ಅರ್ಹತೆ ಇಲ್ಲದಿದ್ದರೂ, ವೈದ್ಯರೆಂದು ಗ್ರಾಮೀಣರನ್ನು ವಂಚಿಸುತ್ತಿರುವವರಿಗೆ ಅಂತ್ಯ ಹಾಡಲು ಸಕಾಲ: ಹೈಕೋರ್ಟ್‌

ಕ್ಲಿನಿಕ್ ನಡೆಸುವುದಕ್ಕೆ ಅನುಮತಿ ನಿರಾಕರಿಸಿ ಹಿಂಬರಹ ನೀಡಿದ್ದ ಜಿಲ್ಲಾ ಸಕ್ಷಮ ಪ್ರಾಧಿಕಾರದ ಕ್ರಮ ಪ್ರಶ್ನಿಸಿ ಕೋಲಾರ ಜಿಲ್ಲೆಯ ಕೆಜಿಎಫ್ ಮೂಲದ ಅಣ್ಣಯ್ಯ ಎಂಬುವರು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿರುವ ಹೈಕೋರ್ಟ್‌.
Karnataka High Court and doctor
Karnataka High Court and doctor
Published on

“ಅರ್ಹತೆ ಇಲ್ಲದಿದ್ದರೂ, ವೈದ್ಯರು ಎಂದು ಬಿಂಬಿಸಿಕೊಂಡು ಗ್ರಾಮೀಣ ಜನರನ್ನು ವಂಚಿಸುತ್ತಿರುವವರಿಗೆ ಅಂತ್ಯ ಹಾಡಲು ಇದು ಸಕಾಲ” ಎಂದು ಈಚೆಗೆ ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್, ಪ್ಯಾರಾ ಮೆಡಿಕಲ್ ಕೋರ್ಸ್‌ ಮಾಡಿ ಖಾಸಗಿ ವೈದ್ಯಕೀಯ ಸೇವೆ ಮುಂದುವರಿಸಲು ಪರವಾನಗಿ ನೀಡದ ರಾಜ್ಯ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿದೆ.

ಕ್ಲಿನಿಕ್ ನಡೆಸುವುದಕ್ಕೆ ಅನುಮತಿ ನಿರಾಕರಿಸಿ ಹಿಂಬರಹ ನೀಡಿದ್ದ ಜಿಲ್ಲಾ ಸಕ್ಷಮ ಪ್ರಾಧಿಕಾರದ ಕ್ರಮ ಪ್ರಶ್ನಿಸಿ ಕೋಲಾರ ಜಿಲ್ಲೆಯ ಕೆಜಿಎಫ್ ಮೂಲದ ಅಣ್ಣಯ್ಯ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ತಿರಸ್ಕರಿಸಿದೆ.

ಅಗತ್ಯ ಔಷಧಗಳೊಂದಿಗೆ ಸಮುದಾಯ ವೈದ್ಯಕೀಯ ಸೇವೆಯಲ್ಲಿ (ಸಿಎಂಎಸ್-ಇಡಿ) ಡಿಪ್ಲೊಮಾ ಪಡೆದವರನ್ನು ವೈದ್ಯರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಅರ್ಜಿದಾರರು ಸೊಸೈಟಿ ಕಾಯಿದೆಯಡಿ ನೋಂದಾಯಿಸಲ್ಪಟ್ಟಿರುವ ಕಾನ್ಪುರದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕೊ ಟೆಕ್ನಿಕಲ್ಸ್ ಅಂಡ್ ಹೆಲ್ತ್ ಕೇರ್‌ನಲ್ಲಿ ಸಿಎಂಎಸ್-ಇಡಿ ಕೋರ್ಸ್‌ ಮಾಡಿದ್ದಾರೆ. ಇದು ಪ್ಯಾರಾ ಮೆಡಿಕಲ್ ಕೋರ್ಸ್ ಎಂದು ನ್ಯಾಯಾಲಯ ಹೇಳಿದೆ.

ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನಾ ಕಾಯಿದೆ (ಕೆಪಿಎಂಎ) ಸೆಕ್ಷನ್ 2(ಕೆ) ಪ್ರಕಾರ ಹೋಮಿಯೋಪತಿ ವೈದ್ಯರ ಕಾಯಿದೆ, ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಸಿದ್ಧ, ಯುನಾನಿ ಅಥವಾ ಯೋಗಾಭ್ಯಾಸ ಮತ್ತು ವೈದ್ಯಕೀಯ ನೋಂದಣಿ ಕಾಯಿದೆ, ಭಾರತೀಯ ವೈದ್ಯಕೀಯ ಕೇಂದ್ರ ಮಂಡಳಿ ಕಾಯಿದೆ, ಹೋಮಿಯೋಪತಿ ಕೇಂದ್ರ ಮಂಡಳಿ ಕಾಯಿದೆ ಮತ್ತು ವೈದ್ಯಕೀಯ ಮಂಡಳಿ ಕಾಯಿದೆ, 1956ರ ಅಡಿಯಲ್ಲಿ ನೋಂದಾಯಿಸಿಕೊಂಡಿರುವ ವ್ಯಕ್ತಿಗಳನ್ನು ವೈದ್ಯರು ಎಂದು ಕರೆಯಲಾಗುತ್ತದೆ. ಆದರೆ, ಅವುಗಳ ಅಡಿ ಅರ್ಜಿದಾರರು ನೋಂದಣಿ ಮಾಡಿಸಿಲ್ಲ. ಆದ್ದರಿಂದ, ಖಾಸಗಿ ವೈದ್ಯರಾಗಿ ಸೇವೆ ಸಲ್ಲಿಸುವುದಕ್ಕೆ ಅವರನ್ನು ಪರಿಗಣಿಸುವುದಕ್ಕೆ ಸಾಧ್ಯವಿಲ್ಲ. ಜೊತೆಗೆ, ಅರ್ಜಿದಾರರ ವಿದ್ಯಾಭ್ಯಾಸ ಕೆಪಿಎಂಎ ಕಾಯಿದೆ ಸೆಕ್ಷನ್ 2(ಕೆ)ಗೆ ಅನ್ವಯವಾಗಿಲ್ಲ. ಹೀಗಾಗಿ, ಅರ್ಜಿದಾರರು ವೈದ್ಯರಲ್ಲ. ಆದ್ದರಿಂದ, ಅವರು ವೈದ್ಯಕೀಯ ಸೇವೆ ಮುಂದುವರಿಸಲು ಅನುಮತಿಸಲು ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿರುವುದು ಸಮಂಜಸವಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರರು ಸಿಎಂಎಸ್-ಇಡಿ ಪೂರ್ಣಗೊಳಿಸಿದ್ದು, ದೆಹಲಿಯಲ್ಲಿ ಅರೆವೈದ್ಯಕೀಯ ಕೋರ್ಸ್ ತರಬೇತಿ ಪಡೆದಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನ ಅಥವಾ ಮಾರ್ಗಸೂಚಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಂಬೈನ ಕೇಂದ್ರ ಅರೆ ವೈದ್ಯಕೀಯ ಶಿಕ್ಷಣ ಮಂಡಳಿಯಿಂದ ಪ್ರಮಾಣಪತ್ರ ಪಡೆದುಕೊಂಡಿದ್ದರು.  ಈ ಪ್ರಮಾಣ ಪತ್ರದ ಆಧಾರದಲ್ಲಿ ಬಂಗಾರಪೇಟೆ ತಾಲ್ಲೂಕಿನ ಕೆಜಿಎಫ್‌ನ ಮಿನಿ ಇಬ್ರಾಹಿಂ ರಸ್ತೆಯಲ್ಲಿ ಸಂಗೀತ ಕ್ಲಿನಿಕ್ ಎಂಬ ಹೆಸರಿನಲ್ಲಿ ಕ್ಲಿನಿಕ್ ಆರಂಭಿಸಿ, ಹಲವು ವರ್ಷಗಳಿಂದ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದರು.

ರಾಜ್ಯ ಸರ್ಕಾರವು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯಿದೆ 2007 ಅನ್ನು ಜಾರಿ ಮಾಡಿದ್ದು, ಇದು 2008ರ ಜನವರಿ 23ರಿಂದ ಜಾರಿಗೆ ಬಂದಿತು. ಈ ಕಾಯಿದೆಯಂತೆ ಖಾಸಗಿಯಾಗಿ ವೈದ್ಯಕೀಯ ಸೇವೆ ಸಲ್ಲಿಸಲು ಅರ್ಜಿ ಸಲ್ಲಿಸಿ ನೋಂದಣಿ ಮಾಡಿದ ಬಳಿಕ ಸೇವೆ ಮುಂದುವರೆಸಬೇಕು ಎಂದು ತಿಳಿಸಲಾಗಿತ್ತು. ಅದರಂತೆ, ಅರ್ಜಿದಾರರು ತಮ್ಮ ಕ್ಲಿನಿಕ್‌ನ ನೋಂದಣಿಗಾಗಿ ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಇದನ್ನು ತಿರಸ್ಕರಿಸಿದ್ದ ಸರ್ಕಾರವು ಹಿಂಬರಹ ನೀಡಿತ್ತು. ಇದನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

Kannada Bar & Bench
kannada.barandbench.com