ನೀಟ್ ಪೇಪರ್ ಸೋರಿಕೆ ಆರೋಪ: ಎನ್‌ಟಿಎಯಿಂದ ಸಕಾಲಿಕ ಕ್ರಮ ನಿರೀಕ್ಷಿಸುತ್ತೇವೆ ಎಂದ ಸುಪ್ರೀಂ ಕೋರ್ಟ್‌

ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪದ ಜೊತೆಗೆ ಅಂಕ ನೀಡುವಲ್ಲಿ ಅನುಸರಿಸಿದ ಕಾರ್ಯವಿಧಾನವನ್ನು ಸಹ ವಿದ್ಯಾರ್ಥಿಗಳು ಪ್ರಶ್ನಿಸಿದ್ದು, 2024ರ ಪರೀಕ್ಷೆ ವಿವಾದದ ಸುಳಿಯಲ್ಲಿ ಸಿಲುಕಿದೆ.
NEET
NEET

ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶಾತಿ ಪದವಿ ಪರೀಕ್ಷೆಯ (ನೀಟ್‌ ಯುಜಿ 2024)  ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ವ್ಯಾಪಕ ಆರೋಪಗಳ ಮಧ್ಯೆ ತಾನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಯಿಂದ ಸಕಾಲಿಕ ಕ್ರಮ ನಿರೀಕ್ಷಿಸುತ್ತಿರುವುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ತಿಳಿಸಿದೆ.

ಕಳೆದ ತಿಂಗಳು (ಮೇ) ನಡೆದ ನೀಟ್ ಪರೀಕ್ಷೆ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಎಸ್‌ ವಿ ಎನ್ ಭಟ್ಟಿ ಅವರಿದ್ದ ರಜಾಕಾಲೀನ ಪೀಠ “ನಿಮ್ಮಿಂದ (ಎನ್‌ಟಿಎ) ಸಕಾಲಿಕ ಕ್ರಮ ನಿರೀಕ್ಷಿಸುತ್ತೇವೆ ಜುಲೈ 8 ರಂದು ಅರ್ಜಿ ಆಲಿಸಲಾಗುವುದು” ಎಂದು ತಿಳಿಸಿತು.

ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪದ ಜೊತೆಗೆ ಅಂಕ ನೀಡುವಲ್ಲಿ ಅನುಸರಿಸಿದ ಕಾರ್ಯವಿಧಾನವನ್ನು ಸಹ ವಿದ್ಯಾರ್ಥಿಗಳು ಪ್ರಶ್ನಿಸಿದ್ದು, 2024ರ ಪರೀಕ್ಷೆ ವಿವಾದದ ಸುಳಿಯಲ್ಲಿ ಸಿಲುಕಿದೆ. 

ಪರೀಕ್ಷೆ ಬರೆಯಲು ಕಡಿಮೆ ಕಾಲಾವಕಾಶ ದೊರೆತಿದ್ದ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ಬರೆಯುವ ಇಲ್ಲವೇ ಸಮಯದ ನಷ್ಟ ಅನುಭವಿಸಿದ್ದಕ್ಕಾಗಿ ಈ ಹಿಂದೆ ನೀಡಲಾಗಿದ್ದ ಕೃಪಾಂಕ ತ್ಯಜಿಸುವ ಆಯ್ಕೆ ಇದೆ ಎಂದು ಕೇಂದ್ರ ಸರ್ಕಾರ ಜೂನ್ 13 ರಂದು, ಅರ್ಜಿಯೊಂದರ ವಿಚಾರಣೆಯ ಸಂದರ್ಭದಲ್ಲಿ ತಿಳಿಸಿತ್ತು. 

ಜೂನ್ 4 ರಂದು ಪ್ರಕಟವಾದ ನೀಟ್‌ ಯುಜಿ ಪರೀಕ್ಷೆ ಫಲಿತಾಂಶ ವಿವಾದಕ್ಕೆ ಕಾರಣವಾಗಿದ್ದು 67 ವಿದ್ಯಾರ್ಥಿಗಳು 720ಕ್ಕೆ 720ರಷ್ಟು ಸಂಪೂರ್ಣ ಅಂಕಗಳಿಸಿ ಮೊದಲ ರ‍್ಯಾಂಕ್ ಪಡೆದಿರುವುದು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.

ಪ್ರಕರಣದಲ್ಲಿ ತಾನು ಸೂಕ್ತ ಪ್ರತಿಕ್ರಿಯೆ ಸಲ್ಲಿಸುವವರೆಗೆ ಆರೋಪಗಳ ಬಗ್ಗೆ ಯಾವುದೇ ಅಭಿಪ್ರಾಯ ಕಟ್ಟಿಕೊಳ್ಳಬಾರದು ಎಂದು ಕೇಂದ್ರ ಸರ್ಕಾರ ಇಂದಿನ ವಿಚಾರಣೆ ವೇಳೆ ತಿಳಿಸಿದೆ. ಆದರೆ ವಿದ್ಯಾರ್ಥಿಗಳ ಶ್ರಮವನ್ನು ಮರೆಯಲು ಸಾಧ್ಯವಿಲ್ಲ ಎಂದು ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು ಹೇಳಿದರು.

ಆಗ ನ್ಯಾಯಾಲಯ "ಹೀಗೆ ಪರೀಕ್ಷೆ ಬರೆದ ವೈದ್ಯ ಚಿಕಿತ್ಸೆ ನೀಡುವುದನ್ನು ಕಲ್ಪಿಸಿಕೊಳ್ಳಿ" ಎಂದು ಬೇಸರಿಸಿತು. ಪರೀಕ್ಷಾ ಅಕ್ರಮದ ವಿಚಾರವಾಗಿ ಪ್ರಸ್ತಾಪಿಸುತ್ತಾ, "ಎಷ್ಟು ಮೊಬೈಲ್‌ ಬಳಸಲಾಗಿದೆ, ಎಂಬಿತ್ಯಾದಿ ಸಂಗತಿಗಳನ್ನು ಪರಿಶೀಲಿಸಬೇಕು" ಎಂದು ಸೂಚಿಸಿತು.

Kannada Bar & Bench
kannada.barandbench.com