ರಾಷ್ಟ್ರೀಯ ಕಂಪೆನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ ಪಂಚಸದಸ್ಯರ ಪೀಠದ ಮುಖ್ಯಸ್ಥರು, ಹಾಲಿ ಅಧ್ಯಕ್ಷರಾದ ನ್ಯಾಯಮೂರ್ತಿ ಬನ್ಸಿ ಲಾಲ್ ಭಟ್ ಅವರು ತಮ್ಮ ವಿರುದ್ಧ ಮಾಡಲಾದ ವೈಯಕ್ತಿಕ ಮತ್ತು ಅಹಿತಕರ ಟೀಕೆಗಳನ್ನು ತೊಡೆದುಹಾಕುವಂತೆ ನ್ಯಾಯಮಂಡಳಿಯ ತ್ರಿಸದಸ್ಯ ಪೀಠದ ಮೂವರು ಹಾಲಿ ಸದಸ್ಯರು ಸುಪ್ರೀಂಕೋರ್ಟ್ ಕದ ತಟ್ಟಿದ್ದಾರೆ.
ಅರ್ಜಿದಾರರಾದ, ನಿವೃತ್ತ ನ್ಯಾಯಮೂರ್ತಿ ಜರತ್ ಕುಮಾರ್ ಜೈನ್, ಬವಿಂದರ್ ಸಿಂಗ್ ಮತ್ತು ವಿಜಯ್ ಪ್ರತಾಪ್ ಸಿಂಗ್ ಎನ್‌ಸಿಎಲ್‌ಎಟಿಯ ತ್ರಿಸದಸ್ಯ ಪೀಠದ ಸದಸ್ಯರಾಗಿದ್ದು, ಪ್ರಕರಣದಲ್ಲಿ ಪಂಚಸದಸ್ಯರ ಪೀಠವನ್ನು ಉಲ್ಲೇಖಿಸಿದ್ದಾರೆ.
ವಿ ಪದ್ಮಕುಮಾರ್ ಮತ್ತು ಸ್ಟ್ರೆಸ್ಡ್ ಅಸೆಟ್ಸ್ ಸ್ಟೆಬಿಲೈಸೇಷನ್ ಫಂಡ್ ನಡುವಣ ಪ್ರಕರಣದಲ್ಲಿ ತ್ರಿಸದಸ್ಯ ಪೀಠ ʼಪಂಚ ಸದಸ್ಯರ ಪೀಠ ನೀಡಿದ್ದ ತೀರ್ಪು ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ವ್ಯತಿರಿಕ್ತವಾಗಿದೆ ಎಂದು ಸೆಪ್ಟೆಂಬರ್‌ನಲ್ಲಿ ಹೇಳಿತ್ತು. ಆದರೆ ತ್ರಿಸದಸ್ಯ ಪೀಠ ನೀಡಿದ್ದ ಆದೇಶವನ್ನು ಪಂಚಸದಸ್ಯರ ಪೀಠ ಅಮಾನ್ಯಗೊಳಿಸಿತ್ತು.
ಪಂಚಸದಸ್ಯರ ಪೀಠ ತೀರ್ಪಿನ ವೇಳೆ ತ್ರಿಸದಸ್ಯ ಪೀಠವನ್ನು ಉದ್ದೇಶಿಸಿ ಅದು ʼಕಟ್ ಅಂಡ್ ಪೇಸ್ಟ್ʼ ವಿಧಾನ ಅಳವಡಿಸಿಕೊಂಡಿದ್ದು ʼಖೇದಕರ ದುಸ್ಸಾಹಸಗಳಿಗೆʼ ಮುಂದಾಗಿದೆ ಎಂದು ಹೇಳಿತ್ತು. ಅಲ್ಲದೆ ತ್ರಿಸದಸ್ಯ ಪೀಠದ ನಿರ್ಧಾರವನ್ನು ʼಅಸಮಂಜಸʼ, ʼಅಸಮರ್ಥʼ "ಮತ್ತು ʼದುರದೃಷ್ಟಕರʼ ಎಂದು ಬಣ್ಣಿಸಿತ್ತು.
ಈ ಹೇಳಿಕೆಗಳನ್ನು ತೀರ್ಪಿನಿಂದ ಅಳಿಸಿಹಾಕಬೇಕು ಎಂದು ಕೋರಿ ತ್ರಿಸದಸ್ಯಪೀಠ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ನ್ಯಾಯವಾದಿ ಅಮಿತ್ ಶರ್ಮಾ ಅವರ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ “ವಿಸ್ತೃತ ಪೀಠ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ಹೇಳಿಕೆಗಳನ್ನು ನೀಡಿರುವುದನ್ನು ಪ್ರಸ್ತಾಪಿಸಲಾಗಿದೆ. ಅಲ್ಲದೆ ಪ್ರತಿಕ್ರಿಯೆ ಕೋರಿದ ಪೀಠದ ವಿರುದ್ಧ ತೀರ್ಪಿನ ವೇಳೆ ವೈಯಕ್ತಿಕ ಹೇಳಿಕೆಗಳನ್ನು ನೀಡುವ ಸಾಹಸಕ್ಕೆ ವಿಸ್ತೃತ ಪೀಠ ಮುಂದಾಗಬಾರದು ಎಂದು ಹೇಳಲಾಗಿದೆ.