ದೇಶದಲ್ಲಿರುವವರು ಇಲ್ಲಿನ ಸಂಸ್ಕೃತಿಯಂತೆ ನಡೆದುಕೊಳ್ಳಲಿ: ಮತಾಂತರ ಕುರಿತಾದ ಪಿಐಎಲ್ ವಿಚಾರಣೆ ವೇಳೆ ಸುಪ್ರೀಂ ಅಭಿಪ್ರಾಯ
ಔದಾರ್ಯದ ಸೋಗಿನಲ್ಲಿ ನಡೆಯುವ ಮತಾಂತರದ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದ್ದು ಇಂತಹ ಸಂದರ್ಭಗಳಲ್ಲಿ ಔದಾರ್ಯ ತೋರುವ ವ್ಯಕ್ತಿಗಳ ಉದ್ದೇಶವನ್ನು ಪರಿಶೀಲಿಸಬೇಕಾಗುತ್ತದೆ ಎಂದಿತು [ಅಶ್ವಿನಿ ಕುಮಾರ್ ಉಪಾಧಯ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಭಾರತದಲ್ಲಿರುವವರು ಅದರ ಸಂಸ್ಕೃತಿ ಮತ್ತು ಸಂವಿಧಾನದ ಪ್ರಕಾರ ಕಾರ್ಯನಿರ್ವಹಿಸಬೇಕು ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ ಹೇಳಿತು.
ಈ ಹಿನ್ನೆಲೆಯಲ್ಲಿ ಬಲವಂತದ ಮತಾಂತರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣಾರ್ಹತೆ ಪ್ರಶ್ನಿಸಿದ್ದ ಆಕ್ಷೇಪಣೆಗಳನ್ನು ನ್ಯಾಯಾಲಯ ತಿರಸ್ಕರಿಸಿತು.
"ಯಾರು ಸರಿ ಅಥವಾ ತಪ್ಪು ಎಂದು ನೋಡಲು ನಾವು ಇಲ್ಲಿಲ್ಲ, ಬದಲಿಗೆ ತಪ್ಪುಗಳನ್ನು ಸರಿಪಡಿಸಲು ಇದ್ದೇವೆ. ಯಾರಾದರೂ ಮತಾಂತರ ಮಾಡುವ ಸಲುವಾಗಿ ಔದಾರ್ಯ ತೋರಿದರೆ ಅವರ ಉದ್ದೇಶವನ್ನು ಅರಿಯಬೇಕು. ಇದನ್ನು ಪ್ರತಿಕೂಲವಾಗಿ ತೆಗೆದುಕೊಳ್ಳಬೇಡಿ. ಇದು ತುಂಬಾ ಗಂಭೀರವಾದ ವಿಷಯ. ಭಾರತದಲ್ಲಿ ಇರುವ ಎಲ್ಲರೂ ದೇಶದ ಸಂಸ್ಕೃತಿಯಂತೆ ವರ್ತಿಸಬೇಕು, ”ಎಂದು ನ್ಯಾಯಮೂರ್ತಿ ಶಾ ತಿಳಿಸಿದರು.
ತಮ್ಮಲ್ಲಿ ಜಾರಿಗೆ ತಂದಿರುವ ಮತಾಂತರ ತಡೆ ಕಾನೂನಿನ ಬಗ್ಗೆ ರಾಜ್ಯಗಳಿಂದ ಮಾಹಿತಿ ಪಡೆದ ನಂತರ ಪ್ರತಿ-ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ ಪೀಠ ಅಂತಿಮ ವಿಲೇವಾರಿಗಾಗಿ ಪ್ರಕರಣವನ್ನು ಡಿಸೆಂಬರ್ 12ಕ್ಕೆ ವಿಚಾರಣೆಗಾಗಿ ನಿಗದಿಪಡಿಸಿತು.
