[ಹುಲಿ ಉಗುರಿನ ಪೆಂಡೆಂಟ್‌] ನಟ ಜಗ್ಗೇಶ್‌ ವಿರುದ್ಧದ ಪ್ರಕ್ರಿಯೆಗೆ ತಡೆ; ಅಧಿಕಾರಿಗಳ ನಡೆಗೆ ಹೈಕೋರ್ಟ್‌ ಕಿಡಿ

ನಕಲಿ ಪೆಂಡೆಂಟ್‌ ನೀಡುತ್ತಾರೆ ಎಂಬುದು ನಿಮ್ಮ (ಸರ್ಕಾರ) ಗಮನಕ್ಕೆ ಹೇಗೆ ಬಂತು? ಒಂದು ಗಂಟೆಯಲ್ಲಿ ನಿಮಗೆ ಸಿಕ್ಕ ಆ ಸುದ್ದಿಯ ಮೂಲ ಯಾವುದು? ಯಾರೇ ವನ್ಯಜೀವಿಯ ಯಾವುದೇ ವಸ್ತು ಸಂಗ್ರಹಿಸುವುದು ಅಪರಾಧ ಎಂದ ಪೀಠ.
Actor Jaggesh and Karnataka HC
Actor Jaggesh and Karnataka HC

ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ಹಾಗೂ ನಟ ಜಗ್ಗೇಶ್‌ ಅವರ ನಿವಾಸದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಶೋಧನೆಯ ನಂತರದ ಎಲ್ಲಾ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್‌ ಸೋಮವಾರ ಮಧ್ಯಂತರ ತಡೆಯಾಜ್ಞೆ ವಿಧಿಸಿದೆ.

ಚಿತ್ರನಟ ಜಗ್ಗೇಶ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

“ಶೋಧನಾ ಚಟುವಟಿಕೆಯಿಂದ ಆರಂಭವಾದ ಎಲ್ಲಾ ಮುಂದಿನ ಪ್ರಕ್ರಿಯೆಗೆ ತಡೆ ನೀಡಲಾಗಿದೆ. ಹುಲಿ ಉಗುರಿನ ಪೆಂಡೆಂಟ್‌ ಎನ್ನಲಾದ ವಶಪಡಿಸಿಕೊಂಡಿರುವ ವಸ್ತುವನ್ನು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ತಪಾಸಣೆಗೆ ಕಳುಹಿಸಿಕೊಡಲಾಗಿದೆ. ಎಫ್‌ಎಸ್‌ಎಲ್‌ ವರದಿಯು ಅರ್ಜಿಯ ಅಂತಿಮ ವಿಚಾರಣೆಗೆ ಒಳಪಟ್ಟಿರುತ್ತದೆ” ಎಂದಿರುವ ನ್ಯಾಯಾಲಯವು ವಿಚಾರಣೆಯನ್ನು ನವೆಂಬರ್‌ 29ಕ್ಕೆ ಮುಂದೂಡಿದೆ.

ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿನ ಚಿತ್ರ ಆಧರಿಸಿ ನೋಟಿಸ್‌ ನೀಡಿದ ಒಂದೇ ತಾಸಿನಲ್ಲಿ 14 ಅಧಿಕಾರಿಗಳ ತಂಡ ಜಗ್ಗೇಶ್‌ ಅವರ ಮನೆಯಲ್ಲಿ ಶೋಧ ನಡೆಸಿದೆ. ರಾಜ್ಯಸಭಾ ಸದಸ್ಯ ಎಂಬುದನ್ನೂ ಮರೆತು ಶೋಧನೆ ನಡೆಸಲಾಗಿದೆ. ವನ್ಯಜೀವಿಯ ಕಾಯಿದೆಯ ಸೆಕ್ಷನ್‌ 39 ಮತ್ತು 40 ಹಾಲಿ ಪ್ರಕರಣದಲ್ಲಿ ಅನ್ವಯಿಸುವುದೇ ಇಲ್ಲ. ಶೋಧದ ಬಳಿಕ ಅರ್ಜಿದಾರರ ಮನೆಯ ಹೊರಗೆ ಮಾಧ್ಯಮಗೋಷ್ಠಿ ನಡೆಸಲಾಗಿದೆ” ” ಎಂದು ಆಕ್ಷೇಪಿಸಿದರು.

