ನೀಡಿದೆ.
ಮಾರ್ಗಸೂಚಿಗಳ ಕುರಿತು ವಿಚಾರ ಸಂಕಿರಣಗಳು ಮತ್ತು ಜಾಗೃತಿ ಶಿಬಿರಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಯಾವುದೇ ದೂರುಗಳಿದ್ದಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.
"ಯಾವುದೇ ಲೋಪ, ನಿರ್ಲಕ್ಷ್ಯ ಗಮನಕ್ಕೆ ಬಂದರೆ, ಅಧಿಕಾರಿಗಳು ಸೇವಾ ನಿಯಮಗಳ ಅಡಿಯಲ್ಲಿ ಇಲಾಖಾ ಶಿಸ್ತಿನ ಪ್ರಕ್ರಿಯೆಗೆ ಒಳಗಾಗಬೇಕು" ಎಂದು ನ್ಯಾಯಾಲಯ ಆದೇಶಿಸಿದೆ.
ಹಿಂದೆ, ಮಕ್ಕಳಿಗೆ ಕಡಿಮೆ ಹಕ್ಕು ನೀಡಲಾಗುತ್ತಿತ್ತು, ಆದರೆ ಈಗ ಪ್ರಮುಖ ಸುಧಾರಣೆಗಳನ್ನು ತರಲಾಗಿದೆ. ಮಕ್ಕಳ ಹಕ್ಕುಗಳ ವಿಕಾಸದ ಕಡೆಗೆ ಸಮಾಜ ಕೆಲಸ ಮಾಡುವುದೇ ಸರಿಯಾದ ಕ್ರಮ ಎಂದು ನ್ಯಾಯಾಲಯ ಹೇಳಿದೆ.
ಎನ್‌ಸಿಪಿಸಿಆರ್ ಮಾರ್ಗಸೂಚಿಗಳ ಅನುಷ್ಠಾನಕ್ಕೆ ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ನಿರ್ದೇಶನಗಳನ್ನು ನೀಡಿದೆ. ನಿರ್ದೇಶನಗಳನ್ನು ಪಾಲಿಸಲಾಗಿದೆಯೇ ಎಂಬ ಕುರಿತು ಜೂನ್ 14 ರಂದು ವಿಚಾರಣೆ ನಡೆಸಲಿದೆ.