ಪ್ರಧಾನಿ ಮೋದಿ ದ್ವೇಷ ಭಾಷಣ ವಿರುದ್ಧ ಕ್ರಮ ಕೈಗೊಳ್ಳದ ಇಸಿಐ: ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್

ಮೋದಿಯವರ ದ್ವೇಷ ಭಾಷಣಗಳ ವಿರುದ್ಧ ಇಸಿಐಗೆ ಹಲವು ದೂರುಗಳನ್ನು ಸಲ್ಲಿಸಲಾಗಿದ್ದರೂ, ಇಸಿಐ ನೇರವಾಗಿ ನರೇಂದ್ರ ಮೋದಿ ಅವರನ್ನು ಪ್ರಶ್ನೆ ಕೇಳುವ ಬದಲು ಬಿಜೆಪಿಗೆ ಕೇವಲ ಒಂದು ಶೋಕಾಸ್‌ ನೋಟಿಸ್‌ ನೀಡಿದೆ ಎಂದು ಆರೋಪ.
Prime Minister Narendra Modi
Prime Minister Narendra Modi

ಲೋಕಸಭಾ ಚುನಾವಣೆ ವೇಳೆ ದ್ವೇಷ ಭಾಷಣ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದ ವಿವರಣೆ ಪಡೆಯುವಂತೆ ಭಾರತ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ತಮಿಳುನಾಡು ಕಾಂಗ್ರೆಸ್‌ ಸಮಿತಿ (ಟಿಎನ್‌ಸಿಸಿ) ಮದ್ರಾಸ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಮೋದಿಯವರ ದ್ವೇಷ ಭಾಷಣಗಳ ವಿರುದ್ಧ ಇಸಿಐಗೆ ಹಲವು ದೂರುಗಳನ್ನು ಸಲ್ಲಿಸಲಾಗಿದ್ದರೂ, ಇಸಿಐ ನೇರವಾಗಿ ನರೇಂದ್ರ ಮೋದಿ ಅವರನ್ನು ಪ್ರಶ್ನೆ ಕೇಳುವ ಬದಲು ಬಿಜೆಪಿಗೆ ಕೇವಲ ಒಂದು ಶೋಕಾಸ್‌ ನೋಟಿಸ್‌ ನೀಡಿದೆ ಎಂದು ಟಿಎನ್‌ಸಿಸಿ ಅಧ್ಯಕ್ಷ ಕೆ ಸೆಲ್ವಪೆರುಂತಗೈ ಅವರು ಸಲ್ಲಿಸಿರುವ ಅರ್ಜಿ ತಿಳಿಸಿದೆ.

ಅರ್ಜಿಯ ಪ್ರಮುಖಾಂಶಗಳು

  • ಏಪ್ರಿಲ್ 21ರಿಂದ ಅನೇಕ ಚುನಾವಣಾ ಸಭೆಗಳಲ್ಲಿ ಪ್ರಧಾನಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ್ದಾರೆ.

  • ದ್ವೇಷ ಭಾಷಣಗಳಿಗೆ ಸಂಬಂಧಿಸಿದಂತೆ ಖುದ್ದು ಮೋದಿಯೇ ಅಪರಾಧಿಯಾಗಿದ್ದಾರೆ.

  • ಅವಹೇಳನಕಾರಿ ಮತ್ತು ವಿಭಜನಕಾರಿ ಭಾಷಣಗಳಿಗೆ ಮೋದಿ ಅವರೇ ಏಕಮಾತ್ರ ಜವಾಬ್ದಾರರು.

  • ಇಸಿಐ ಮೃದು ಧೋರಣೆ ತಪ್ಪು ಸಂದೇಶ ನೀಡಲಿದ್ದು ದೇಶದ ಸಂಪೂರ್ಣ ಚುನಾವಣಾ ಪ್ರಕ್ರಿಯೆಯ ಸಮಗ್ರತೆಯನ್ನು ಹಾಳುಮಾಡುತ್ತದೆ.

  • ಬಿಜೆಪಿ 2024ರ ಲೋಕಸಭೆ ಚುನಾವಣೆಯನ್ನು ಶತಾಯ ಗತಾಯ ಗೆಲ್ಲಲು ಯತ್ನಿಸುತ್ತಿದ್ದು ಕೋಮುವಾದದ ಮೂಲಕ ವಿಭಜನೆಯ ಪ್ರಚಾರದಲ್ಲಿ ತೊಡಗಿದೆ.

  • ಸ್ವತಃ ಪ್ರಧಾನಿಯೇ ಮುಸ್ಲಿಮರನ್ನು "ನುಸುಳುಕೋರರು" ಮತ್ತು "ಹೆಚ್ಚು ಮಕ್ಕಳನ್ನು ಹೊಂದಿರುವವರು" ಎಂದು ಕರೆದಿದ್ದಾರೆ

  • ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಬಗ್ಗೆ ಮೋದಿ ತಪ್ಪುದಾರಿಗೆಳೆಯುವ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದು ಹೀಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದನ್ನು ತಡೆಯಬೇಕು

  • ವಿರೋಧಿಗಳು ಗೆಲುವು ಸಾಧಿಸಿದರೆ ಹಿಂದೂಗಳ ಸಂಪತ್ತು ಮುಸ್ಲಿಮರ ಕೈ ಸೇರುತ್ತಾರೆ ಎಂಬ ಅವರ ಮಾತೂ ಪ್ರತಿರೋಧಕ್ಕೆ ಅರ್ಹವಾದುದು.

  • ಮೇ 1 ರಂದು ಚೆನ್ನೈನಲ್ಲಿರುವ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ಈ ಕುರಿತು ಪತ್ರ ಬರೆದಿದ್ದರೂ ಅವರು ಇದುವರೆಗೆ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಹೈಕೋರ್ಟ್‌ಗೆ ಪ್ರಸ್ತುತ ಅರ್ಜಿ ಸಲ್ಲಿಸಲಾಗಿದ್ದು ಮೋದಿ ಅವರಿಂದ ವಿವರಣೆ ಪಡೆಯುವಂತೆ ಇಸಿಐಗೆ ನಿರ್ದೇಶನ ನೀಡಬೇಕು.

ಅರ್ಜಿಯನ್ನು ಇಂದು ನ್ಯಾಯಮೂರ್ತಿಗಳಾದ ಎ ಡಿ ಜಗದೀಶ್ ಚಂದಿರ ಮತ್ತು ಆರ್ ಕಲೈಮತಿ ಅವರಿದ್ದ ರಜಾಕಾಲೀನ ಪೀಠದೆದುರು ಪ್ರಸ್ತಾಪಿಸಲಾಯಿತು. ಆದರೆ ಪೀಠ, ರಿಜಿಸ್ಟ್ರಿ ಮೂಲಕ ವಿಚಾರಣೆಗೆ ಸಂಖ್ಯೆ ಪಡೆಯುವಂತೆ ಸೂಚಿಸಿತು.

Kannada Bar & Bench
kannada.barandbench.com