ಕೈಬರಹ ದಾಖಲೆಗಳನ್ನು ನ್ಯಾಯಾಲಯ ಪರಿಗಣಿಸದ ದಿನಗಳು ದೂರವಿಲ್ಲ: ಹೈಕೋರ್ಟ್‌

"ಕೈಬರಹದ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಲ್ಲಿಸುವುದು ನ್ಯಾಯಾಂಗ ಪ್ರಕ್ರಿಯೆ ಭಾಗವಾಗಲಿದ್ದು, ಇಂದು ಅದು ಅತ್ಯಂತ ಮುಖ್ಯವಾಗಿದೆ" ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
Karnataka HC (Dharwad Bench) - Justices Suraj Govindaraj and G Basavaraja
Karnataka HC (Dharwad Bench) - Justices Suraj Govindaraj and G Basavaraja

ಹಾಲಿ ಇರುವ ಡಿಜಿಟಲ್‌ ದಾಖಲೆಗಳನ್ನು ಹಂಚಿಕೊಳ್ಳಲು ಕಾರ್ಯವಿಧಾನ ರೂಪಿಸುವ ಸಲುವಾಗಿ ಕಾರ್ಯ ಪಡೆ ರಚಿಸಲು ಮತ್ತು ಎಲ್ಲಾ ಕಾನೂನಾತ್ಮಕ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಲು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ನಿರ್ದೇಶಿಸಿದೆ.

ಪತ್ನಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಪುನೀತ್‌ ಮತ್ತು ಮೂರು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಅವರ ತಾಯಿ ಗೋದಾವರಿ ಅವರ ವಿರುದ್ಧದ ಶಿಕ್ಷೆಯನ್ನು ನ್ಯಾಯಮೂರ್ತಿಗಳಾದ ಸೂರಜ್‌ ಗೋವಿಂದರಾಜ್‌ ಮತ್ತು ಜಿ ಬಸವರಾಜ್‌ ಅವರ ನೇತೃತ್ವದ ಪೀಠವು ಬದಿಗೆ ಸರಿಸಿ, ಆದೇಶ ಮಾಡಿದೆ.

ಪೊಲೀಸ್‌ ವಿಭಾಗದ ಮಾಹಿತಿ ತಂತ್ರಜ್ಞಾನ ಘಟಕದ ಮುಖ್ಯಸ್ಥರು, ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋವಿನ ನಿರ್ದೇಶಕರು ನಾಮನಿರ್ದೇಶನ ಮಾಡಿದ ಸದಸ್ಯ, ಅಪರಾಧ ಮತ್ತು ಅಪರಾಧಿಯ ನಿಗಾ ನೆಟ್‌ವರ್ಕ್‌ ಮತ್ತು ವ್ಯವಸ್ಥೆಯ (ಸಿಸಿಟಿಎನ್ಎಸ್‌) ನಿರ್ದೇಶಕರ ಪ್ರತಿನಿಧಿಯನ್ನು ಕಾರ್ಯಪಡೆ ಒಳಗೊಳ್ಳಬೇಕು ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ಕೈಬರಹದ ಯಾವುದೇ ದಾಖಲೆಯನ್ನು ನ್ಯಾಯಾಲಯವು ಒಪ್ಪುವ ಅಥವಾ ಪಡೆದುಕೊಳ್ಳದೇ ಇರುವ ದಿನ ತುಂಬಾ ದೂರವಿಲ್ಲ. ಕೈಬರಹದ ದಾಖಲೆಗಳನ್ನು ಡಿಜಿಟಲ್‌ ರೂಪದಲ್ಲಿ ಸಲ್ಲಿಸುವುದು ನ್ಯಾಯಾಂಗ ಪ್ರಕ್ರಿಯೆ ಭಾಗವಾಗಲಿದ್ದು, ಇಂದು ಅದು ಅತ್ಯಂತ ಮುಖ್ಯವಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಪೊಲೀಸ್‌ ಇಲಾಖೆಯು ಮಂದಗತಿಯಲ್ಲಿ ದಾಖಲೆಗಳ ಡಿಜಿಟಲೀಕರಣ ಮಾಡುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಲಯವು “ಪೊಲೀಸ್‌ ಇಲಾಖೆಯ ಮಾಹಿತಿ ತಂತ್ರಜ್ಞಾನ ವಿಭಾಗವು 2008ರಲ್ಲಿ ಡಿಜಿಟೈಷೇನ್‌ ಆರಂಭಿಸಿದ್ದು, ಹಾಲಿ ಪ್ರಕರಣದಲ್ಲಿ 2019ರಲ್ಲೂ ಕೈಬರಹದ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ” ಎಂದಿದೆ.

