ಜಾರಿ ನಿರ್ದೇಶನಾಲಯದ (ಇ ಡಿ) ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿ ವಿಸ್ತರಿಸಿರುವುದುನ್ನು ಪ್ರಶ್ನಿಸಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ [ಸಾಖೇತ್ ಗೋಖಲೆ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಕೇಂದ್ರ ವಿಚಕ್ಷಣಾ ಆಯೋಗದ ಕಾಯಿದೆಯ ಸೆಕ್ಷನ್ 25 ರ ಅಡಿ ಅಧಿಕಾರಾವಧಿ ವಿಸ್ತರಣೆ ಅಸಿಂಧುವಾಗಿದ್ದು ಜಾರಿ ನಿರ್ದೇಶನಾಲಯದ ಹಾಲಿ ನಿರ್ದೇಶಕರ ಅಧಿಕಾರಾವಧಿ ವಿಸ್ತರಿಸುವಂತಿಲ್ಲ ಎಂದು ಕಾಮನ್ ಕಾಸ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಗೋಖಲೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ತಿಳಿಸಿದೆ.
ಅಲ್ಲದೆ ಅಧಿಕಾರಿಗಳು ವಿಚಕ್ಷಣಾ ಅನುಮತಿಯಾಗಿ ಪಡೆಯುವ ವಾರ್ಷಿಕ ಸ್ಥಿರಾಸ್ತಿ ರಿಟರ್ನ್ಸ್ (ಐಪಿಆರ್) ವಿವರವನ್ನು ಇ ಡಿ ನಿರ್ದೇಶಕ ಮಿಶ್ರಾ ಅವರು 2018, 2019 ಮತ್ತು 2020ನೇ ಸಾಲಿನಲ್ಲಿ ಸೂಕ್ತ ರೀತಿಯಲ್ಲಿ ಬಹಿರಂಗಪಡಿಸಿಲ್ಲ ಎಂದು ಕೂಡ ಆರೋಪಿಸಲಾಗಿದೆ. ಇಂತಹ ಲೋಪವಿದ್ದರೂ ಅವರ ಅಧಿಕಾರವಧಿಯನ್ನು ವಿಸ್ತರಿಸಿದ್ದು ಏಕೆ ಎಂದು ಅರ್ಜಿದಾರರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಮಿಶ್ರಾ ಅವರ ಅಧಿಕಾರಾವಧಿಯನ್ನು ಎರಡು ವರ್ಷಗಳಿಂದ ಮೂರು ವರ್ಷಗಳಿಗೆ ಹೆಚ್ಚಿಸುವ ಮೂಲಕ ಅವರ ನೇಮಕಾತಿ ಆದೇಶಕ್ಕೆ ಪೂರ್ವಾನ್ವಯ ಬದಲಾವಣೆ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸೆಪ್ಟೆಂಬರ್ 2021 ರಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು.