ದೇಶ ತೊರೆಯಲು ಸೂಚನೆ: ಬಲವಂತದ ಕ್ರಮಕೈಗೊಳ್ಳದಂತೆ ಪಾಕ್‌ನ ಮೂವರು ಮಕ್ಕಳಿಂದ ಹೈಕೋರ್ಟ್‌ಗೆ ಅರ್ಜಿ

ಮೂವರು ಮಕ್ಕಳಿಗೆ ಮಾನವೀಯ ಆಧಾರ ಮತ್ತು ಅನುಕಂಪದ ನೆಲೆಯಲ್ಲಿ ಹಾಗೂ ಪತಿಯಿಂದ ಪ್ರತ್ಯೇಕಗೊಂಡಿರುವ ಆಧಾರದಲ್ಲಿ ಎಲ್‌ಟಿವಿ/ವೀಸಾ ವಿಸ್ತರಣೆ ನೀಡಬೇಕು ಎಂದು ರಮ್ಸಾ ಜಹಾನ್‌ ಅವರು ಏಪ್ರಿಲ್‌ 29ರಂದು ಎಫ್‌ಆರ್‌ಒ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
High Court of Karnataka
High Court of Karnataka
Published on

ಪಹಲ್ಗಾಮ್‌ ಭಯೋತ್ಪಾದಕ ಕೃತ್ಯದ ನಂತರ ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳು ದೇಶ ತೊರೆಯಬೇಕೆಂಬ ಕೇಂದ್ರ ಸರ್ಕಾರದ ನಿರ್ದೇಶನದಿಂದ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ತಾಯಿ ಮತ್ತು ಪಾಕಿಸ್ತಾನದ ತಂದೆಗೆ ಜನಿಸಿದ ಮೂರು ಮಕ್ಕಳು ತಮಗೆ ಮಾನವೀಯತೆ ಮತ್ತು ಅನುಕಂಪದ ಆಧಾರದಲ್ಲಿ ಎಲ್‌ಟಿವಿ/ವೀಸಾ ವಿಸ್ತರಣೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಪಾಕಿಸ್ತಾನದ ಬಲೂಚಿಸ್ತಾನದ 8 ವರ್ಷದ ಕುಮಾರಿ ಬಿ ಬಿ ಯಾಮಿನಾ, 4 ವರ್ಷದ ಮಾಸ್ಟರ್‌ ಮುಹಮ್ಮದ್ ಮುದಾಸ್ಸಿರ್ ಮತ್ತು 3 ವರ್ಷದ ಮಾಸ್ಟರ್‌ ಮೊಹಮ್ಮದ್‌ ಯೂಸಫ್‌ ಅವರು ತಮ್ಮ ವಿರುದ್ಧ ಮೇ 15ರವರೆಗೆ ಬಲವಂತದ ಕ್ರಮ ಕೈಗೊಳ್ಳದಂತೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ಜಿ ಉಮಾ ಅವರ ರಜಾಕಾಲದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಮೈಸೂರು ಪೊಲೀಸ್‌ ಆಯುಕ್ತರು ಹಾಗೂ ವಿದೇಶಿಗರ ನೋಂದಣಿ ಅಧಿಕಾರಿಗೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌ ಪ್ರಕರಣದ ವಿಚಾರಣೆಯನ್ನು ಮೇ 8ಕ್ಕೆ ಮುಂದೂಡಿದೆ.

