ನ್ಯಾಯಾಲಯಗಳು ಸ್ವಾತಂತ್ರ್ಯವನ್ನು ಎಷ್ಟರ ಮಟ್ಟಿಗೆ ರಕ್ಷಿಸಿವೆ ಎಂಬುದರ ಆತ್ಮಾವಲೋಕನ ಅಗತ್ಯವಿದೆ: ನ್ಯಾ. ಓಕಾ

ಬಾಂಬೆ ವಕೀಲರ ಸಂಘ ಶನಿವಾರ ಮುಂಬೈನಲ್ಲಿ ಆಯೋಜಿಸಿದ್ದ ಅಶೋಕ್ ದೇಸಾಯಿ ಸ್ಮಾರಕ ಮೂರನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Justice Abhay S Oka
Justice Abhay S Oka
Published on

ಸಂವಿಧಾನದ 21 ಮತ್ತು 22ನೇ ವಿಧಿಗಳಡಿ ಒದಗಿಸಲಾದ ನಾಗರಿಕರ ಸ್ವಾತಂತ್ರ್ಯ ಮತ್ತು ಅದರ ವಿವಿಧ ಅಂಶಗಳನ್ನು ಭಾರತದ ನ್ಯಾಯಾಲಯಗಳು ಎಷ್ಟರ ಮಟ್ಟಿಗೆ ರಕ್ಷಿಸಿವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುವ ತುರ್ತು ಅಗತ್ಯ ಇದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಹೇಳಿದರು.

ಬಾಂಬೆ ವಕೀಲರ ಸಂಘ ಶನಿವಾರ ಮುಂಬೈನಲ್ಲಿ ಆಯೋಜಿಸಿದ್ದ ಅಶೋಕ್ ದೇಸಾಯಿ ಸ್ಮಾರಕ ಮೂರನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಕ್ರಿಮಿನಲ್‌ ನ್ಯಾಯಾಂಗ ವ್ಯವಸ್ಥೆಯ ತೊಡಕುಗಳು- ಕೆಲ ಚಿಂತನೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ರೇವತಿ ಮೋಹಿತೆ ಡೇರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಗ್ಧತೆಯ ಊಹೆ, ಜಾಮೀನಿಗೇ ಪ್ರಾಶಸ್ತ್ಯ- ಜೈಲು ಶಿಕ್ಷೆ ನಗಣ್ಯ ಎಂಬ ತತ್ವವನ್ನು ಪಿಎಂಎಲ್ಎ, ಯುಎಪಿಎ ಪ್ರಕರಣಗಳಿಗೂ ಅನ್ವಯಿಸಬೇಕು.
ನ್ಯಾ. ಎ ಎಸ್ ಓಕಾ

ನಿರ್ದಿಷ್ಟವಾಗಿ ನ್ಯಾಯಯುತ ವಿಚಾರಣೆಯ ಹಕ್ಕು ಮತ್ತು ಬಂಧನದ ವಿರುದ್ಧದ ರಕ್ಷಣೆಗಳನ್ನು ನ್ಯಾ. ಓಕಾ ಉಲ್ಲೇಖಿಸಿದರು.

ಸಂವಿಧಾನದ ಅಡಿಯಲ್ಲಿ ಹಲವು ಹಕ್ಕುಗಳನ್ನು ನೀಡಲಾಗಿದೆ ಎಂದು ನಮಗೆ ತಿಳಿದಿದೆ. ಕ್ರಿಮಿನಲ್ ಕಾನೂನಿನ ಸಂದರ್ಭದಲ್ಲಿ, ವಿಧಿ 21ರ ಭಾಗವಾಗಿರುವ ನ್ಯಾಯಯುತ ವಿಚಾರಣೆಯ ಪರಿಕಲ್ಪನೆ ಇದೆ. ಸಂವಿಧಾನದ ವಿಧಿ 22ರಲ್ಲಿ ಬಂಧನದ ವಿರುದ್ಧ ರಕ್ಷಣೆಗಳಿವೆ. ನಮ್ಮ ಸಂವಿಧಾನ 75 ವರ್ಷಗಳನ್ನು ನಾವು ಪೂರ್ಣಗೊಳಿಸಿರುವ ಈ ಸಂದರ್ಭದಲ್ಲಿ, ಅದು ಒದಗಿಸಿದ ಹಕ್ಕುಗಳನ್ನು ನಮ್ಮ ನ್ಯಾಯಾಲಯಗಳು ಎಷ್ಟರ ಮಟ್ಟಿಗೆ ರಕ್ಷಿಸುತ್ತವೆ ಎಂಬುದನ್ನು ನಾವು ಪ್ರಾಮಾಣಿಕವಾಗಿ ವಿಶ್ಲೇಷಿಸಬೇಕಾಗಿದೆ ಎಂದು ಅವರು ತಿಳಿಸಿದರು.