ಮತಾಂತರ ತಡೆಯಲು ಕೇಂದ್ರ ಸರ್ಕಾರ ವಿಫಲವಾಗಿದ್ದು ಬಲವಂತದ ಮತಾಂತರ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿ ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಉಪಾಧ್ಯಾಯ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಬಲವಂತದ ಧಾರ್ಮಿಕ ಮತಾಂತರವು ದೇಶದ ಭದ್ರತೆ ಮತ್ತು ನಾಗರಿಕರ ಆತ್ಮಸಾಕ್ಷಿಯ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಅತ್ಯಂತ ಗಂಭೀರ ವಿಷಯವಾಗಿದೆ ಎಂದು ಪ್ರಕರಣದ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಗಮನಿಸಿತ್ತು.
ಇಂದಿನ ವಿಚಾರಣೆಯಲ್ಲಿ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ಕೇಂದ್ರ ಸರ್ಕಾರವು ರಾಜ್ಯಗಳಿಂದ ಡೇಟಾವನ್ನು ಸಂಗ್ರಹಿಸಿದೆ ಎಂದು ಹೇಳಿದರು. ಉಪಾಧ್ಯಾಯ ಪರ ವಾದ ಮಂಡಿಸಿದ ಹಿರಿಯ ವಕೀಲ ಅರವಿಂದ ದಾತಾರ್, ಪ್ರತಿಕ್ರಿಯಿಸಲು ಬಯಸುವ ರಾಜ್ಯಗಳಿಗೆ ಅವಕಾಶ ನೀಡಬೇಕು, ಆದರೆ ಎಲ್ಲರ ಪ್ರತಿಕ್ರಿಯೆಗೆ ಕಾಯದೆ ನಿರ್ದೇಶನಗಳನ್ನು ನೀಡಬಹುದು ಎಂದು ಹೇಳಿದರು.
"ಅದಕ್ಕಾಗಿಯೇ ನಾವು ನೋಟಿಸ್ ನೀಡಲಿಲ್ಲ, ಏಕೆಂದರೆ ನಾವು ಪ್ರಕರಣವನ್ನು ವಿಳಂಬ ಮಾಡಲು ಬಯಸುವುದಿಲ್ಲ. ಇಲ್ಲದಿದ್ದರೆ ಕೆಲವು ರಾಜ್ಯಗಳು ಸಮಯ ಕೇಳುತ್ತವೆ" ಎಂದು ನ್ಯಾಯಮೂರ್ತಿ ಶಾ ಪ್ರತಿಕ್ರಿಯಿಸಿದರು.
ಹಿರಿಯ ವಕೀಲರಾದ ರಾಜು ರಾಮಚಂದ್ರನ್ ಮತ್ತು ಸಿ ಯು ಸಿಂಗ್ ಅವರು ಕ್ರಮವಾಗಿ ಅರ್ಚಕ ಮತ್ತು ವಿಚಾರವಾದಿ ಸಂಘಟನೆಯ ಪರವಾಗಿ ವಾದ ಮಂಡಿಸಿ, ಪ್ರಕರಣದಲ್ಲಿ ಪಕ್ಷಕಾರರನ್ನಾಗಿ ಮಾಡಿಕೊಳ್ಳುವಂತೆ ಕೋರಿದರು. ಆದರೆ ಪ್ರಕರಣವು ಅಂತಿಮ ವಿಲೇವಾರಿ ಹಂತದಲ್ಲಿರುವುದರಿಂದ ವಿಚಾರಣಾರ್ಹತೆ ಬಗ್ಗೆ ಆಲಿಸುವುದಿಲ್ಲ ಎಂದ ನ್ಯಾಯಾಲಯ ವಕೀಲರಿಗೆ ನ್ಯಾಯಾಲಯಕ್ಕೆ ಸಹಾಯ ಮಾಡುವಂತೆ ಸೂಚಿಸಿತು. ಛತ್ತೀಸ್‌ಗಢ ಕ್ರಿಶ್ಚಿಯನ್ ಫೋರಂ ಪರವಾಗಿ ಹಿರಿಯ ವಕೀಲ ಸಂಜಯ್ ಹೆಗ್ಡೆ ವಾದ ಮಂಡಿಸಿದರು