

ತಮಿಳುನಾಡಿನಲ್ಲಿ ಕಾನೂನು ಅಧಿಕಾರಿಗಳಿಗೆ ಪಾವತಿಸಲಾಗುತ್ತಿರುವ ಶುಲ್ಕ ಕುರಿತು ಲೆಕ್ಕಪರಿಶೋಧನೆ ನಡೆಸುವಂತೆ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಸೂಚಿಸಿದೆ.
ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರು ಸರ್ಕಾರದ ವಕೀಲರಿಗೆ ಪಾವತಿಸಲಾಗುತ್ತಿರುವ “ಅತಿಯಾದ ಮೊತ್ತಗಳ” ಬಗ್ಗೆ ಗಮನ ಸೆಳೆದಿದ್ದು, ರಾಜ್ಯದಲ್ಲಿ ಸುಮಾರು ಹನ್ನೆರಡು ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳು ಇರುವುದೇ ಮುಜುಗರದ ವಿಚಾರ ಎಂದರು.
“ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳನ್ನೂ ಒಳಗೊಂಡಂತೆ ಅರೆ-ಸರ್ಕಾರಿ ಸಂಸ್ಥೆಗಳು ಕೆಲವು ಕಾನೂನು ಅಧಿಕಾರಿಗಳು ಹಾಗೂ ಹಿರಿಯ ವಕೀಲರಿಗೆ ಹೆಚ್ಚಿನ ಮೊತ್ತ ಪಾವತಿಸುತ್ತಿರುವುದು ನೋಡಿದರೆ ಆಶ್ಚರ್ಯವಾಗುತ್ತದೆ. ನಿವೃತ್ತ ಸಿಬ್ಬಂದಿಯ ಬಾಕಿ ಹಾಣ ಪಾವತಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಮದುರೈ ಕಾಮರಾಜರ್ ವಿಶ್ವವಿದ್ಯಾಲಯ ತನ್ನ ವಕೀಲರಿಗೆ ಅತಿಯಾದ ಶುಲ್ಕ ಪಾವತಿಸುವಾಗ ತೊಂದರೆ ಅನುಭವಿಸುವುದಿಲ್ಲ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.
ಮದುರೈ ನಗರ ಪಾಲಿಕೆ ತನ್ನ ಕಾನೂನು ಶುಲ್ಕವನ್ನು ಪಾವತಿಸಿಲ್ಲವೆಂದು ಆರೋಪಿಸಿ ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದರು. ಆಸಕ್ತಿದಾಯಕವಾಗಿ, ತೀರ್ಪಿನಲ್ಲಿ ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ಪ್ರವಾದಿ ಮುಹಮ್ಮದ್ ಅವರು ಹೇಳಿದ್ದ ʼಶ್ರಮಿಕನ ಬೆವರು ಆರುವ ಮುನ್ನ ಆತನಿಗೆ ವೇತನ ಪಾವತಿಯಾಗಬೇಕುʼ ಎಂಬ ಮಾತನ್ನು ಉಲ್ಲೇಖಿಸಿದರು.
“ಈ ತತ್ವ ನ್ಯಾಯತತ್ವದ ಭಾಗವಾಗಿದ್ದು, ಕಾರ್ಮಿಕ ನ್ಯಾಯಶಾಸ್ತ್ರಕ್ಕೆ ಅತ್ಯಂತ ಸೂಕ್ತವಾಗಿ ಅನ್ವಯಿಸುತ್ತದೆ. ಪ್ರಸ್ತುತ ಪ್ರಕರಣದಲ್ಲಿಯೂ ಇದನ್ನು ಅನ್ವಯಿಸಬಹುದು,” ಎಂದು ನ್ಯಾಯಮೂರ್ತಿ ಹೇಳಿದರು.
