ತೀಸ್ ಹಜಾರಿ ನ್ಯಾಯಾಲಯದ ಕೋಣೆಯಲ್ಲಿ ಅಕ್ಕಿ ಚೆಲ್ಲಿದ ವೈದ್ಯನಿಗೆ ದಂಡ: ವಾಮಾಚಾರದ ಶಂಕೆ ವ್ಯಕ್ತಪಡಿಸಿದ ವಕೀಲರು

ನೆಲದ ಮೇಲೆ ಬಿದ್ದಿದ್ದ ಅಕ್ಕಿ ತೆಗೆಯುವವರೆಗೂ ನ್ಯಾಯಾಲಯದ ಕಲಾಪಗಳು ನಡೆಯಲಿಲ್ಲ. ಇದು ವಾಮಾಚಾರವಾಗಿರಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ ವಕೀಲರು ನ್ಯಾಯಾಲಯದ ವೇದಿಕೆ ಬಳಿಗೆ ತೆರಳಲು ಹಿಂಜರಿಯುತ್ತಿದ್ದರು.
Tis Hazari District Courts
Tis Hazari District Courts
Published on

ನ್ಯಾಯಾಲಯ ಕಲಾಪದ ಕೋಣೆಯಲ್ಲಿ ಅಕ್ಕಿ ಚೆಲ್ಲಿ ಅದರ ಕಲಾಪಕ್ಕೆ ಅಡ್ಡಿಪಡಿಸಿದ ವೈದ್ಯರೊಬ್ಬರಿಗೆ ದೆಹಲಿಯ ತೀಸ್ ಹಜಾರಿಯಲ್ಲಿರುವ ವಿಚಾರಣಾ ನ್ಯಾಯಾಲಯ ₹2,000 ದಂಡ ವಿಧಿಸಿದ್ದು ನ್ಯಾಯಾಲಯದಲ್ಲಿ ಹಾಜರಿದ್ದ ವಕೀಲರು ಇದು ವಾಮಾಚಾರ ಇರಬಹುದು ಎಂದು ಶಂಕಿಸಿದರು.

ಕೊಲೆ ಆರೋಪ ಹೊತ್ತಿರುವ ಚಂದರ್ ವಿಭಾಸ್ ಎಂಬ ಶಸ್ತ್ರಚಿಕಿತ್ಸಕ ಆಗಸ್ಟ್ 11ರಂದು ನ್ಯಾಯಾಲಯದ ವಿಚಾರಣಾ ಹಾಲ್‌ನ ನೆಲದ ಮೇಲೆ ಉದ್ದೇಶಪೂರ್ವಕವಾಗಿ ಅಕ್ಕಿ ಎಸೆದಿದ್ದ ಎಂದು ನ್ಯಾಯಾಲಯದ ದಾಖಲೆಗಳು ತಿಳಿಸಿವೆ.

Also Read
ಒಂದೇ ವಿವಾದಕ್ಕೆ ಸಂಬಂಧಿಸಿದಂತೆ ಎಂಟು ಬಾರಿ ಅರ್ಜಿ ಸಲ್ಲಿಕೆ: ಐವರು ದಾವೆದಾರರಿಗೆ ₹10 ಲಕ್ಷ ದಂಡ ವಿಧಿಸಿದ ಹೈಕೋರ್ಟ್

ಘಟನೆಯಿಂದಾಗಿ ನ್ಯಾಯಾಲಯದ ಕಲಾಪಕ್ಕೆ 15-20 ನಿಮಿಷಗಳ ಕಾಲ ಅಡಚಣೆ ಉಂಟಾಯಿತು. ವೈದ್ಯನ ಈ ಕೃತ್ಯ ನ್ಯಾಯಾಂಗ ವಿಚಾರಣೆಯ ಸಮಯದಲ್ಲಿ ಸಾರ್ವಜನಿಕ ಸೇವಕರಿಗೆ ಉದ್ದೇಶಪೂರ್ವಕ ಅವಮಾನ ಅಥವಾ ಅಡ್ಡಿಪಡಿಸುವುದಕ್ಕೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆ , 2023 ರ ಸೆಕ್ಷನ್ 267ರ ಉಲ್ಲಂಘನೆ ಎಂದು  ನ್ಯಾಯಾಧೀಶೆ ಶೆಫಾಲಿ ಬರ್ನಾಲಾ ಟಂಡನ್ ಹೇಳಿದರು.