“ಅರ್ಜಿದಾರರಿಗೆ ನೋಟಿಸ್‌ ನೀಡಿದ್ದಕ್ಕೆ ಪ್ರತಿಕ್ರಿಯಿಸಲೂ ಅವಕಾಶ ನೀಡಿಲ್ಲ. ಸಂಸದರಾಗಿರುವ ಅವರು ಎಲ್ಲಿಯೂ ಓಡಿ ಹೋಗುತ್ತಿರಲಿಲ್ಲ. ರಾಜ್ಯಸಭಾ ಸದಸ್ಯರಾಗಿದ್ದು, ಹಲವು ದಾಖಲೆಗಳು ಅವರ ಕಸ್ಟಡಿಯಲ್ಲಿವೆ. ಇವು ಸಂಸತ್‌ಗೆ ಸೇರಿದವು. ಈ ಸಂದರ್ಭದಲ್ಲಿ ದಾಳಿ ನಡೆಸಲಾಗಿದೆ. ಇದಕ್ಕಿಂತ ಹೆಚ್ಚಿನ ವಿಚಾರವನ್ನು ಪ್ರಸ್ತಾಪಿಸುವುದಿಲ್ಲ” ಎಂದರು.

ಇದಕ್ಕೆ ಪೀಠವು “ಜಗ್ಗೇಶ್‌ ಅವರಿಗೆ ನೋಟಿಸ್‌ ನೀಡಿದ ಕೆಲವೇ ಗಂಟೆಗಳಲ್ಲಿ ಶೋಧ ಏಕೆ ನಡೆಸಿದಿರಿ? ನೋಟಿಸ್‌ಗೆ ಪ್ರತಿಕ್ರಿಯೆ ಪಡೆದ ಬಳಿಕ, ಅದರಿಂದ ಸಮಾಧಾನವಾಗದಿದ್ದರೆ ದಾಳಿ ನಡೆಸಬೇಕಲ್ಲವೇ? ಅವರು ಪ್ರತಿಕ್ರಿಯೆ ಸಲ್ಲಿಸುವವರೆಗೆ ನೀವು ಮೌನವಾಗಿರಬೇಕಿತ್ತಲ್ಲವೇ? ಇದು ನಿಯಮಬಾಹಿರವಲ್ಲವೇ? ಅವರು ನಕಲಿ ಪೆಂಡೆಂಟ್‌ ನೀಡುತ್ತಾರೆ ಎಂಬುದು ನಿಮ್ಮ ಗಮನಕ್ಕೆ ಹೇಗೆ ಬಂತು? ಒಂದು ಗಂಟೆಯಲ್ಲಿ ನಿಮಗೆ ಸಿಕ್ಕ ಆ ಸುದ್ದಿಯ ಮೂಲ ಯಾವುದು? ಯಾರೇ ವನ್ಯಜೀವಿಯ ಯಾವುದೇ ವಸ್ತು ಸಂಗ್ರಹಿಸುವುದು ಅಪರಾಧ. ಆದರೆ, ನಿಮ್ಮ ಪ್ರಚಾರವು ಈ ರೀತಿ ಇರಬಾರದು” ಎಂದು ಅಸಮಾಧಾನ ವ್ಯಕ್ತಪಡಿಸಿತು.

