ಅಪ್ರಾಪ್ತೆಗೆ ಆ್ಯಸಿಡ್ ಹಾಕುವ ಬೆದರಿಕೆ: ಆರೋಪಿ ಯುವಕನಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

ಆರೋಪಿಯು 14 ವರ್ಷದ ಸಂತ್ರಸ್ತೆಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಪ್ರೀತಿ ಮಾಡಲು ಒಪ್ಪದಿದ್ದರೆ ಆ್ಯಸಿಡ್ ಹಾಕುವುದಾಗಿ ಬೆದರಿಕೆ ಹಾಕಿದ್ದ.
Karnataka High Court
Karnataka High Court
Published on

ಪ್ರೀತಿಸದಿದ್ದರೆ ಆ್ಯಸಿಡ್ ಹಾಕುವುದಾಗಿ ಅಪ್ರಾಪ್ತ ಯುವತಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಯವಕನೊಬ್ಬನಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಜಾಮೀನು ನಿರಾಕರಿಸಿದೆ.

ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹೊಸಕಲ್‌ ನಾಯಕನಕಹಳ್ಳಿ ನಿವಾಸಿ ಪವನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಂ ಜಿ ಉಮಾ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

ಸಂತ್ರಸ್ತೆ ಶಾಲೆ ಹೋಗುತ್ತಿರುವ ವೇಳೆ ಆರೋಪಿ ಹಿಂಬಾಲಿಸಿಕೊಂಡು ಹೋಗಿ ಬಲವಂತವಾಗಿ ತಡೆದು ನಿಲ್ಲಿಸುತ್ತಿದ್ದ. ಪ್ರೀತಿ ಮಾಡುವಂತೆ ಒತ್ತಾಯಿಸುತ್ತಿದ್ದ. ತನ್ನೊಂದಿಗೆ ಸಹಕರಿಸದಿದ್ದರೆ ಆ್ಯಸಿಡ್ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದ. ಸಂತ್ರಸ್ತೆಯು ಆರೋಪಿ ಜಾಮೀನು ಮಂಜೂರಾತಿಗೆ ಆಕ್ಷೇಪಣೆ ರವಾನಿಸಿದ್ದಾರೆ. ಆರೋಪಿ ಸಹ ತನ್ನದೇ ಗ್ರಾಮದ ನಿವಾಸಿಯಾಗಿದ್ದಾನೆ. ಆತ ಜಾಮೀನಿನ ಮೇಲೆ ಬಿಡುಗಡೆಯಾದರೆ ತನ್ನ ಮೇಲೆ ಆ್ಯಸಿಡ್ ಎರಚಬಹುದು. ತನಗೆ ಮತ್ತು ತನ್ನ ಕುಟುಂಬ ಸದಸ್ಯರಿಗೆ ಜೀವ ಬೆದರಿಕೆಯಿದೆ ಎಂದು ಆಕ್ಷೇಪಣೆಯಲ್ಲಿ ಸಂತ್ರಸ್ತೆ ಆತಂಕ ವ್ಯಕ್ತಪಡಿಸಿದ್ದಾರೆ. ಆಕೆಯ ಭಯ ನ್ಯಾಯಸಮ್ಮತವಾಗಿದೆ. ಒಂದೊಮ್ಮೆ ಆರೋಪಿ ಆ್ಯಸಿಡ್ ದಾಳಿ ಮಾಡಿದರೆ, ಅದರಿಂದ ಉಂಟಾಗುವ ನಷ್ಟವನ್ನು ಭರಿಸಲಾಗದು. ಆದ್ದರಿಂದ, ಜಾಮೀನು ನೀಡಲು ಇದು ಅರ್ಹ ಪ್ರಕರಣವಲ್ಲ ಎಂದು ನ್ಯಾಯಾಲಯವು ಅರ್ಜಿ ವಜಾಗೊಳಿಸಿದೆ.

