ʼಸುಪ್ರೀಂʼ ಗಾದಿ ಏರಲಿರುವ ಮೂವರು ಮಹಿಳಾ ನ್ಯಾಯಮೂರ್ತಿಗಳು ನ್ಯಾಯ ಜಗತ್ತಿನಲ್ಲಿ ಕೈಗೊಂಡ ಯಾನದ ವಿವರ ಇಲ್ಲಿದೆ…

ತಮ್ಮ ತೀರ್ಪುಗಳ ಮೂಲಕ ವ್ಯವಸ್ಥಿತ ಪಿತೃ ಪ್ರಧಾನತೆ, ಲಿಂಗಭೇದ ನೀತಿಗೆ ಕಡಿವಾಣ ಹಾಕುವ ಕುರಿತಂತೆ ಕಠಿಣ ಅವಲೋಕನಗಳನ್ನು ಮಾಡಿದ ಈ ಮೂವರು ನ್ಯಾಯಮೂರ್ತಿಗಳು ಸಹಾನುಭೂತಿ, ಕಲ್ಯಾಣ- ಆಧರಿತ ದೃಷ್ಟಿಕೋನ ಉಳ್ಳವರಾಗಿದ್ದಾರೆ.
Justices Hima Kohli, Nagarathna & Bela Trivedi
Justices Hima Kohli, Nagarathna & Bela Trivedi

ವಿವಿಧ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳು, ಮುಖ್ಯ ನ್ಯಾಯಮೂರ್ತಿಗಳು ಹಾಗೂ ಒಬ್ಬ ಹಿರಿಯ ನ್ಯಾಯವಾದಿ ಸೇರಿದಂತೆ ಒಂಬತ್ತು ಮಂದಿಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಪದೋನ್ನತಿಗೆ ಕೆಲ ದಿನಗಳ ಹಿಂದೆ ಸುಪ್ರೀಂಕೋರ್ಟ್‌ ಕೊಲಿಜಿಯಂ ಶಿಫಾರಸು ಮಾಡಿತು. ಇದೇ ಮೊದಲ ಬಾರಿಗೆ ಎಂಬಂತೆ ಮೂವರು ಮಹಿಳಾ ನ್ಯಾಯಮೂರ್ತಿಗಳಿಗೆ ಏಕಕಾಲಕ್ಕೆ ಪದೋನ್ನತಿಗಾಗಿ ಶಿಫಾರಸು ಮಾಡಲಾಗಿದೆ.

ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ (ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ), ಬಿ.ವಿ ನಾಗರತ್ನ (ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ) ಮತ್ತು ಬೇಲಾ ತ್ರಿವೇದಿ (ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ) ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ಗಾದಿ ಏರಲಿರುವ ಮಹಿಳೆಯರಾಗಿದ್ದಾರೆ. ಈ ಮೂವರು ಮಹಿಳಾ ನ್ಯಾಯಮೂರ್ತಿಗಳ ವಿವರ ಮತ್ತು ನ್ಯಾಯಾಂಗ ಲೋಕದಲ್ಲಿ ಇದುವರೆಗೆ ಅವರು ಕೈಗೊಂಡ ಯಾನದ ಮಾಹಿತಿ ಇಲ್ಲಿದೆ:

ನ್ಯಾ. ಹಿಮಾ ಕೊಹ್ಲಿ

ನ್ಯಾ. ಕೊಹ್ಲಿ ಅವರು ಹುಟ್ಟಿ ಬೆಳೆದಿದ್ದು ನವದೆಹಲಿಯಲ್ಲಿ. ಅವರು 2006ರ ಮೇ 29 ರಂದು ದೆಹಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಖಾಯಂ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು 2007ರ ಆಗಸ್ಟ್ 29ರಂದು. 2021ರ ಜನವರಿ 7 ರಂದು ತೆಲಂಗಾಣ ಹೈಕೋರ್ಟ್‌ನ ಪ್ರಪ್ರಥಮ ಮತ್ತು ಏಕೈಕ ಮಹಿಳಾ ಮುಖ್ಯ ನ್ಯಾಯಮೂರ್ತಿಯಾದರು.

ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ, ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಸಾರ್ವಜನಿಕ ಆರೋಗ್ಯದ ವಿಚಾರವಾಗಿ ಮಹತ್ವದ ಪಾತ್ರ ನಿರ್ವಹಿಸಿದರು. ದೆಹಲಿ ಕೊರೊನಾ ರಾಜಧಾನಿಯಾಗುವುದನ್ನು ತಡೆಯುವ ಉದ್ದೇಶದಿಂದ 2020ರ ಜೂನ್‌ನಲ್ಲಿ ನ್ಯಾ. ಕೊಹ್ಲಿ ನೇತೃತ್ವದ ವಿಭಾಗೀಯ ಪೀಠ ಪ್ರಯೋಗಾಲಯ ಇರುವ ಖಾಸಗಿ ಆಸ್ಪತ್ರೆಗಳಿಗೆ ಅನುಮತಿ ನೀಡಿತು ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ICMR) ಕೋವಿಡ್‌ ಪರೀಕ್ಷೆಗಳನ್ನು ನಡೆಸಲು ಸಮ್ಮತಿ ಸೂಚಿಸಿತು.

ಕೋವಿಡ್‌ ಸಾಂಕ್ರಾಮಿಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಕಳಕಳಿಯಂತೆ 2020ರ ಮಾರ್ಚ್ 28ರಂದು, ನ್ಯಾ. ಕೊಹ್ಲಿ ನೇತೃತ್ವದ ಉನ್ನತಾಧಿಕಾರ ಸಮಿತಿ ದೆಹಲಿ ಜೈಲುಗಳಿಂದ ಮಧ್ಯಂತರ ಜಾಮೀನಿನ ಮೇಲೆ ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡುವ ಮಾನದಂಡಗಳನ್ನು ಸಡಿಲಗೊಳಿಸಿತು. ಸಾಂಕ್ರಾಮಿಕ ರೋಗ ಹರಡಿದ ಸಮಯದಲ್ಲಿ ವಹಿಸಿದ ಮಹತ್ವದ ಪಾತ್ರದ ಆಚೆಗೂ ಕೊಹ್ಲಿ ಅವರು ಕೊಡುಗೆ ನೀಡಿದ್ದಾರೆ. ವೈವಾಹಿಕ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಸ್ತ್ರೀವಾದಿ ನೆಲೆಯಲ್ಲಿ ನ್ಯಾಯಶಾಸ್ತ್ರ ಅಭಿವೃದ್ಧಿಪಡಿಸಿದವರು ಎಂದು ಅವರು ಹೆಸರಾಗಿದ್ದಾರೆ.

Justice B.V. Nagarathna
Justice B.V. Nagarathna

ನ್ಯಾ. ಬಿ.ವಿ ನಾಗರತ್ನ

ನ್ಯಾ. ನಾಗರತ್ನ ಅವರು 1987ರ ಅಕ್ಟೋಬರ್ 28ರಂದು ಬೆಂಗಳೂರಿನಲ್ಲಿ ವಕೀಲ ವೃತ್ತಿ ಆರಂಭಿಸಿದರು. ಬಳಿಕ 18 ಫೆಬ್ರವರಿ 2008 ರಂದು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿರಾಗಿ ನೇಮಕಗೊಂಡರು. 2010ರ ಫೆಬ್ರವರಿ 17ರಂದು ಅವರನ್ನು ಖಾಯಂ ನ್ಯಾಯಮೂರ್ತಿಗಳನ್ನಾಗಿ ನೇಮಿಸಲಾಯಿತು. ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಇ ಎಸ್ ವೆಂಕಟರಾಮಯ್ಯ ಅವರ ಪುತ್ರಿ ಇವರು.