ಅರ್ಜಿದಾರ ಮಕ್ಕಳ ತಾಯಿ ಭಾರತದವರಾಗಿದ್ದು ಷರಿಯತ್‌ ಕಾನೂನಿನ ಪ್ರಕಾರ ಪಾಕಿಸ್ತಾನದ ಪ್ರಜೆಯನ್ನು ವಿವಾಹವಾಗಿದ್ದಾರೆ. ಅದಾಗ್ಯೂ, ಪಾಕಿಸ್ತಾನದ ಪೌರತ್ವ ಪಡೆಯದೆ ಭಾರತದ ಪ್ರಜೆಯಾಗಿ ಮುಂದುವರೆದಿದ್ದಾರೆ. ಆದರೆ, ಅರ್ಜಿದಾರರ ಮಕ್ಕಳು ಭಾರತೀಯ ತಾಯಿ ಮತ್ತು ಪಾಕಿಸ್ತಾನದ ತಂದೆಗೆ ಜನಿಸಿರುವುದರಿಂದ ಪಾಕಿಸ್ತಾನಿ ಪ್ರಜೆಗಳಾಗಿದ್ದು, ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲು ತಾಯಿಯೊಂದಿಗೆ 2025ರ ಜನವರಿ 4ರಂದು ವೀಸಾ ಪಡೆದು ಭಾರತಕ್ಕೆ ಬಂದಿದ್ದರು. ಬಳಿಕ 2025ರ ಜೂನ್‌ 18ರವರೆಗೂ ವೀಸಾ ಅವಧಿ ವಿಸ್ತರಿಸಲಾಗಿದೆ.

ಈ ನಡುವೆ, ಪಹಲ್ಗಾಮ್‌ನಲ್ಲಿ ದೇಶೀಯ ಪ್ರವಾಸಿಗರ ಮೇಲೆ ನಡೆದ ಗುಂಡಿನ ದಾಳಿಯ ಬಳಿಕ ಭಾರತದಲ್ಲಿ ವೀಸಾ ಪಡೆದು ನೆಲೆಸಿರುವ ಎಲ್ಲ ಪಾಕಿಸ್ತಾನದ ಪ್ರಜೆಗಳು ವೀಸಾ ಹಿಂದಿರುಗಿಸಬೇಕು. 2025ರ ಏಪ್ರಿಲ್‌ 30ರ ಅಂತ್ಯದೊಳಗಾಗಿ ಭಾರತ ತೊರೆಯಬೇಕು ಎಂದು ಕೇಂದ್ರ ಸರ್ಕಾರವು ಗಡುವು ವಿಧಿಸಿತು.

ಅದರಂತೆ ಅರ್ಜಿದಾರರು 2025ರ ಏಪ್ರಿಲ್‌ 28ರಂದು ಪಾಕಿಸ್ತಾನಕ್ಕೆ ತೆರಳಲು ಅಠ್ಠಾರಿ ಗಡಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಮಕ್ಕಳ ತಂದೆ ಮೊಹಮ್ಮದ್‌ ಫಾರೂಖ್ ತಮ್ಮ ದೇಶಕ್ಕೆ ಕರೆದೊಯ್ಯಲು ಬಾರದೇ ಅವರ ಹೊಣೆಗಾರಿಕೆ ನಿರಾಕರಿಸಿದ್ದಾರೆ. ತಮ್ಮ ಅಪ್ರಾಪ್ತ ಮಕ್ಕಳನ್ನು ಸ್ವೀಕರಿಸಲು ಯಾರೂ ಮುಂದೆ ಬಾರದ ಕಾರಣ ಭಾರತದ ಇಮಿಗ್ರೇಷನ್‌ ಅಧಿಕಾರಿಗಳು ಮಕ್ಕಳನ್ನು ಮತ್ತೆ ಮೈಸೂರಿಗೆ ಕಳುಹಿಸಿದ್ದಾರೆ.

ಹೀಗಾಗಿ, ತಮ್ಮ ಮೂವರು ಮಕ್ಕಳಿಗೆ ಮಾನವೀಯತೆಯ ಆಧಾರ ಮತ್ತು ಅನುಕಂಪದ ನೆಲೆಯಲ್ಲಿ ಹಾಗೂ ಪತಿಯಿಂದ ಪ್ರತ್ಯೇಕಗೊಂಡಿರುವ ಆಧಾರದಲ್ಲಿ ಎಲ್‌ಟಿವಿ/ವೀಸಾ ವಿಸ್ತರಣೆ ನೀಡಬೇಕು ಎಂದು ರಮ್ಸಾ ಜಹಾನ್‌ ಅವರು ಏಪ್ರಿಲ್‌ 29ರಂದು ಎಫ್‌ಆರ್‌ಒ ಅಧಿಕಾರಿಗೆ ಮನವಿ ಸಲ್ಲಿಸಿದ್ದರು. ಈ ಮನವಿ ಪರಿಗಣಿಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Kannada Bar & Bench
kannada.barandbench.com