ನ್ಯಾಯಮೂರ್ತಿಗಳ ಕಡೆಗೆ ಕಡತ ಬಿಸಾಡಿದ ಪ್ರಕರಣ: ಬೇಷರತ್‌ ಕ್ಷಮೆ ಕೋರಿದ ವಕೀಲ; ನ್ಯಾಯಾಂಗ ನಿಂದನೆ ಕೈಬಿಟ್ಟ ಹೈಕೋರ್ಟ್‌

ನ್ಯಾಯಾಲಯದ ಬಗ್ಗೆ ತಮಗೆ ಅಪಾರ ಗೌರವ ಇದೆ. 38 ವರ್ಷಗಳ ಕಾಲ ಕಳಂಕರಹಿತವಾಗಿ ವಕೀಲಿಕೆ ನಡೆಸಿದ್ದೇನೆ. ನ್ಯಾಯಾಲಯಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳುವ ಯಾವುದೇ ಉದ್ದೇಶ ಇರಲಿಲ್ಲ ಎಂದು ತಿಳಿಸಿರುವ ವಕೀಲ ವೀರಭದ್ರಯ್ಯ.
Justice K S Hemalekha
Justice K S Hemalekha

ಕಕ್ಷಿದಾರನ ಅರ್ಜಿ ತಿರಸ್ಕರಿಸಿದ್ದಕ್ಕೆ ಕೋಪಗೊಂಡು ನ್ಯಾಯಮೂರ್ತಿಗಳಿಗೆ ಅಗೌರವ ತೋರಿದ ಹಾಗೂ ಕಡತಗಳನ್ನು ಎಸೆದ ವರ್ತನೆಗೆ ವಿಷಾದ ವ್ಯಕ್ತಪಡಿಸಿ ಬೇಷರತ್‌ ಕ್ಷಮೆ ಯಾಚಿಸಿದ ಹಿನ್ನೆಲೆಯಲ್ಲಿ ವಕೀಲ ಎಂ ವೀರಭದ್ರಯ್ಯ ವಿರುದ್ಧ ಸ್ವಯಂಪ್ರೇರಿತ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ರಿಜಿಸ್ಟ್ರಾರ್‌ಗೆ (ನ್ಯಾಯಾಂಗ) ನಿರ್ದೇಶಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ಹಿಂಪಡೆದಿದೆ.

ಘಟನೆ ಕುರಿತಂತೆ ಬೇಷರತ್‌ ಕ್ಷಮೆ ಯಾಚಿಸಿ, ತಮ್ಮ ವಿರುದ್ಧ ಸ್ವಯಂ ಪ್ರೇರಿತ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಹೈಕೋರ್ಟ್‌ ನ್ಯಾಯಾಂಗ ವಿಭಾಗದ ರಿಜಿಸ್ಟ್ರಾರ್‌ಗೆ ಸೂಚಿಸಿ 2024ರ ಫೆಬ್ರವರಿ 5ರಂದು ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಕೋರಿ ವಕೀಲ ವೀರಭದ್ರಯ್ಯ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಇದನ್ನು ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದ್ದು, ಫೆಬ್ರವರಿ 5ರ ಆದೇಶವನ್ನು ಹಿಂಪಡೆದಿದೆ.

