ಮದ್ರಾಸ್ ಹೈಕೋರ್ಟ್‌ನ ತೀರ್ಪುಗಳನ್ನು ಇಂಗ್ಲಿಷ್‌ನಿಂದ ತಮಿಳಿಗೆ ಭಾಷಾಂತರಿಸುವುದಕ್ಕಾಗಿ ರಾಜ್ಯ ಅಧಿಕೃತ ಭಾಷಾ (ಶಾಸಕಾಂಗ) ಆಯೋಗಕ್ಕೆ ₹3 ಕೋಟಿ ಮಂಜೂರು ಮಾಡುತ್ತಿರುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸೋಮವಾರ ಘೋಷಿಸಿದ್ದಾರೆ.
ತಮಿಳು ಭಾಷೆಯನ್ನು ಮದ್ರಾಸ್ ಹೈಕೋರ್ಟ್‌ನ ಅಧಿಕೃತ ಭಾಷೆಯನ್ನಾಗಿ ಮಾಡಬೇಕೆಂಬ ತಮಿಳುನಾಡು ಸರ್ಕಾರದ ನಿಲುವಿಗೆ ಅನುಗುಣವಾಗಿ ಈ ನಿಧಿ ಹಂಚಿಕೆ ಇದೆ ಎಂದು ತಮಿಳಿನಲ್ಲಿ ನೀಡಿದ ಹೇಳಿಕೆಯಲ್ಲಿ ಸ್ಟಾಲಿನ್ ತಿಳಿಸಿದ್ದಾರೆ.
ಮದ್ರಾಸ್ ಹೈಕೋರ್ಟ್‌ನ ತೀರ್ಪುಗಳನ್ನು ತಮಿಳಿಗೆ ಭಾಷಾಂತರಿಸುವುದು, 1968ರಲ್ಲಿ ಸಿ ಎನ್ ಅಣ್ಣಾದೊರೈ ಅವರ ನೇತೃತ್ವದಲ್ಲಿ ವಿಧಾನಸಭೆಯಲ್ಲಿ ದ್ವಿಭಾಷಾ ನೀತಿ ಜಾರಿಗೆ ತರುವ ಸರ್ಕಾರದ ʼಐತಿಹಾಸಿಕ ನಿರ್ಣಯʼಕ್ಕೆ ಅನುಗುಣವಾಗಿದೆ. ಅಧಿಕೃತ ಸಂವಹನಕ್ಕಾಗಿ ತಮಿಳು ಮತ್ತು ಇಂಗ್ಲಿಷ್ ಎರಡನ್ನೂ ಬಳಸಲು ದ್ವಿಭಾಷಾ ನೀತಿ ಅನುಮತಿಸಿತ್ತು.