ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಹೆಸರಿನ ಮೂರು ಹೊಸ ಅಪರಾಧಿಕ ಕಾನೂನುಗಳಿಗೆ ಇಂಗ್ಲಿಷ್ ಹೆಸರು ಉಳಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಮತ್ತು ಕೇರಳದ ಮಾಜಿ ರಾಜ್ಯಪಾಲ ಪಿ ಸದಾಶಿವಂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಚೆನ್ನೈನಲ್ಲಿ ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಾನೂನು ಶಾಲೆ ಆಯೋಜಿಸಿದ್ದ ಖಾಸಗಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಮತ್ತು ಭಾರತೀಯ ಸಾಕ್ಷ್ಯ ಕಾಯಿದೆ ಬದಲಿಗೆ ಪರಿಚಯಿಸಲಾಗಿರುವ ಮೂರು ಹೊಸ ಅಪರಾಧಿಕ ಕಾನೂನು ಇದೇ ಜುಲೈ 1ರಿಂದ ಜಾರಿಗೆ ಬರಲಿದೆ.
ಸಂವಿಧಾನದ 348ನೇ ಪರಿಚ್ಛೇದವನ್ನು ಪರಿಗಣಿಸಿ ದೇಶದಲ್ಲಿ ಅಪರಾಧಿಕ ಕಾನೂನುಗಳಿಗೆ ಈಗ ಇಡಲಾಗಿರುವ ಇಂಗ್ಲಿಷ್ ಹೆಸರುಗಳನ್ನು ಉಳಿಸಿಕೊಳ್ಳುವಂತೆ ಕೇಂದ್ರ ಸರ್ಕಾರ, ಕಾನೂನು ಸಚಿವರು ಮತ್ತು ಕಾನೂನು ಕಾರ್ಯದರ್ಶಿಯವರಿಗೆ ಅಧಿಕೃತ ಪತ್ರ ಕಳುಹಿಸುವುದಾಗಿ ನಿವೃತ್ತ ಸಿಜೆಐ ಹೇಳಿದರು. ಸುಪ್ರೀಂ ಕೋರ್ಟ್ ಮತ್ತು ಪ್ರತಿಯೊಂದು ಹೈಕೋರ್ಟ್‌ನಲ್ಲಿನ ಎಲ್ಲಾ ಪ್ರಕ್ರಿಯೆಗಳು ಇಂಗ್ಲಿಷ್‌ನಲ್ಲಿರಬೇಕು ಎಂದು ಸಂವಿಧಾನದ 348ನೇ ಪರಿಚ್ಛೇದ ಆದೇಶಿಸುತ್ತದೆ.
ದೇಶದ ಅಪರಾಧ ನ್ಯಾಯ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸಲು ಮತ್ತು ವ್ಯವಸ್ಥೆಯನ್ನು ಹೆಚ್ಚು ಜನಸ್ನೇಹಿಯನ್ನಾಗಿ ಮಾಡಲು ಮೂರು ಹೊಸ ಕಾನೂನುಗಳನ್ನು ರೂಪಿಸಲಾಗಿದೆ ಎಂದು ನ್ಯಾ. ಸದಾಶಿವಂ ಅವರು ತಮ್ಮ ಭಾಷಣದಲ್ಲಿ ಹೇಳಿದರು.
ಐಪಿಸಿ, ಸಿಆರ್‌ಪಿಸಿ ಮತ್ತು ಸಾಕ್ಷ್ಯ ಕಾಯಿದೆಗಳನ್ನು 1800ರ ದಶಕದಲ್ಲಿ ಬ್ರಿಟಿಷರು ರೂಪಿಸಿರುವ ಹಿನ್ನೆಲೆಯಲ್ಲಿ ಬದಲಾವಣೆಗಳು ಹೆಚ್ಚು ಅಗತ್ಯವಿದೆ ಎಂದು ಅವರು ಹೇಳಿದರು.
“ಒಂದೇ ಸಮಸ್ಯೆಯೆಂದರೆ ಈ ಹೆಸರುಗಳನ್ನು ಸರಾಗವಾಗಿ ಉಚ್ಚರಿಸಲು ಸಾಧ್ಯವಿಲ್ಲ. ನಿವೃತ್ತ ಸಿಜೆಐ ಆಗಿರುವ ನಾನು ಸಂಬಂಧಪಟ್ಟ ಕಾನೂನು ಸಚಿವರಿಗೆ, ಕಾನೂನು ಕಾರ್ಯದರ್ಶಿ ಮತ್ತು ಸರ್ಕಾರಕ್ಕೆ ಮನವಿಯನ್ನೂ ಮಾಡಲಿದ್ದೇನೆ. ಸಂವಿಧಾನದಲ್ಲಿ 348 ನೇ ವಿಧಿಯ ಅಡಿಯಲ್ಲಿ ಎಲ್ಲವನ್ನೂ ಇಂಗ್ಲಿಷ್ ಭಾಷೆಯಲ್ಲಿ ಉಲ್ಲೇಖಿಸಲು ಅವಕಾಶವಿದೆ ಎಂದು ನಾನು ಎತ್ತಿ ತೋರಿಸಲಿದ್ದೇನೆ ” ಎಂದು ಅವರು ಹೇಳಿದರು.
ಎರಡು ಬಾರಿ ಈ ಹೊಸ ಕಾನೂನುಗಳನ್ನು ಓದಿರುವುದಾಗಿ ತಿಳಿಸಿದ ಅವರು ಸಂಪೂರ್ಣವಾಗಿ ಅರ್ಥವಾಗದ ವಿವಿಧ ನಿಬಂಧನೆಗಳಿವೆ ಎಂದರು. ಈ ಹಿನ್ನೆಲೆಯಲ್ಲಿ ಹೊಸ ಕಾನೂನುಗಳ ಕುರಿತಂತೆ ನ್ಯಾಯಾಧೀಶರು ಮತ್ತು ಪೊಲೀಸರಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮದ್ರಾಸ್ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ (ಎಸಿಜೆ) ಆರ್ ಮಹದೇವನ್, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮತ್ತು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳು ಉಪಸ್ಥಿತರಿದ್ದರು.