ದೀಪಾವಳಿ ಹಬ್ಬದ ಪ್ರಯುಕ್ತ ಕರ್ನಾಟಕ ಹೈಕೋರ್ಟ್‌ಗೆ ಸೋಮವಾರ ಮತ್ತು ಬುಧವಾರ ರಜೆ ಇದ್ದು, ಮಧ್ಯದಲ್ಲಿ ಬರುವ ಮಂಗಳವಾರವೂ (ಅಕ್ಟೋಬರ್ 25ರಂದು) ರಜೆ ಘೋಷಿಸಲಾಗಿದೆ. ಆದರೆ, ವಿಚಾರಣಾಧೀನ ನ್ಯಾಯಾಲಯಗಳಿಗೆ ರಜೆ ನೀಡಲಾಗಿಲ್ಲ. ಇದನ್ನು ಸರಿಪಡಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರಿಗೆ ಬೆಂಗಳೂರು ವಕೀಲರ ಸಂಘವು (ಎಎಬಿ) ಶುಕ್ರವಾರ ಮನವಿ ಸಲ್ಲಿಸಿದೆ.
ಅಕ್ಟೋಬರ್ 25ನೇ ತಾರೀಖಿನಂದು ಪ್ರಕರಣಗಳಲ್ಲಿ ಭಿನ್ನ ನಿಲುವು ತಳೆಯದಂತೆ ವಿಚಾರಣಾಧೀನ ನ್ಯಾಯಾಲಯಗಳಿಗೆ ಸೂಚನೆ ನೀಡಲಾಗುವುದು. ಈ ಸಂಬಂಧ ಶನಿವಾರದೊಳಗೆ ಅಧಿಸೂಚನೆ ಅಥವಾ ಸುತ್ತೋಲೆ ಹೊರಡಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿಗಳು ಭರವಸೆ ನೀಡಿದ್ದಾರೆ ಎಂದು ಎಎಬಿ ತಿಳಿಸಿದೆ.
ಹೈಕೋರ್ಟ್‌ಗೆ ಮಂಗಳವಾರ ರಜೆ ನೀಡಿ, ವಿಚಾರಣಾಧೀನ ನ್ಯಾಯಾಲಯಗಳಿಗೆ ಕರ್ತವ್ಯ ದಿನವನ್ನಾಗಿಸಲಾಗಿದೆ. ಇದರಿಂದ ವಿಚಾರಣಾಧೀನ ನ್ಯಾಯಾಲಯಗಳಲ್ಲಿ ಪ್ರಾಕ್ಟೀಸ್ ಮಾಡುವ ಸಾವಿರಾರು ವಕೀಲರು ಮತ್ತು ನ್ಯಾಯಾಂಗದ ಸಿಬ್ಬಂದಿಗೆ ದೀಪಾವಳಿ ಆಚರಣೆಗೆ ಅಡಚಣೆ ಉಂಟು ಮಾಡಲಾಗಿದೆ. ಹೀಗಾಗಿ, ವಿಚಾರಣಾಧೀನ ನ್ಯಾಯಾಲಯಗಳ ವಿಚಾರದಲ್ಲೂ ಹೈಕೋರ್ಟ್‌ಗೆ ಅನ್ವಯಿಸಿರುವ ನಿಲುವು ತಳೆಯಬೇಕು ಎಂದು ಎಎಬಿ ಮನವಿಯಲ್ಲಿ ಕೋರಿದೆ.
ಹೈಕೋರ್ಟ್‌ಗೆ ಬೇರೆಯದೇ ನಿಲುವು, ವಿಚಾರಣಾಧೀನ ನ್ಯಾಯಾಲಯಕ್ಕೆ ಬೇರೆಯ ನಿಲುವು ಅನುಸರಿಸಲಾಗುತ್ತಿದೆ ಎಂಬ ಭಾವನೆ ವಕೀಲರ ಸಮುದಾಯದಲ್ಲಿದೆ. ಇದನ್ನು ಹೋಗಲಾಡಿಸಬೇಕು. ಅಂದು ನೀಡುವ ರಜೆಗೆ ಬದಲಿಗೆ ಎರಡನೇ ಅಥವಾ ನಾಲ್ಕನೇ ಶನಿವಾರದಂದು ಕರ್ತವ್ಯದ ದಿನವನ್ನಾಗಿಸಬಹುದು ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಹೈಕೋರ್ಟ್‌ಗೆ ನೀಡಲಾಗುವ ರಜೆಗೆ ಅನುಗುಣವಾಗಿ ವಿಚಾರಣಾಧೀನ ನ್ಯಾಯಾಲಯಗಳಲ್ಲಿ ರಜೆ ನೀಡುವುದಕ್ಕೆ ಸಂಬಂಧಿಸಿದಂತೆ ರಜೆ ಪಟ್ಟಿ ನೀಡಿದರೆ ಮುಂದಿನ ವರ್ಷದ ಕ್ಯಾಲೆಂಡರ್ ರೂಪಿಸುವಾಗ ಅದನ್ನು ಪರಿಗಣಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿಗಳು ಭರವಸೆ ನೀಡಿದ್ದಾರೆ ಎಂದು ಎಎಬಿ ತಿಳಿಸಿದೆ.
ಮೆಮೊ ವಿಚಾರ ಉಲ್ಲೇಖ: ಮೆಮೊಗಳನ್ನು ಪೀಠದ ಮುಂದೆ ಇಡಲು ತಡ ಮಾಡಲಾಗುತ್ತಿದ್ದು, ಈ ಸಂಬಂಧ ರಿಜಿಸ್ಟ್ರಿಗೆ ಸೂಕ್ತ ನಿರ್ದೇಶನ ನೀಡುವಂತೆಯೂ ಎಎಬಿಯು ಮುಖ್ಯ ನ್ಯಾಯಮೂರ್ತಿಗಳಿಗೆ ಕೋರಿದೆ. ಸೂಕ್ತ ಸಮಯಕ್ಕೆ ಮೆಮೊಗಳನ್ನು ಪೀಠದ ಮುಂದೆ ಇಡದೇ ಇರುವುದರಿಂದ ಬೆಂಗಳೂರು ಪೀಠದಲ್ಲಿ ವಕೀಲರು ಮತ್ತು ದಾವೆದಾರರಿಗೆ ಸಮಸ್ಯೆಯಾಗುತ್ತಿದೆ. ಇದನ್ನು ಸಿಜೆ ಅವರ ಗಮನಕ್ಕೆ ತರಲಾಗಿದೆ. ಈ ವಿಚಾರದಲ್ಲೂ ಪರಿಹಾರ ಸೂಚಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಭರವಸೆ ನೀಡಿದ್ದಾರೆ ಎಂದು ಎಎಬಿ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ತಿಳಿಸಿದ್ದಾರೆ.