[ತೂತುಕುಡಿ ಗೋಲಿಬಾರ್‌] ಕಾರ್ಪೊರೆಟ್‌ ಸಂಸ್ಥೆಯ ಪರವಾಗಿ ನಾಗರಿಕರ ಮೇಲೆ ಗುಂಡು ಹಾರಿಸಲಾಗದು: ಮದ್ರಾಸ್‌ ಹೈಕೋರ್ಟ್‌

“ಪ್ರತಿಭಟನೆಗಳು ಕಾನೂನಾತ್ಮಕ ಅಥವಾ ಯುಕ್ತವಲ್ಲದೇ ಇರಬಹುದು. ಹಾಗೆಂದು ಕಾರ್ಪೊರೆಟ್‌ ಸಂಸ್ಥೆಯ ಪರವಾಗಿ ನಾಗರಿಕರ ಮೇಲೆ ಗುಂಡು ಹಾರಿಸಲಾಗದು,” ಎಂದು ಮುಖ್ಯ ನ್ಯಾಯಮೂರ್ತಿಯವರು ವಿಚಾರಣೆ ವೇಳೆ ತಿಳಿಸಿದರು.
Madrad HC, Vedanta Sterlite Thoothukudi
Madrad HC, Vedanta Sterlite Thoothukudi
Published on

ವೇದಾಂತ ಸ್ಟೆರಲೈಟ್ ತಾಮ್ರ ಘಟಕದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಶಸ್ತ್ರರಹಿತ ನಾಗರಿಕರ ಮೇಲೆ ತಮಿಳುನಾಡಿನ ತೂತುಕುಡಿಯಲ್ಲಿ 2018ರಲ್ಲಿ ಪೊಲೀಸರು ಗುಂಡು ಹಾರಿಸಿದ ಘಟನೆ ಪ್ರಜಾಪ್ರಭುತ್ವಕ್ಕೆ ಕಳಂಕ ತಂದ ಘಟನೆಯಾಗಿದ್ದು ಅದನ್ನು ಮರೆಯಬಾರದು ಎಂದು ಮದ್ರಾಸ್‌ ಹೈಕೋರ್ಟ್‌ ಸೋಮವಾರ ಒತ್ತಿ ಹೇಳಿದೆ (ಹೆನ್ರಿ ತಿಪಾಜ್ಞೆ ವರ್ಸಸ್‌ ಎನ್‌ಎಚ್ಆರ್‌ಸಿ ಮತ್ತಿತರರು).

ಘಟನೆಯ ಸಂಬಂಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತನಿಖೆಯ ಮರು ಆರಂಭಕ್ಕೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದರ ವಿಚಾರಣೆಯನ್ನು ನಡೆಸಿದ ಮುಖ್ಯ ನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಟಿ ಎಸ್‌ ಶಿವಜ್ಞಾನಮ್‌ ಅವರಿದ್ದ ಪೀಠವು ಮೇಲಿನಂತೆ ಅಭಿಪ್ರಾಯಪಟ್ಟಿತು.

ಪ್ರಕರಣದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಬ್ಯಾನರ್ಜಿ ಅವರು, “ಇದು 2018ಕ್ಕೆ ಸಂಬಂಧಿಸಿದ ಘಟನೆ. ಇದು ಜನರ ಮನಸ್ಸಿನಿಂದ ಮರೆಯಾಗಿದೆ. ಆದರೆ, ಈ ಘಟನೆಯಲ್ಲಿ ಹದಿನೈದರಿಂದ ಹದಿನಾರು ನಾಗರಿಕರು ತಮ್ಮ ಜೀವವನ್ನು ತೆತ್ತರು. ಅಂತಹ ಘಟನೆಯು ಪ್ರಜಾಪ್ರಭುತ್ವಕ್ಕೆ ಕಳಂಕ. ನಾವು ಅದನ್ನು ಮರೆಯಬಾರದು. ಇದಾಗಲೇ ಆ ಕುಟುಂಬಗಳಿಗೆ ಮಾಡಲಾಗಿರುವುದಕ್ಕಿಂತ (ನೆರವು) ಹೆಚ್ಚಿನದೇನನ್ನಾದರೂ ನಾವು ಮಾಡಲು ಸಾದ್ಯವಾದರೆ ಅದನ್ನು ಮಾಡೋಣ… ಇದು ಅಂತ್ಯಗೊಳ್ಳಬೇಕು… ನಮ್ಮ ವ್ಯವಸ್ಥೆಯು ಎಷ್ಟು ವಿಳಂಬ ಮಾಡುತ್ತದೆ ಎಂದರೆ ಕೆಲವೊಮ್ಮೆ ಅದರ ಹಿಂದಿನ ಉದ್ದೇಶವೇ ಕಳೆದುಹೋಗುತ್ತದೆ,” ಎಂದು ಬೇಸರಿಸಿದರು.

ಗೋಲಿಬಾರ್‌ಅನ್ನು ಕಾರ್ಪೊರೆಟ್‌ ಸಂಸ್ಥೆಯ ಪರವಾಗಿ ಮಾಡಲಾಗಿದೆ ಎನ್ನುವುದಕ್ಕೆ ಸಣ್ಣದೊಂದು ಸೂಚನೆಯಿದ್ದರೂ ಸಹ ಅದನ್ನು ಪರಿಗಣಿಸಬೇಕಿದೆ. ತನ್ನ ಪರವಾಗಿ ರಾಜ್ಯ ಸರ್ಕಾರವು ಗುಂಡು ಹಾರಿಸುವಷ್ಟು ಕಾರ್ಪೊರೆಟ್‌ ಸಂಸ್ಥೆಯೊಂದು ಬಲಶಾಲಿಯಾಗಿದೆ ಎಂದು ಯಾರೂ ಭಾವಿಸುವಂತಾಗಬಾರದು ಎಂದು ಇದೇ ವೇಳೆ ಅವರು ಹೇಳಿದರು.