ನ್ಯಾಯಮೂರ್ತಿ ನಂತರ ಸಣ್ಣ ಪ್ರಕರಣಗಳಲ್ಲಿಯೂ ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳನ್ನು ನೇಮಿಸುತ್ತಿರುವ ಕುರಿತು ಗಮನ ಸೆಳೆದರು. ಅತಿಯಾದ ಸಂಖ್ಯೆಯಲ್ಲಿ ಕಾನೂನು ಅಧಿಕಾರಿಗಳನ್ನು ನೇಮಿಸುವುದರಿಂದ ಅವರ ಸೇವೆ ಅಗತ್ಯವಿಲ್ಲದ ಪ್ರಕರಣಗಳಿಗೂ ಕೆಲಸ ಹಂಚಲಾಗುತ್ತಿದೆ ಎಂದುಪೀಠ ಟೀಕಿಸಿದೆ. ಸರ್ಕಾರಿ ಬೊಕ್ಕಸದ ಹಣವನ್ನು ಮಿತವಾಗಿ ಬಳಸಬೇಕು; ಅದನ್ನು ತಮಗೆ ಬೇಕಾದ ಕೆಲವರಿಗಷ್ಟೇ ಅಚಾತುರ್ಯವಾಗಿ ಹಂಚಬಾರದು ಎಂಬುದು ಉತ್ತಮ ಆಡಳಿತದ ಮೂಲ ತತ್ವ ಎಂದು ನ್ಯಾಯಾಲಯ ಒತ್ತಿ ಹೇಳಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರದ ಕಾನೂನು ಅಧಿಕಾರಿಗಳಿಗೆ ಪಾವತಿಸಲಾಗುತ್ತಿರುವ ಶುಲ್ಕಗಳ ಕುರಿತು ಲೆಕ್ಕ ಪರಿಶೋಧನೆ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರೂ, ಅಧಿಕೃತ ನಿರ್ದೇಶನ ನೀಡುವುದನ್ನು ಕೋರ್ಟ್ ತಪ್ಪಿಸಿಕೊಂಡಿದೆ.
ಇದಲ್ಲದೆ, ಮದುರೈ ನಗರ ಪಾಲಿಕೆಯಿಂದ ಸುಮಾರು ₹13–14 ಲಕ್ಷ ಕಾನೂನು ಶುಲ್ಕ ಬಾಕಿಯಿದೆ ಎಂದು ವಕೀಲ ಪಿ. ತಿರುಮಲೈ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಿಸಿತು. ಅವರು 14 ವರ್ಷಗಳ ಕಾಲ ಪಾಲಿಕೆಯ ಸ್ಥಾಯಿ ವಕೀಲರಾಗಿದ್ದರೂ, ತೀರ್ಪುಗಳ ಪ್ರಮಾಣಿತ ಪ್ರತಿಗಳನ್ನು ಸಲ್ಲಿಸದ ಕಾರಣ ಪಾವತಿ ತಡೆಯಲಾಗಿದೆ ಎಂದು ಪಾಲಿಕೆ ವಾದಿಸಿತು. ನ್ಯಾಯಾಲಯ ಈ ಬೇಡಿಕೆಯನ್ನು ಇತರ ವಕೀಲರಿಗೆ ಪಾವತಿಸಿದ ಅತಿಯಾದ ಶುಲ್ಕಗಳೊಂದಿಗೆ ಹೋಲಿಸಿ, ಇದು ಅತಿ ಚಿಕ್ಕ ಮೊತ್ತವೆಂದು ಹೇಳಿತು.
ಪ್ರಮಾಣಿತ ಪ್ರತಿಗಳನ್ನು ಪಡೆಯಲು ಅಸಾಧ್ಯವಾಗಿರುವ ಸ್ಥಿತಿಯನ್ನು ಪರಿಗಣಿಸಿ, ಕಾನೂನು ಸೇವೆಗಳ ಪ್ರಾಧಿಕಾರ ಅವುಗಳನ್ನು ಪಡೆದು ವಕೀಲರಿಗೆ ನೀಡುವಂತೆ ನ್ಯಾಯಾಲಯ ನಿರ್ದೇಶಿಸಿತು. ನಂತರ, ಮದುರೈ ನಗರ ಪಾಲಿಕೆ ಎರಡು ತಿಂಗಳೊಳಗೆ ಕಾನೂನು ಶುಲ್ಕ ಪಾವತಿಸಬೇಕು ಎಂದು ಆದೇಶಿಸಲಾಯಿತು. ಆದರೆ, 18 ವರ್ಷಗಳ ವಿಳಂಬವಾಗಿರುವುದಕ್ಕೆ ಬಡ್ಡಿ ಪಾವತಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
[ತೀರ್ಪಿನ ಪ್ರತಿ]