ನ್ಯಾಯಾಲಯದ ಬಗ್ಗೆ ತಮಗೆ ಅಪಾರ ಗೌರವ ಇದೆ. 38 ವರ್ಷಗಳ ಕಾಲ ಕಳಂಕರಹಿತವಾಗಿ ವಕೀಲಿಕೆ ನಡೆಸಿದ್ದೇನೆ. ನ್ಯಾಯಾಲಯಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳುವ ಯಾವುದೇ ಉದ್ದೇಶ ಇರಲಿಲ್ಲ. ಆಕಸ್ಮಿಕವಾಗಿ ಅಂತಹ ಸನ್ನಿವೇಶ ನಡೆದಿದೆ. ತಮ್ಮ ನಡತೆ ಕುರಿತು ಈಗಲೂ ಚಿಂತಿತನಾಗಿದ್ದು, ಅದಕ್ಕೆ ವಿಷಾದ ವ್ಯಕ್ತಪಡಿಸುತ್ತಿದ್ದೇನೆ. ಘಟನೆಯ ಬಗ್ಗೆ ನ್ಯಾಯಾಲಯಕ್ಕೆ ಬೇಷರತ್‌ ಕ್ಷಮೆ ಕೋರುತ್ತಿದ್ದೇನೆ. ಭವಿಷ್ಯದಲ್ಲಿ ಇಂಥ ವರ್ತನೆ ಯಾವುದೇ ನ್ಯಾಯಾಲಯದಲ್ಲಿ ಪುನರಾವರ್ತನೆಯಾಗದಂತೆ ಎಲ್ಲಾ ಎಚ್ಚರಿಕೆ ವಹಿಸಲಾಗುವುದು ಎಂದು ದೃಢೀಕರಿಸಿ ಪ್ರಮಾಣ ಪತ್ರ ಸಲ್ಲಿಸುತ್ತಿದ್ದೇನೆ. ಈ ಪ್ರಮಾಣ ಪತ್ರವನ್ನು ಒಪ್ಪಬೇಕು ಎಂದು ಮಧ್ಯಂತರ ಅರ್ಜಿಯಲ್ಲಿ ವಕೀಲ ವೀರಭದ್ರಯ್ಯ ಕೋರಿದ್ದರು. ಇದನ್ನು ದಾಖಲೆಯಲ್ಲಿ ಸ್ವೀಕರಿಸಿರುವ ನ್ಯಾಯಾಲಯವು ಫೆಬ್ರವರಿ 5ರ ಆದೇಶ ಹಿಂಪಡೆದಿದ್ದು, ಈ ಆದೇಶದ ಪ್ರತಿಯನ್ನು ರಾಜ್ಯ ವಕೀಲರ ಪರಿಷತ್‌ಗೆ ಕಳುಹಿಸಿಕೊಡುವಂತೆ ಆದೇಶಿಸಿದೆ.

Also Read
ನ್ಯಾಯಮೂರ್ತಿಗಳ ಕಡೆಗೆ ಕಡತ ಬಿಸಾಡಿ ದುರ್ನಡತೆ: ವಕೀಲನ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ನಿರ್ದೇಶನ

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಅಣ್ಣಾದೊರೈ (ವೀರಭದ್ರಯ್ಯ ಅವರ ಕಕ್ಷಿದಾರರ) ಎಂಬುವರು ಕೇಂದ್ರ ಸರ್ಕಾರ, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್‌) ವಿರುದ್ಧ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿದಾರ ಯಾವುದೇ ಅರ್ಜಿ ದಾಖಲಿಸಿದರೂ ತಮ್ಮ ಗಮನಕ್ಕೆ ತರಬೇಕು ಎಂದು ಬಿಇಎಲ್ ಪರವಾಗಿ ಅದರ ವ್ಯವಸ್ಥಾಪಕ ನಿರ್ದೇಶಕರು ಕೇವಿಯಟ್ ಸಲ್ಲಿಸಿದ್ದರು. ಈ ಕೇವಿಯಟ್‌ ಅನ್ನು ಆಕ್ಷೇಪಿಸಿ ಅರ್ಜಿದಾರ ಅಣ್ಣಾದೊರೈ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. 2024ರ ಫೆ.5ರಂದು ಆ ಅರ್ಜಿಯ ಅರ್ಹತೆಯ ಕುರಿತು ವಾದಿಸುವಂತೆ ಅರ್ಜಿದಾರರ ಪರ ವಕೀಲ ವೀರಭದ್ರಯ್ಯಗೆ ಹೈಕೋರ್ಟ್‌ ಸೂಚಿಸಿತ್ತು. ಅಂತಿಮವಾಗಿ ಅವರ ವಾದಾಂಶ ಒಪ್ಪದ ಪೀಠವು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿತ್ತು. ಜೊತೆಗೆ 10 ಸಾವಿರ ರೂಪಾಯಿಯನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ನಾಲ್ಕು ವಾರದಲ್ಲಿ ಪಾವತಿಸುವಂತೆ ಸೂಚಿಸಿತ್ತು.

ಇದರಿಂದ ಕುಪಿತಗೊಂಡಿದ್ದ ವೀರಭದ್ರಯ್ಯ ಏರುಧ್ವನಿಯಲ್ಲಿ ನ್ಯಾಯಾಲಯದ ಕುರಿತು ಆಕ್ಷೇಪಾರ್ಹವಾಗಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಹೈಕೋರ್ಟ್‌ ಆದೇಶಿಸಿತ್ತು.

Related Stories

No stories found.
Kannada Bar & Bench
kannada.barandbench.com