ಕೈಬರಹ ಸರಿಯಿಲ್ಲದಿರುವುದರಿಂದ ತನಿಖಾಧಿಕಾರಿಯು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ದಾಖಲೆಗಳ ಪರಿಶೀಲನೆ ಕಷ್ಟಕರವಾಗಿದೆ. ಪ್ರತಿ ಸಾಲಿನ ನಡುವೆ ಅಗತ್ಯವಾದಷ್ಟು ಅಂತರವನ್ನು ಬಿಡಲಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ. “ಹಾಳೆಗಳನ್ನು ಒಳಗೊಂಡ ಪುಸ್ತಕದ ತುಂಬಾ ಬರೆಯಲಾಗಿದ್ದು, ಸಾಕಷ್ಟು ಜೆರಾಕ್ಸ್‌ ಪ್ರತಿ ತೆಗೆದಿರುವುದರಿಂದ ಅದು ಮಾಸಿದೆ. ಹೀಗಾಗಿ, ಮೂಲ ದಾಖಲೆ ದಾಖಲೆಗಳನ್ನು ಪರಿಶೀಲಿಸುವುದು ಅಗತ್ಯವಾಗಿದೆ. ಸಾಕಷ್ಟು ಸಮಯ ಕಳೆದಿರುವುದರಿಂದ ಮೂಲ ದಾಖಲೆಯಲ್ಲಿನ ಕೆಲವು ಸ್ಥಳ ಮಾಸಿದ್ದು, ಗೋಜಲಾಗಿದ್ದು, ಹರಿದಿವೆ” ಎಂದು ಆದೇಶದಲ್ಲಿ ಹೇಳಲಾಗಿದೆ.

ಹೇಳಿಕೆಗಳನ್ನು ಕೈಬರಹದಲ್ಲಿನ ಬದಲಿಗೆ ಡಿಜಿಟಲ್‌ ಪ್ರಕ್ರಿಯೆಯ ಮೂಲಕ ಸೂಕ್ತ ತಂತ್ರಾಂಶದಲ್ಲಿ ದಾಖಲಿಸುವ ಸಂಬಂಧ ಎಲ್ಲಾ ತನಿಖಾಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡುವಂತೆ ಪೊಲೀಸ್‌ ಮಹಾನಿರ್ದೇಶಕರಿಗೆ ನ್ಯಾಯಾಲಯ ಆದೇಶಿಸಿದೆ.

ಕಾರ್ಯಪಡೆ ರಚಿಸುವಾಗ ಪರಿಗಣಿಸಬೇಕಾದ ವಿಚಾರಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಹಲವು ನಿರ್ದೇಶನಗಳನ್ನು ನೀಡಿದೆ. ಅವು ಇಂತಿವೆ:

  1. ಎಲ್ಲಾ ಎಂಟ್ರಿಗಳನ್ನು ಡಿಜಿಟಲ್‌ ರೂಪದಲ್ಲಿ ಅಡಕಗೊಳಿಸಬೇಕು. ತನಿಖಾಧಿಕಾರಿಗಳು ಮತ್ತು ಇತರ ವ್ಯಕ್ತಿಗಳು ಡಿಜಿಟಲ್‌ ರೂಪದಲ್ಲಿ ದಾಖಲೆಗಳಿಗೆ ಸಹಿ ಮಾಡಬೇಕು. ಡಿಜಿಟಲ್‌ ಸಹಿಗಳು ಸಿಗದಿದ್ದರೆ ಭೌತಿಕವಾಗಿ ಸಹಿ ಪಡೆದು, ಅದನ್ನು ಸ್ಕ್ಯಾನ್‌ ಮಾಡಿ, ಪೊಲೀಸ್‌ ಐಟಿ ವ್ಯವಸ್ಥೆಗೆ ಅಪ್‌ಲೋಡ್‌ ಮಾಡಬೇಕು.

