

ಕೋಗಿಲು ಬಡಾವಣೆಯಲ್ಲಿನ ವಾಸಿಂ ಮತ್ತು ಫಕೀರ್ ಕಾಲೊನಿಯಲ್ಲಿ ಮನೆ ಕಳೆದುಕೊಂಡಿರುವವರಿಗೆ ತಾತ್ಕಾಲಿಕವಾಗಿ ಸೂರಿನ ವ್ಯವಸ್ಥೆ ಮಾಡಲು ಮೂರು ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ರಾಜ್ಯ ಸರ್ಕಾರವು ಬುಧವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.
ಅಕ್ರಮವಾಗಿ ತೆರವು ಕಾರ್ಯಾಚರಣೆ ನಡೆಸಿರುವುದರಿಂದ ಅದನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಕೋಗಿಲು ಬಡಾವಣೆ ನಿವಾಸಿಗಳಾದ ಜೈಬಾ ತಬಸ್ಸುಮ್, ರೆಹನಾ ಮತ್ತು ಆರೀಫ್ ಬೇಗಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠ ನಡೆಸಿತು.
ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಒತ್ತುವರಿ ತೆರವಿನ ವೇಳೆ ಹಾನಿಗೊಳಗಾಗಿರುವ ಫಕೀರ್ ಮತ್ತು ವಾಸಿಂ ಕಾಲೊನಿಯ ನಿವಾಸಿಗಳಿಗೆ ತಾತ್ಕಾಲಿಕವಾಗಿ ಪುನರ್ವಸತಿ ಕಲ್ಪಿಸಲು ಮೂರು ಸ್ಥಳಗಳನ್ನು ಗುರುತಿಸಲಾಗಿದೆ. ಆಹಾರ ಮತ್ತು ಇತರೆ ಸೌಲಭ್ಯಗಳನ್ನು ಅವರಿಗೆ ಕಲ್ಪಿಸಲಾಗುತ್ತಿದೆ” ಎಂದರು.
“ಒತ್ತುವರಿಯಾಗಿರುವ ಪ್ರದೇಶವು ಸರ್ಕಾರದ ಜಾಗವಾಗಿದ್ದು, ಕಟ್ಟಡಗಳ ಧ್ವಂಸ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಮಾರ್ಗಸೂಚಿಯು ಇದಕ್ಕೆ ಅನ್ವಯಿಸುವುದಿಲ್ಲ. ಈ ನಿರ್ದಿಷ್ಟ ಜಾಗವು ಕ್ವಾರಿ ಪ್ರದೇಶವಾಗಿದ್ದು, ಆನಂತರ ಇದನ್ನು ನೀರಿನ ಟ್ಯಾಂಕ್ ಪ್ರದೇಶವನ್ನಾಗಿ ಬಳಕೆ ಮಾಡಲಾಗಿತ್ತು. ಈ ನಡುವೆ ಸಂತ್ರಸ್ತರು ಮನೆ ನಿರ್ಮಿಸಿದ್ದರಿಂದ ಆ ನೀರು ಕಲುಷಿತಗೊಂಡಿತ್ತು. ಇದು ಕೊಳಚೆ ಪ್ರದೇಶವಲ್ಲ” ಎಂದರು.
ಆಗ ಪೀಠವು “ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಅನ್ವಯಿಸದೇ ಇರಬಹುದು. ಆದರೆ, ಬೇರೆ ತೀರ್ಪುಗಳಿವೆ. ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವಾಗ ಕೆಲವು ಪ್ರಕ್ರಿಯೆ ಪಾಲಿಸಬೇಕಾಗುತ್ತದೆ. 28 ವರ್ಷಗಳಿಂದ ಅಲ್ಲಿ ನೆಲೆಸಿರುವುದಾಗಿ ಅರ್ಜಿದಾರರು ಹೇಳುತ್ತಿದ್ದಾರೆ” ಎಂದಿತು.
ಅದಕ್ಕೆ ಎಜಿ ಶೆಟ್ಟಿ ಅವರು “ಈ ಹೇಳಿಕೆ ವಾಸ್ತವಿಕ ಅಂಶಗಳಿಗೆ ವಿರುದ್ಧವಾಗಿದೆ. ಯಾವಾಗ ಪ್ರತಿಯೊಂದು ಮನೆ ನಿರ್ಮಾಣವಾಗಿವೆ ಎಂದು ತೋರಿಸಲು ನಮ್ಮ ಬಳಿ ಉಪಗ್ರಹ ಚಿತ್ರಗಳಿವೆ” ಎಂದರು.