ಆರೋಪಿ ಪರ ವಕೀಲರು “ಆರೋಪಿಯು ಯಾವುದೇ ತಪ್ಪು ಮಾಡಿಲ್ಲ. ಆತನನ್ನು ಆಧಾರವಿಲ್ಲದೆ ಪ್ರಕರಣದಲ್ಲಿ ಸಿಲುಕಿಸಲಾಗಿದೆ. 2022ರ ಜೂನ್‌ 12ರಿಂದ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಬಾಲಕಿಯನ್ನು ಬಲವಂತವಾಗಿ ತಡೆದು ನಿಲ್ಲಿಸಿದ, ಮರ್ಯಾದೆ ಕಳೆದ ಮತ್ತು ಜೀವ ಬೆದರಿಕೆ ಹಾಕಿದ ಆರೋಪವಿದೆ. ಆ ಅಪರಾಧ ಕೃತ್ಯಕ್ಕೆ ಜೀವಾವಧಿ ಶಿಕ್ಷೆ ಅಥವಾ ಮರಣ ದಂಡನೆ ಶಿಕ್ಷೆ ವಿಧಿಸುವ ಅವಕಾಶವೇನೂ ಇಲ್ಲ. ಈಗಾಗಲೇ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ದೋಷಾರೋಪ ಪಟ್ಟಿ ಸಹ ಸಲ್ಲಿಕೆಯಾಗಿದೆ. ಆದ್ದರಿಂದ, ಅರ್ಜಿದಾರನ ಬಂಧನದ ಅವಶ್ಯಕತೆ ಇಲ್ಲವಾಗಿದೆ. ಬಂಧನದಲ್ಲೇ ಮುಂದುವರಿಸುವುದು ಆರೋಪಿಗೆ ಪೂರ್ವ ವಿಚಾರಣಾ ಶಿಕ್ಷೆ ವಿಧಿಸಿದಂತಾಗಲಿದ್ದು, ಜಾಮೀನು ನೀಡಬೇಕು” ಎಂದು ಕೋರಿದರು.

ಇದಕ್ಕೆ ಆಕ್ಷೇಪಿಸಿದ ಸರ್ಕಾರಿ ವಕೀಲರು “ಅರ್ಜಿದಾರನ ಮೇಲಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ. ಒಂದೊಮ್ಮೆ ಆರೋಪಿಯನ್ನು ಜಾಮೀನು ಮೇಲೆ ಬಿಡುಗಡೆ ಮಾಡಿದರೆ, ಆತ ತನ್ನ ಮೇಲೆ ಆ್ಯಸಿಡ್ ದಾಳಿ ಮಾಡಬಹುದು ಎಂಬ ಆತಂಕವನ್ನು ಸಂತ್ರಸ್ತೆ ವ್ಯಕ್ತಪಡಿಸಿದ್ದಾರೆ. ಆರೋಪಿಯಿಂದ ಸಂತ್ರಸ್ತೆಗೆ ಜೀವ ಬೆದರಿಕೆಯಿದೆ. ಜೀವ ರಕ್ಷಣೆ ಮಾಡಿಕೊಳ್ಳುವುದಕ್ಕಾಗಿ ಸಂತ್ರಸ್ತೆಯು ಕುಟುಂಬ ಸಮೇತ ಗ್ರಾಮವನ್ನು ಬಿಟ್ಟು ತೆರಳುವ ಸಾಧ್ಯತೆಯಿದೆ. ಹೀಗಾಗಿ, ಆರೋಪಿಗೆ ಜಾಮೀನು ನೀಡಬಾರದು” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಆರೋಪಿಯು 14 ವರ್ಷದ ಸಂತ್ರಸ್ತೆಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಪ್ರೀತಿ ಮಾಡಲು ಒಪ್ಪದಿದ್ದರೆ ಆ್ಯಸಿಡ್ ಎರಚುವುದಾಗಿ ಬೆದರಿಕೆ ಹಾಕಿದ್ದ. ಈ ಸಂಬಂಧ ಸಂತ್ರಸ್ತೆ ನೀಡಿದ ದೂರು ಆಧರಿಸಿ ಅರಸೀಕೆರೆ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಹೀಗಾಗಿ, ಆರೋಪಿ ಯುವಕನಿಗೆ ಹಾಸನದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿಯು ಹೈಕೋರ್ಟ್ ಮೇಟ್ಟಿಲೇರಿದ್ದ.

Kannada Bar & Bench
kannada.barandbench.com