"ವೃತ್ತಿಯಲ್ಲಿ ಶಸ್ತ್ರಚಿಕಿತ್ಸಕರಾಗಿದ್ದು, ವಿದ್ಯಾವಂತ, ಗಣ್ಯ ವರ್ಗಕ್ಕೆ ಸೇರಿದವರು ಎಂದು ಹೇಳಲಾಗುವ ಪ್ರಸ್ತುತ ಆರೋಪಿ ಡಾ. ಚಂದರ್ ವಿಭಾಸ್ ಅವರು ಅನುಚಿತವಾಗಿ ವರ್ತಿಸಿ ನ್ಯಾಯಾಲಯದ ವಿಚಾರಣೆಗೆ ಅಡಚಣೆ ಉಂಟುಮಾಡಿದ್ದಾರೆ ಎಂಬುದು ಅಚ್ಚರಿಯೂ, ಆಘಾತಕಾರಿಯೂ ಆದ ಸಂಗತಿ" ಎಂದು ನ್ಯಾಯಾಲಯ ಹೇಳಿದೆ.

ಇದು ಮಾಟ- ಮಂತ್ರವಾಗಿರಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ ವಕೀಲರು ನ್ಯಾಯಾಲಯದ ವೇದಿಕೆ ಬಳಿಗೆ ತೆರಳಲು ಹಿಂಜರಿಯುತ್ತಿದ್ದರು. ನೆಲದ ಮೇಲೆ ಬಿದ್ದಿದ್ದ ಅಕ್ಕಿ ತೆಗೆಯುವವರೆಗೂ ನ್ಯಾಯಾಲಯದ ಕಲಾಪಗಳು ನಡೆಯಲಿಲ್ಲ.

ಚೆಲ್ಲಿದ ಅಕ್ಕಿಯನ್ನು ವೈದ್ಯನಿಗೆ ಎತ್ತಿಕೊಳ್ಳುವಂತೆ ನಿರ್ದೇಶಿಸಿದ ನ್ಯಾಯಾಲಯ ಸ್ವಚ್ಛಗೊಳಿಸುವುದಕ್ಕಾಗಿ ಕಸ ಗುಡಿಸುವವರನ್ನು ಕರೆತರುವಂತೆ ಸಿಬ್ಬಂದಿಗೆ ಸೂಚಿಸಿತು. ಕಸಗುಡಿಸುವವರು ಬರುವವರೆಗೂ ಸುಮಾರು ಹತ್ತು ನಿಮಿಷಗಳ ಕಾಲ ನ್ಯಾಯಾಲಯದ ಕಲಾಪ ಸ್ಥಗಿತಗೊಂಡಿತು.

ವಿಚಾರಿಸಿದಾಗ, ವೈದ್ಯರು ತನ್ನ ಕೈಯಲ್ಲಿದ್ದ ಸ್ವಲ್ಪ ಅಕ್ಕಿ ಕೆಳಗೆ ಬಿದ್ದಿದೆ ಎಂದು ಹೇಳಿದರು. ಆದರೆ, ನ್ಯಾಯಾಲಯದ  ವಿಚಾರಣೆಗೆ ಹಾಜರಾಗುವಾಗ ಅವರ ಕೈಯಲ್ಲಿ ಅಕ್ಕಿ ಏಕೆ ಇತ್ತು ಎಂಬುದನ್ನು ಆತ ವಿವರಿಸಲಿಲ್ಲ.

