ಲೋಕಸಭೆಯಿಂದ ಉಚ್ಛಾಟನೆ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೆಹದ್ರಾಯ್ ವಿರುದ್ಧ ಮೊಯಿತ್ರಾ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಎತ್ತಿಕೊಂಡಾಗ ಮಹುವಾ ಸುಪ್ರೀಂ ಮೆಟ್ಟಿಲೇರಿರುವ ವಿಚಾರ ತಿಳಿದು ಬಂದಿದೆ.
ಮಹುವಾ ಮೊಯಿತ್ರಾ, ಸುಪ್ರೀಂ ಕೋರ್ಟ್
ಮಹುವಾ ಮೊಯಿತ್ರಾ, ಸುಪ್ರೀಂ ಕೋರ್ಟ್

ತಮ್ಮನ್ನು ಇತ್ತೀಚೆಗೆ ಲೋಕಸಭೆಯಿಂದ ಉಚ್ಛಾಟಿಸಿರುವುದನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ನಾಯಕಿ ಮಹುವಾ ಮೊಯಿತ್ರಾ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೆಹದ್ರಾಯ್ ವಿರುದ್ಧ ಮೊಯಿತ್ರಾ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಎತ್ತಿಕೊಂಡಾಗ ಮಹುವಾ ಸುಪ್ರೀಂ ಮೆಟ್ಟಿಲೇರಿರುವ ವಿಚಾರ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯ ಪ್ರಕರಣವನ್ನು ಡಿಸೆಂಬರ್ 14ಕ್ಕೆ ಮುಂದೂಡಿದೆ.

ಸಂಸತ್‌ ಸ್ಥಾನದಿಂದ ಮೊಯಿತ್ರಾ ಅವರನ್ನು ಅನರ್ಹಗೊಳಿಸಲು ನೈತಿಕ ಸಮಿತಿ ಮಾಡಿದ್ದ ಶಿಫಾರಸಿನ ಹಿನ್ನೆಲೆಯಲ್ಲಿ ಲೋಕಸಭೆ ಡಿಸೆಂಬರ್ 8ರಂದು (ಶುಕ್ರವಾರ) ಮೊಯಿತ್ರಾ ಅವರನ್ನು ಸಂಸತ್ತಿನಿಂದ ಹೊರಹಾಕುವ ನಿರ್ಣಯ ಅಂಗೀಕರಿಸಿತ್ತು.

ಸದನದಲ್ಲಿ ಪ್ರಶ್ನೆ ಕೇಳಲು ಮೊಯಿತ್ರಾ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ನಿಶಿಕಾಂತ್ ದುಬೆ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ನೈತಿಕ ಸಮಿತಿಯ ಶಿಫಾರಸು ಮತ್ತು ವರದಿ ಬಂದಿತ್ತು.

ಉದ್ಯಮಿ ದರ್ಶನ್ ಹಿರಾನಂದಾನಿ ಅವರ ಆದೇಶದ ಮೇರೆಗೆ ಅವರ ಪ್ರತಿಸ್ಪರ್ಧಿಯಾದ ಅದಾನಿ ಸಮೂಹದ ಬಗ್ಗೆ ಮೊಯಿತ್ರಾ ಸಂಸತ್ತಿನಲ್ಲಿ ವಿವಿಧ ಪ್ರಶ್ನೆಗಳನ್ನು ಕೇಳಿದ್ದರು ಎಂದು ಆರೋಪಿಸಲಾಗಿತ್ತು. ಮೊಯಿತ್ರಾ ಅವರು ಹಿರಾನಂದಾನಿ ಜೊತೆಗೆ ತಮ್ಮ ಲೋಕಸಭಾ ಲಾಗ್-ಇನ್ ಮಾಹಿತಿ ಹಂಚಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು.

ಮೊಯಿತ್ರಾ ತಪ್ಪಿತಸ್ಥೆ ಎಂದು ಘೋಷಿಸಿದ್ದ ನೈತಿಕ ಸಮಿತಿ ಆಕೆಯ ಲೋಪಗಳಿಗೆ ಕಠಿಣ ಶಿಕ್ಷೆ ಅಗತ್ಯವಿದೆ ಎಂದು ಶಿಫಾರಸು ಮಾಡಿತ್ತು.

ಸದನದಲ್ಲಿ ಪ್ರಶ್ನೆ ಕೇಳಲು ಹಣ ಹಾಗೂ ಉಡುಗೊರೆ ಪಡೆದಿದ್ದಾರೆ ಎಂದು ಆರೋಪಿಸಿದ್ದ ದುಬೆ ಮತ್ತು ದೇಹದ್ರಾಯ್‌ ಅವರ ವಿರುದ್ಧ ಮೊಯಿತ್ರಾ ದೆಹಲಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದರು.

ಆರಂಭದಲ್ಲಿ ದುಬೆ, ದೆಹದ್ರಾಯ್ ಮತ್ತು ಆರೋಪಗಳ ಬಗ್ಗೆ ವರದಿ ಮಾಡಿದ ಹಲವಾರು ಮಾಧ್ಯಮ ಸಂಸ್ಥೆಗಳ ವಿರುದ್ಧ ಮೊಯಿತ್ರಾ ದಾವೆ ಹೂಡಿದ್ದರಾದರೂ ನಂತರ ಮಾಧ್ಯಮ ಸಂಸ್ಥೆಗಳ ವಿರುದ್ಧದ ಮೊಕದ್ದಮೆ ಕೈಬಿಡುವುದಾಗಿ ಹೇಳಿದ್ದರು.

Related Stories

No stories found.
Kannada Bar & Bench
kannada.barandbench.com