ಮೂರು ಸರ್ಕಾರಗಳು ಬಂದು ಹೋಗಿವೆ; ಸೌಲಭ್ಯದಲ್ಲಿ ಮಾತ್ರ ಸುಧಾರಣೆಯಾಗಿಲ್ಲ: ನ್ಯಾ. ಕಮಲ್‌ ಅತೃಪ್ತಿ

ಇದು ಗಂಭೀರ ರಹಿತ ನಡೆ. ಒಂದಷ್ಟು ಗಂಭೀರತೆ, ಕಳಕಳಿ ತೋರಿ. ದಯವಿಟ್ಟು ಇದನ್ನು ಸಮರ್ಥಿಸಬೇಡಿ. ಇದಕ್ಕಿಂತ ಬೇರೇನನ್ನೂ ನಾವು ಹೇಳಲಾಗದು. ನಾವು ಖಿನ್ನರಾಗಿದ್ದೇವೆ ಎಂದ ನ್ಯಾಯಾಲಯ.
Karnataka HC and Justice M G S Kamal
Karnataka HC and Justice M G S Kamal
Published on

ರಾಜ್ಯದ ಹಲವು ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಇಲ್ಲದಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರು “ಮೂರು ಸರ್ಕಾರಗಳು ಬಂದು ಹೋಗಿವೆ. ಆದರೆ, ಸೌಲಭ್ಯ ಮಾತ್ರ ಹೇಗಿತ್ತೋ ಹಾಗೆಯೇ ಇದೆ” ಎಂದು ಸುಧಾರಣೆ ಕಾಣದ ಶಾಲಾ ಮೂಲಸೌಕರ್ಯದ ಬಗ್ಗೆ ಮೌಖಿಕವಾಗಿ ಕಿಡಿಕಾರಿದರು.

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ-2009 ಮತ್ತು ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳ ಹಕ್ಕು ನಿಯಮಗಳ ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದಿರುವುದರಿಂದ ಅಪಾರ ಸಂಖ್ಯೆಯಲ್ಲಿ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಅವರನ್ನು ಒಳಗೊಂಡ ವಿಭಾಗೀಯ ಪೀಠವು ನಡೆಸಿತು.

“ಶಾಲೆಗಳಲ್ಲಿ ಕುಡಿಯುವ ನೀರು ಶೌಚಾಲಯ ಇಲ್ಲದಿರುವ ಪರಿಸ್ಥಿತಿಯನ್ನು ನೀವು (ಸರ್ಕಾರದ ವಕೀಲ) ಕಲ್ಪನೆ ಮಾಡಿಕೊಳ್ಳಿ. ನಾವು ಯಾವ ರೀತಿಯ ಮಕ್ಕಳನ್ನು ರೂಪಿಸುತ್ತಿದ್ದೇವೆ. ಯಾವ ರೀತಿಯ (ಮಾನವ) ಸಂಪನ್ಮೂಲವನ್ನು ಹೊರತರುತ್ತಿದ್ದೇವೆ. ಯಾವ ರೀತಿಯ ಸಮಾಜವನ್ನು ರೂಪಿಸುತ್ತಿದ್ದೇವೆ? ಯಾರನ್ನು ಶಪಿಸಬೇಕು? ಯಾರು ಜವಾಬ್ದಾರಿ? ಇದಕ್ಕೆಲ್ಲಾ ಯಾರು ಹೊಣೆ? ಇದನ್ನು ನಾವು ʼಚಲ್ತಾ ಹೈʼ ಎಂಬ ರೀತಿ ಒಪ್ಪಿಕೊಳ್ಳಬಹುದೇ? ಶಾಲೆಯಲ್ಲಿ ಕುಡಿಯುವ ನೀರಿಲ್ಲದಿರಲಿ, ನೀರನ್ನು ತಲೆಯ ಮೇಲೆ ಹೊತ್ತು ತರಲಿ, ಶೌಚಾಲಯ ಇಲ್ಲದಿದ್ದರೂ ಪರವಾಗಿಲ್ಲ... ಹೀಗಾದರೆ ಹೇಗೆ. ನಾವು ಆಘಾತ ವ್ಯಕ್ತಪಡಿಸುತ್ತಿಲ್ಲ, ನೋವನ್ನು ಪ್ರಕಟಿಸುತ್ತಿದ್ದೇವೆ. ಈ ಅರ್ಜಿಯು 2013ರಿಂದ ನ್ಯಾಯಾಲಯದಲ್ಲಿ ಬಾಕಿ ಇದೆ. ಮೂರು ಸರ್ಕಾರಗಳು ಬಂದು ಹೋಗಿವೆ. ಆದರೆ, ಸೌಲಭ್ಯ ಮಾತ್ರ ಹೇಗಿತ್ತೋ ಹಾಗೆಯೇ ಇದೆ. ಇರುವ ಅನುದಾನದಲ್ಲಿ ಸೌಕರ್ಯ ಕಲ್ಪಿಸುತ್ತೇವೆ ಎಂದು ನೀವು ಹೇಳುತ್ತಿದ್ದೀರಿ. ಇದು ಗಂಭೀರ ರಹಿತ ನಡೆ. ಒಂದಷ್ಟು ಗಂಭೀರತೆ, ಕಳಕಳಿ ತೋರಿ. ದಯವಿಟ್ಟು ಇದನ್ನು ಸಮರ್ಥಿಸಬೇಡಿ. ಇದಕ್ಕಿಂತ ಬೇರೇನನ್ನೂ ನಾವು ಹೇಳಲಾಗದು. ನಾವು ಖಿನ್ನರಾಗಿದ್ದೇವೆ” ಎಂದು ಬೇಸರಿಸಿದರು.

ಈ ಮಧ್ಯೆ, ಮುಖ್ಯ ನ್ಯಾಯಮೂರ್ತಿ ವರಾಳೆ ಅವರು “ಇದು ನಮಗೆ ನೋವು ಉಂಟು ಮಾಡಿದೆ. ಕಳೆದ ವಿಚಾರಣೆಯಲ್ಲಿ ಒಂದು ಕಡೆ ಮಕ್ಕಳು ಶುದ್ಧ ಕುಡಿಯುವ ನೀರು, ಗ್ಯಾಜೆಟ್‌, ಆಧುನಿಕ ತಂತ್ರಜ್ಞಾನ ಸೌಲಭ್ಯ ಹೊಂದಿರುವ ಅದೃಷ್ಟವಂತರ ಬಗ್ಗೆ ಹೇಳಿದ್ದೇವೆ. ಇಂಥ ಶಾಲೆಗಳಲ್ಲಿ ತಮ್ಮ ಮಕ್ಕಳು ಕಲಿಯುವುದು ಪೋಷಕರ ಕನಸಾಗಿದೆ. ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯೊಬ್ಬನಿಗೆ ಇಂಥ ಸೌಕರ್ಯ ಕಲ್ಪಿಸಿದರೆ ಆತ ದೇಶದ ಬೆಳವಣಿಗೆಯಲ್ಲಿ ಭಾಗವಹಿಸಬಹುದು. ಅವರಿಗೆ ಇದನ್ನು ನಿರಾಕರಿಸಿದರೆ ಅದು ರಾಷ್ಟ್ರೀಯ ನಷ್ಟ” ಎಂದು ಮೌಖಿಕವಾಗಿ ಹೇಳಿದರು.

Kannada Bar & Bench
kannada.barandbench.com