“ಈ ಘಟನೆಗೆ ಪ್ರಚೋದನೆ ಏನು ಎನ್ನುವುದರ ಬಗ್ಗೆ ನಮಗೆ ಉತ್ತರ ಬೇಕು… ಇದಕ್ಕೆ ಕಾರಣವಾದ ಸನ್ನಿವೇಶಗಳೇನು ಎನ್ನುವುದು ತಿಳಿಯಬೇಕು. ಪ್ರತಿಭಟನೆಯು ಕಾನೂನಾತ್ಮಕ ಅಥವಾ ಯುಕ್ತವಲ್ಲದೇ ಇರಬಹುದು. ಹಾಗೆಂದು ಕಾರ್ಪೊರೆಟ್‌ ಸಂಸ್ಥೆಯ ಪರವಾಗಿ ನಾಗರಿಕರ ಮೇಲೆ ಗುಂಡು ಹಾರಿಸಲಾಗದು… ದೇಶದ ನಾಗರಿಕರಿಗೆ ತಿಳಿಯಬೇಕಾದ ಬಹುಮುಖ್ಯ ವಿಚಾರವಿದು… ಇಂತಹ ಮತ್ತೊಂದು ಘಟನೆ ಮರುಕಳಿಸದಂತೆ ನಾವು ನೋಡಿಕೊಳ್ಳಬೇಕಿದೆ,” ಎಂದು ಮುಖ್ಯ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

ತೂತುಕುಡಿಯ 2018ರ ಗೋಲಿಬಾರಿನ ಸಂತ್ರಸ್ತರು ಹಾಗೂ ಅವರ ಕುಟುಂಬದವರಿಗೆ, ಜೀವಮಾನವಿಡೀ ವೈಕಲ್ಯ ಹೊಂದಿದವರಿಗೆ ಮತ್ತಷ್ಟು ಪರಿಹಾರ ಹಾಗೂ ಆಪ್ತ ಸಲಹೆ ನೀಡುವಂತೆಯೂ ಸಹ ನ್ಯಾಯಾಲಯವು ಮಧ್ಯಂತರ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಕುರಿತಾಗಿ ಕೇಂದ್ರ ತನಿಖಾ ದಳವು (ಸಿಬಿಐ) ತನಿಖೆ ಕೈಗೊಂಡಿದ್ದು, ಪ್ರಕರಣಕ್ಕೆ ಅರ್ಥಪೂರ್ಣ ಅಂತ್ಯ ಹಾಡಬೇಕು, ತನಿಖೆಯು ತ್ವರಿತಗತಿಯಲ್ಲಿ ಮುಂದುವರೆಯಬೇಕು ಎಂದು ನ್ಯಾಯಾಲಯ ಹೇಳಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದು ಸಾಕಷ್ಟು ಸಮಯ ಸಂದಿರುವ ಹಿನ್ನೆಲೆಯಲ್ಲಿ ಈ ಸಂಬಂಧ ಆಗಿರುವ ಬೆಳವಣಿಗೆಗಳ ಬಗ್ಗೆ ಮುಂದಿನ ವಿಚಾರಣೆ ವೇಳೆ ಮಾಹಿತಿ ನೀಡುವಂತೆ ಆಯೋಗಕ್ಕೆ ನ್ಯಾಯಾಲಯ ಸೂಚಿಸಿತು.

ಇದೇ ಸಂದರ್ಭದಲ್ಲಿ, ಈ ಹಿಂದೆ ನೀಡಿದ್ದ ಆದೇಶದ ಅನ್ವಯ ಆಯೋಗವು ಮುಚ್ಚಿದ ಲಕೋಟೆಯಲ್ಲಿ ಈವರೆಗೆ ತನಿಖೆ ಸಾಗಿರುವ ಹಾದಿಯ ಬಗ್ಗೆ ವರದಿಯನ್ನು ಸಲ್ಲಿಸಿರುವುದನ್ನು ಪರಿಗಣಿಸಿತು ಹಾಗೂ ಅದನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್‌ ಅವರ ಕಚೇರಿಗೆ ಹಾಗೂ ಅರ್ಜಿದಾರರು ಮತ್ತು ರಾಜ್ಯ ಸರ್ಕಾರಕ್ಕೆ ನೀಡುವಂತೆ ಸೂಚಿಸಿತು. ಸದ್ಯಕ್ಕೆ ವರದಿಯನ್ನು ಸಾರ್ವಜನಿಕಗೊಳಿಸಲಾಗದಾದರೂ ಮುಂದಿನ ದಿನಗಳಲ್ಲಿ ಅದನ್ನು ಸಾರ್ವಜನಿಕಗೊಳಿಸುವ ಸಾಧ್ಯತೆಯನ್ನು ನ್ಯಾಯಾಲಯ ತಳ್ಳಿಹಾಕಲಿಲ್ಲ. ಪಾರದರ್ಶಕತೆಯು ಉತ್ತಮ ನಡೆ ಎಂದು ಈ ವೇಳೆ ನ್ಯಾಯಾಲಯ ಅಭಿಪ್ರಾಯಪಟ್ಟಿತು.

Kannada Bar & Bench
kannada.barandbench.com