ಈ ಹಿಂದೆ ಅಂದರೆ ಆಗಸ್ಟ್ 2ರಂದು ಕೂಡ ಇದೇ  ಆರೋಪಿ ಹಾಜರಾಗಿದ್ದಾಗ  ನ್ಯಾಯಾಲಯದ ನೆಲದ ಮೇಲೆ ಅಕ್ಕಿ ಪತ್ತೆಯಾಗಿತ್ತು ಎಂದು ನ್ಯಾಯಾಲಯದ ಸಿಬ್ಬಂದಿ ನ್ಯಾಯಾಧೀಶರಿಗೆ ತಿಳಿಸಿದರು.

ತಾನು ಅಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಿದ್ದಾಗಿ ವೈದ್ಯ ತಿಳಿಸಿದನಾದರೂ ಆತ ಭೌತಿಕವಾಗಿಯೇ ಹಾಜರಿದ್ದ  ಎಂಬುದನ್ನು ನ್ಯಾಯಾಲಯದ ಆದೇಶ ದೃಢಪಡಿಸಿತು.

 ಕಡೆಗೆ ವೈದ್ಯ ಕ್ಷಮೆಯಾಚಿಸಿದ್ದು ಮತ್ತೊಮ್ಮೆ ಹಾಗೆ ನಡೆದುಕೊಳ್ಳುವುದಿಲ್ಲ ಎಂದು ಆತನ ಪರ ವಕೀಲರು ನ್ಯಾಯಾಲಯಕ್ಕೆ ಭರವಸೆ ನೀಡಿದರು. ಬೇರೆ ಯಾರೋ ಹೀಗೆ ಮಾಡುವಂತೆ ವೈದ್ಯನ ದಾರಿತಪ್ಪಿಸಿರಬೇಕು. ದಯವಿಟ್ಟು ನ್ಯಾಯಾಲಯ ಕರುಣೆ ತೋರಿಸಬೇಕು ಎಂದು ಅವರು ಕೋರಿದರು.      

Also Read
ಭೂವ್ಯಾಜ್ಯಕ್ಕೆ ಕ್ರಿಮಿನಲ್‌ ಪ್ರಕರಣದ ಸ್ವರೂಪ: ದೂರುದಾರರಿಗೆ ₹10 ಲಕ್ಷ ದಂಡ ವಿಧಿಸಿದ ಸುಪ್ರೀಂ

ಆರೋಪಿಯ ಕ್ಷಮೆಯಾಚನೆ ಮತ್ತು ಅವನ ಪಶ್ಚಾತ್ತಾಪದ ಭಾವನೆ ಸೇರಿದಂತೆ ಎಲ್ಲಾ ಸಂದರ್ಭ ಸನ್ನಿವೇಶಗಳನ್ನು ಗಮನಿಸಿದ  ನ್ಯಾಯಾಲಯ ಅಂತಿಮವಾಗಿ ಕಲಾಪ ಮುಗಿಯುವವರೆಗೂ ಆತ ನ್ಯಾಯಾಲಯದಲ್ಲಿಯೇ ಉಳಿಯಬೇಕು ಎಂದು ಆದೇಶಿಸಿತು. ಜೊತೆಗೆ ನ್ಯಾಯಾಂಗ ಕಾರ್ಯಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಆತನಿಗೆ ₹2,000 ದಂಡ ವಿಧಿಸಿತು.

ನ್ಯಾಯಾಲಯದ ಕೋಣೆಯು ನ್ಯಾಯವನ್ನು ಕೋರುವ ಮತ್ತು ನೀಡುವ ಸ್ಥಳವಾಗಿದ್ದು, ಅದರ ಘನತೆಯನ್ನು ಕಾಪಾಡಿಕೊಳ್ಳುವುದು ಕಾನೂನಾತ್ಮಕ ಆಡಳಿತಕ್ಕೆ ಅತ್ಯಗತ್ಯ ಸಂಗತಿ ಎಂದು ನ್ಯಾಯಾಧೀಶರು ತಿಳಿಸಿದರು.

[ಆದೇಶದ ಪ್ರತಿ]

Attachment
PDF
State_v_Chander_Vibhash
Preview
Kannada Bar & Bench
kannada.barandbench.com