2009ರಲ್ಲಿ ನಡೆದ ವಕೀಲರ ಪ್ರತಿಭಟನೆ ವೇಳೆ ಅವರನ್ನು ಬಲವಂತವಾಗಿ ಬಂಧಿಸಿದ್ದು ಸಾಕಷ್ಟು ಜನರ ಗಮನ ಸೆಳೆಯಿತು. ನ್ಯಾಯಮೂರ್ತಿಯಾಗಿ ಕಳೆದ ಹದಿಮೂರು ವರ್ಷಗಳಲ್ಲಿ, ಅವರು ಅನೇಕ ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ತಮ್ಮ ತೀರ್ಪುಗಳಲ್ಲಿ ಹಲವು ಕಠಿಣ ಅವಲೋಕನಗಳನ್ನು ಮಾಡಿದ್ದಾರೆ.

ಆಗಸ್ಟ್ 17ರ ಕೊಲಿಜಿಯಂ ಶಿಫಾರಸುಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದರೆ, 2027 ರಲ್ಲಿ ನ್ಯಾ. ನಾಗರತ್ನ ಅವರು ಸುಪ್ರೀಂಕೋರ್ಟ್‌ನ ಪ್ರಪ್ರಥಮ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ.

ನ್ಯಾ. ಬೇಲಾ ತ್ರಿವೇದಿ

ನ್ಯಾ. ಬೇಲಾ ಅವರು, 2011ರ ಫೆಬ್ರವರಿ 17ರಂದು ಹೆಚ್ಚುವರಿ ನ್ಯಾಯಮೂರ್ತಿಯಾಗಿ ಗುಜರಾತ್ ಹೈಕೋರ್ಟ್‌ಗೆ ಪದೋನ್ನತಿಗೊಂಡರು. 2011ರ ಜೂನ್ 27ರಂದು ರಾಜಸ್ಥಾನ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಅವರನ್ನು ವರ್ಗಾವಣೆ ಮಾಡಲಾಯಿತು. ಬಳಿಕ 2016ರ ಫೆಬ್ರವರಿ 9ರಂದು ಗುಜರಾತ್ ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಯಾದರು.

ನ್ಯಾ. ಬೇಲಾ ಅವರ ತೀರ್ಪುಗಳು ಸಹಾನುಭೂತಿಯ, ಕಲ್ಯಾಣ ನ್ಯಾಯಶಾಸ್ತ್ರದ ಒಂದು ಅಂಶವನ್ನು ಪ್ರತಿಬಿಂಬಿಸುತ್ತವೆ. ಗೋವಧೆಯ ಆರೋಪ ಹೊತ್ತ ವ್ಯಕ್ತಿಗೆ ಜಾಮೀನು ನಿರಾಕರಿಸುವ ಅವರ ತೀರ್ಪು ಇದನ್ನು ದೃಢಪಡಿಸಿದೆ.

70 ವರ್ಷಗಳ ಸುದೀರ್ಘ ಇತಿಹಾಸದಲ್ಲಿ, ಸುಪ್ರೀಂಕೋರ್ಟ್ ಒಟ್ಟು 8 ಮಹಿಳಾ ನ್ಯಾಯಮೂರ್ತಿಗಳನ್ನು ಕಂಡಿದೆ. ಇವರಲ್ಲಿ ಮೊದಲನೆಯವರು ನ್ಯಾ. ಫಾತಿಮಾ ಬೀವಿ . 1989ರಲ್ಲಿ ಬೀವಿ ಅವರು ಸುಪ್ರೀಂಕೋರ್ಟ್‌ಗೆ ನೇಮಕಗೊಂಡರು. ಪ್ರಸ್ತುತ ಸುಪ್ರೀಂಕೋರ್ಟ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಏಕೈಕ ಮಹಿಳಾ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ 2022ರ ಸೆಪ್ಟೆಂಬರ್‌ 23ರಂದು ನಿವೃತ್ತರಾಗಲಿದ್ದಾರೆ.

Related Stories

No stories found.
Kannada Bar & Bench
kannada.barandbench.com