ಈ ಹಂತದಲ್ಲಿ ಅರ್ಜಿದಾರರ ಪರ ವಕೀಲರು “2014ರಲ್ಲಿ ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿರುವ ಹಿಂದಿನ ಬಿಬಿಎಂಪಿಯು ಸ್ಥಳ ಹಂಚಿಕೆ ಮಾಡಿದೆ. ಕಾರ್ಯಾಚರಣೆಯಲ್ಲಿ ನಿರ್ಗತಿಕರಾಗಿರುವ 300 ಕುಟುಂಬಗಳ 3,000 ಮಂದಿಗೆ ಮೂಲಸೌಕರ್ಯ ಕಲ್ಪಿಸಬೇಕು” ಎಂದು ಮನವಿ ಮಾಡಿದರು.
ಆಗ ಪೀಠವು “ಒಕ್ಕಲೆಬ್ಬಿಸಿರುವುದಕ್ಕೆ ಸಂಬಂಧಿಸಿದಂತೆ ಸರ್ಕಾರವು ಮೂರು ಕಡೆ ಪುನರ್ವಸತಿ ಕಲ್ಪಿಸಲು ಸ್ಥಳ ಗುರುತಿಸಿದ್ದು, ಅಲ್ಲಿ ನೆಲೆಸಲು ಅರ್ಜಿದಾರರಿಗೆ ಅವಕಾಶವಿದೆ ಎಂದು ಸರ್ಕಾರ ನೀಡಿರುವ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು. ಹೀಗಾಗಿ, ಮಧ್ಯಂತರ ಕೋರಿಕೆಯ ಪ್ರಶ್ನೆ ಉದ್ಭವಿಸದು” ಎಂದರು.
ಇದಕ್ಕೆ ಅರ್ಜಿದಾರರ ಪರ ವಕೀಲರು “ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವುದಕ್ಕೂ ಮುನ್ನ ಯಾವುದೇ ರೀತಿಯ ನೋಟಿಸ್ ನೀಡಲಾಗಿಲ್ಲ. ಸಹಜ ನ್ಯಾಯ ತತ್ವ ಪಾಲಿಸಲಾಗಿಲ್ಲ” ಎಂದರು. ಈ ನಡುವೆ ಪೀಠವು “ಅರ್ಜಿದಾರರಿಗೆ ಯಾವ ರೀತಿಯ ಮಧ್ಯಂತರ ಪರಿಹಾರ ಬೇಕು” ಎಂದು ಕೇಳಿತು. ಇದಕ್ಕೆ ಅರ್ಜಿದಾರರ ಪರ ವಕೀಲರು “ಆಹಾರ ಮತ್ತು ಹೊದಿಕೆ ಒದಗಿಸಬೇಕು” ಎಂದರು.
ಇದನ್ನು ಆಲಿಸಿದ ಪೀಠವು ಸರ್ಕಾರ, ಬಿಬಿಎಂಪಿ ಮತ್ತು ಇತರೆ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ತಾತ್ಕಾಲಿಕ ಪುನರ್ವಸತಿಗೆ ಪರ್ಯಾಯ ಜಾಗ ಒದಗಿಸಲಾಗುವುದು ಎಂಬ ಅಡ್ವೊಕೇಟ್ ಜನರಲ್ ಹೇಳಿಕೆ ದಾಖಲಿಸಿಕೊಂಡಿತು. ಅಲ್ಲದೇ, ವಿಸ್ತೃತವಾದ ಆಕ್ಷೇಪಣೆ ಹಾಗೂ ಸಮಗ್ರವಾದ ಅಫಿಡವಿಟ್ ಸಲ್ಲಿಸಲು ನಿರ್ದೇಶಿಸಿ, ವಿಚಾರಣೆಯನ್ನು ಜನವರಿ 22ಕ್ಕೆ ಮುಂದೂಡಿತು.
ಡಿಸೆಂಬರ್ 20ರಂದು ಬಿಬಿಎಂಪಿಯು ಒತ್ತುವರಿ ತೆರವು ಪ್ರಕ್ರಿಯೆ ಆರಂಭಿಸಿದ್ದು, 300 ಮನೆಗಳನ್ನು ಧ್ವಂಸಗೊಳಿಸಲಾಗಿತ್ತು. ಇದರಿಂದ 3,000 ಜನರು ನಿರ್ಗತಿಕರಾಗಿದ್ದಾರೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.