ಇದಕ್ಕೆ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಜಗದೀಶ್‌ ಅವರು “ನೋಟಿಸ್‌ ನೀಡಿದ ಬಳಿಕ ಸಾಕಷ್ಟು ಬೆಳವಣಿಗೆಗಳು ನಡೆದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ. ನಕಲಿ ಪೆಂಡೆಂಟ್‌ ಅನ್ನು ಅಧಿಕಾರಿಗಳ ವಶಕ್ಕೆ ನೀಡುವ ಯತ್ನ ಮಾಡಿದ್ದರಿಂದ ದಾಳಿ ಮಾಡಬೇಕಾಯಿತು. ವನ್ಯಜೀವಿ ಕಾಯಿದೆ ಸೆಕ್ಷನ್‌ 50ರ ಅಡಿ ನೋಟಿಸ್‌ ನೀಡದ ಹೊರತಾಗಿಯೂ ಅಧಿಕಾರಿಗಳು ದಾಳಿ ನಡೆಸಬಹುದಿತ್ತು. ನಾವು ಪ್ರಚಾರಕ್ಕಾಗಿ ಏನನ್ನೂ ಮಾಡಿಲ್ಲ. ಹುಲಿ ಉಗುರಿನ ಪೆಂಡೆಂಟ್‌ ನೀಡಿದ್ದು ನಮ್ಮ ತಾಯಿ ಎಂದು ಹೇಳಿದ್ದು ಅರ್ಜಿದಾರರು, ನಾವಲ್ಲ” ಎಂದರು.

ಆಗ ನ್ಯಾಯಾಲಯವು “ವನ್ಯಜೀವಿ ಸಂರಕ್ಷಣಾ ಕಾಯಿದೆಯಲ್ಲಿಯೇ ನೋಟಿಸ್‌ ನೀಡದೆಯೇ ದಾಳಿ ನಡೆಸಬಹುದು ಎಂದಿರುವಾಗ ನೋಟಿಸ್‌ ನೀಡಿದ್ದೇಕೆ? ಆನಂತರ ಪ್ರತಿಕ್ರಿಯೆ ಸಲ್ಲಿಸುವುದಕ್ಕೂ ಮುನ್ನ ದಾಳಿ ನಡೆಸಿದ್ದೇಕೆ? ಇದೆಲ್ಲವನ್ನೂ ಪ್ರಚಾರಕ್ಕಾಗಿ ಮಾಡಿದ್ದೀರಾ?” ಎಂದು ಸರ್ಕಾರವನ್ನು ಪ್ರಶ್ನಿಸಿತು.

Also Read
ಹುಲಿ ಉಗುರಿನ ಪೆಂಡೆಂಟ್‌: ಅರಣ್ಯ ಸಂಚಾರಿ ದಳದ ನೋಟಿಸ್‌ ರದ್ದು ಕೋರಿ ಹೈಕೋರ್ಟ್‌ ಕದ ತಟ್ಟಿದ ನಟ ಜಗ್ಗೇಶ್‌

ಇದಕ್ಕೆ ಜಗದೀಶ್‌ ಅವರು “ಕೇವಲ ನಾಲ್ಕು ಅಧಿಕಾರಿಗಳ ತಂಡ ಅರ್ಜಿದಾರರ ಮನೆಯಲ್ಲಿ ಶೋಧ ನಡೆಸಿದೆ. ದಾಖಲೆಗಳನ್ನು ತಿರುಚುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಜಗ್ಗೇಶ್‌ ಅವರ ಮನೆಯಲ್ಲಿ ಶೋಧ ನಡೆಸಿದ್ದಾರೆ. ಮಾಧ್ಯಮಗೋಷ್ಠಿ ನಡೆಸಿದ್ದು ಅರ್ಜಿದಾರರು” ಎಂದು ಸಮರ್ಥಿಸುವ ಯತ್ನ ನಡೆಸಿದರು.

ಅರಣ್ಯ ಸಂಚಾರಿ ದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ 2023ರ ಅಕ್ಟೋಬರ್‌ 25ರಂದು ತನಗೆ ನೋಟಿಸ್‌ ಜಾರಿ ಮಾಡಿದ್ದರು. ಇದರ ಬೆನ್ನಿಗೇ ಬೆಂಗಳೂರಿನ ತಮ್ಮ ಮನೆಗೆ ಧಾವಿಸಿದ 14 ಸದಸ್ಯರ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಮನೆಯಲ್ಲಿ ಶೋಧ ನಡೆಸಿದರು. ಇದು ಅಕ್ರಮವಾಗಿದ್ದು, ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಜಗ್ಗೇಶ್‌ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

Related Stories

No stories found.
Kannada Bar & Bench
kannada.barandbench.com