  2. ಎಫ್‌ಐಆರ್‌, ಆರೋಪ ಪಟ್ಟಿ ಮತ್ತು ಇತರೆ ದಾಖಲೆಗಳು ಡಿಜಿಟಲ್‌ ರೂಪದಲ್ಲಿ ಇರಬೇಕು. ಅದನ್ನು ಇಂಟರ್‌ಆಪರಬಲ್‌ ಕ್ರಿಮಿನಲ್‌ ಜುಡಿಷಿಯಲ್‌ ಸಿಸ್ಟಂ (ಐಸಿಜೆಎಸ್‌) ಮೂಲಕ ನ್ಯಾಯಾಲಯಗಳ ಜೊತೆ ಹಂಚಿಕೊಳ್ಳಬೇಕು.

  3. ಅಗತ್ಯ ಉಲ್ಲೇಖಗಳಿಗಾಗಿ ತನಿಖಾ ಸಂಸ್ಥೆಗಳು ಸಿಸಿಟಿಎನ್‌ಎಸ್‌ನಲ್ಲಿ ಅಪರಾಧ ಮತ್ತು ಅಪರಾಧಿಗಳ ಮಾಹಿತಿಯನ್ನು ನಿರ್ವಹಿಸುತ್ತಿದ್ದು, ಅದನ್ನು ಕಾನೂನು ಪ್ರಕಾರ ಬಳಕೆ ಮಾಡಲಾಗುತ್ತಿದೆ. ಅದನ್ನೇ ಅಪರಾಧಿ ಮತ್ತು ಅಪರಾಧಕ್ಕೆ ಸಂಬಂಧಿಸಿದ ವಿಶ್ವಸನೀಯ ಮೂಲ ಎಂದು ಪರಿಗಣಿಸಿ, ಅದು ನ್ಯಾಯಾಲಯ ನಿರ್ವಹಿಸುತ್ತಿರುವ ಪ್ರಕರಣಗಳ ಮಾಹಿತಿ ವ್ಯವಸ್ಥೆ (ಕೇಸ್‌ ಇನ್‌ಫರ್ಮೇಶನ್‌ ಸಿಸ್ಟಂ - ಸಿಐಎಸ್)‌ ಲಭ್ಯವಾಗುವಂತೆ ಮಾಡಬೇಕು. ಇದು ಐಸಿಜೆಎಸ್‌ ಗುರಿ ಸಾಧನೆಯ ಉದ್ದೇಶವನ್ನು ಹೊಂದಿದೆ.

  4. ಎಫ್‌ಐಆರ್‌ಗಳು, ಅಪರಾಧ ವಿವರ ದಾಖಲೆಗಳು, ಬಂಧನ ಮೆಮೊ, ಶೋಧ/ವಶ ಪಟ್ಟಿ, ಮಹಜರ್‌ಗಳು, ಹೇಳಿಕೆಗಳು, ತನಿಖೆಯ ಸಂದರ್ಭದಲ್ಲಿ ಆಸ್ಪತ್ರೆಯಿಂದ ಪಡೆಯಲಾದ ದಾಖಲೆಗಳು, ಸಾರಿಗೆ ಪ್ರಾಧಿಕಾರಗಳು, ವಿಧಿ ವಿಜ್ಞಾನ ಪ್ರಯೋಗಾಲಯ ಇತ್ಯಾದಿ, ಆರೋಪ ಪಟ್ಟಿಗಳು, ಬಿ ಮತ್ತು ಸಿ ವರದಿಗಳು ಇತ್ಯಾದಿಗಳನ್ನು ಡಿಜಿಟಲ್‌ ರೂಪದಲ್ಲಿ ಸಿದ್ಧಪಡಿಸಿ, ಸಹಿ ಮಾಡಿ ಅವುಗಳನ್ನು ಜಾಮೀನು ಮನವಿ, ವಿಚಾರಣೆ, ಮೇಲ್ಮನವಿ, ತೀರ್ಪು ಮರುಪರಿಶೀಲನೆ ನಡೆಸುವ ನ್ಯಾಯಾಲಯಗಳ ಜೊತೆ ಹಂಚಿಕೊಳ್ಳಬೇಕು.