ನ್ಯಾ. ಓಕಾ ಅವರ ಉಪನ್ಯಾಸದ ಪ್ರಮುಖಾಂಶಗಳು

  • ಮುಗ್ಧತೆಯ ಊಹೆ, ಅಪರಾಧವನ್ನು ಶಂಕಾತೀತವಾಗಿ ಸಾಬೀತುಪಡಿಸುವ ಅಗತ್ಯ ಹಾಗೂ ಜಾಮೀನಿಗೆ ಆದ್ಯತೆ- ಸೆರೆವಾಸ ನಗಣ್ಯ ಎಂಬ ಕಾನೂನಿನ ಮೂರು ಮೂಲಭೂತ ತತ್ವಗಳು ಕೆಲ ಮಾರ್ಪಾಡುಗಳೊಂದಿಗೆ ಪಿಎಂಎಲ್‌ಎ, ಯುಎಪಿಎಯಂತಹ ವಿಶೇಷ ಕಾನೂನುಗಳಲ್ಲೂ ಅನ್ವಯವಾಗಬೇಕು.

  • ಭಾರತದ ವಿವಿಧ ಹೈಕೋರ್ಟ್‌ಗಳಲ್ಲಿ ಒಟ್ಟು 62.5 ಲಕ್ಷ ಪ್ರಕರಣಗಳು ಬಾಕಿ ಉಳಿದಿದ್ದು, ಅವುಗಳಲ್ಲಿ 18.25 ಲಕ್ಷ ಕ್ರಿಮಿನಲ್ ಪ್ರಕರಣಗಳಿವೆ. ಜಾಮೀನು ಅರ್ಜಿಗಳು ಕೂಡ ಸಾಕಷ್ಟು ಪ್ರಮಾಣದಲ್ಲಿ ಬಾಕಿ ಉಳಿದಿವೆ.

  • ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್‌ ಕಾಯಿದೆಯ ಸೆಕ್ಷನ್ 138ರ ಅಡಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿದರೆ ವೈವಾಹಿಕ ವ್ಯಾಜ್ಯಗಳು ಬಾಕಿ ಉಳಿಯುವುದನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.

  • ಬಗೆಹರಿಯದ ವೈವಾಹಿಕ ಸಮಸ್ಯೆಗಳು ಬಹುತೇಕ ಜೀವನಾಂಶ, ಕೌಟುಂಬಿಕ ಹಿಂಸೆ ಮತ್ತು ಸೆಕ್ಷನ್ 498 ಎ ದೂರುಗಳಂತಹ ವಿವಿಧ ಪ್ರಕರಣಗಳಿಗೆ ಕಾರಣವಾಗುತ್ತವೆ. ಜೊತೆಗೆ ಐಟಿ ಕಾಯಿದೆಯಡಿ ಮೊಕದ್ದಮೆ ಹೂಡುವವರೆಗೆ ಚಾಚಿಕೊಳ್ಳುತ್ತವೆ.

  • ನಮ್ಮ ದೇಶ ಅಜ್ಮಲ್ ಕಸಬ್‌ಗೂ ನ್ಯಾಯಯುತ ವಿಚಾರಣೆಯ ಅವಕಾಶ ನೀಡಿದೆ ಎಂದು ನನಗೆ ಹೆಮ್ಮೆ ಅನಿಸುತ್ತದೆ. ಆದರೂ ಸಂತ್ರಸ್ತರು ದೂರು ದಾಖಲಿಸುವಲ್ಲಿ ತೊಂದರೆ ಎದುರಿಸುತ್ತಿದ್ದಾರೆ.

  • ಅಸಮರ್ಪಕ ವೇತನ ವ್ಯವಸ್ಥೆಯಿಂದಾಗಿ ಶೇ 28ರಷ್ಟು ಪೊಲೀಸ್‌ ಪೇದೆಗಳು ಕೊಳೆಗೇರಿಗಳಲ್ಲಿ ಜೀವಿಸುತ್ತಿದ್ದಾರೆ. ಮುಂಬೈನಲ್ಲಿ ಸುಮಾರು 3ನೇ 1 ಭಾಗದಷ್ಟು ಪೊಲೀಸ್ ಪೇದೆಗಳು ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ.

  • ಸಾರ್ವಜನಿಕರ ಬೇಡಿಕೆ, ಮಾಧ್ಯಮ ವರದಿಗಳು ಮತ್ತು ರಾಜಕೀಯ ಹೇಳಿಕೆಗಳಿಂದ ಶಂಕಿತರನ್ನು ಬಂಧಿಸಲು ಪೊಲೀಸರ ಮೇಲೆ ಒತ್ತಡ ಇದ್ದು ಇದು ಅಪರಾಧ ನ್ಯಾಯ ವ್ಯವಸ್ಥೆಯನ್ನು ಕಾಡುತ್ತಿರುವ ಮತ್ತೊಂದು ಕಾಯಿಲೆ.  

  • ನ್ಯಾಯಾಂಗ ಪ್ರಕ್ರಿಯೆಯನ್ನು ಗಣನೆಗೆ ತೆಗೆದುಕೊಳ್ಳದೆ ಕೆಲ ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು ʼಮಾಧ್ಯಮ ವಿಚಾರಣೆʼ ನಡೆಸುತ್ತಿವೆ.   

  • ನ್ಯಾಯಾಂಗ ವ್ಯವಸ್ಥೆಯಲ್ಲಿ ಏನೇ ಸುಧಾರಣೆಗಳು ಆರಂಭವಾಗುವುದಿದ್ದರೂ ವಿಚಾರಣಾ ನ್ಯಾಯಾಲಯ ಮತ್ತು ಜಿಲ್ಲಾ ನ್ಯಾಯಾಲಯಗಳಿಂದ ಪ್ರಾರಂಭವಾಗಬೇಕು.

Kannada Bar & Bench
kannada.barandbench.com