  5. ಎಫ್‌ಐಆರ್‌ ಮತ್ತು ನ್ಯಾಯಾಲಯದಲ್ಲಿನ ಪ್ರಕರಣವನ್ನು ಜೋಡಿಸಬೇಕು. ಹೀಗೆ ಮಾಡುವುದರಿಂದ ದತ್ತಾಂಶ ಹಂಚಿಕೆ ಸುಲಭವಾಗಲಿದೆ.

  6. ಮಹಜರ್‌ ಇತ್ಯಾದಿಯನ್ನು ವಿದ್ಯುನ್ಮಾನ ರೂಪದಲ್ಲಿ ದಾಖಲು ಮಾಡಿಕೊಳ್ಳಲು ತನಿಖಾಧಿಕಾರಿಗೆ ಅಗತ್ಯವಾದ ಸಾಧನಗಳನ್ನು ಒದಗಿಸಬೇಕು. ಮಹಜರ್‌ ಸ್ಥಳದ ಫೋಟೊ ಅಥವಾ ವಿಡಿಯೊ ಮಾಡಲು ಸಾಧನಗಳನ್ನು ನೀಡಬೇಕು. ಇದಕ್ಕೆ ಬಾಡಿ ಕ್ಯಾಮೆರಾಗಳನ್ನು ಬಳಸಬಹುದಾಗಿದೆ. ಆನಂತರ ಅದನ್ನು ನೇರವಾಗಿ ಪೊಲೀಸ್‌ ಐಟಿಗೆ ಅಪ್‌ಲೋಡ್‌ ಮಾಡಬಹುದಾಗಿದೆ. ಇದರಿಂದ ಸಮಗ್ರತೆ ಮತ್ತು ಸತ್ಯಾಸತ್ಯತೆ ನಿರ್ವಹಿಸಲು ಸುಲಭವಾಗಲಿದೆ. ಡೆತ್‌ ನೋಟ್‌ ದಾಖಲಿಸಿಕೊಳ್ಳಲು ಅವುಗಳನ್ನು ಬಳಸಬಹುದಾಗಿದ್ದು, ನೇರವಾಗಿ ಅದನ್ನು ಪೊಲೀಸ್‌ ಐಟಿ ಸರ್ವರ್‌ಗೆ ಅಪ್‌ಲೋಡ್‌ ಮಾಡಬಹುದಾಗಿದೆ. ಇದರಿಂದ ಹಾಲಿ ಪ್ರಕರಣದಲ್ಲಿ ತನಿಖಾಧಿಕಾರಿಯು ಮೂರನೇ ಖಾಸಗಿ ವ್ಯಕ್ತಿಯಿಂದ ಪಡೆದಿರುವ ಸೇವೆ, ಅಗತ್ಯಗಳನ್ನು ತಡೆಯಬಹುದಾಗಿದೆ.

  7. ಎಲೆಕ್ಟ್ರಾನಿಕ್‌ ಸಾಕ್ಷ್ಯ ಅಗತ್ಯವಾದರೆ ಪರಿಗಣಿಸಲ್ಪಟ್ಟಿರುವ ಎಫ್‌ಎಸ್‌ಎಲ್‌, ಆರ್‌ಎಫ್‌ಎಸ್‌ಎಲ್‌ ಅಥವಾ ಪೊಲೀಸ್‌ ಮಹಾನಿರ್ದೇಶಕರು ಸೂಚಿಸಿರುವ ಯಾವುದೇ ತೆರನಾದ ಮೊಬೈಲ್‌ ಘಟಕ ಅಥವಾ ನಿರ್ದಿಷ್ಟ ಘಟಕದ ಮೂಲಕ ಪ್ರಸ್ತುತಪಡಿಸಬಹುದಾಗಿದೆ.

  8. ತನಿಖಾ ದಳ, ವಿಧಿ ವಿಜ್ಞಾನ ಪ್ರಯೋಗಾಲಯ, ಜೈಲು ಅಥವಾ ಇನ್ನಾವುದೇ ಘಟಕದ ದತ್ತಾಂಶವನ್ನು ಸಮಗ್ರಗೊಳಿಸಬೇಕು.

Related Stories

No stories found.
Kannada Bar & Bench
kannada.barandbench.com