[ಕೋವಿಡ್‌] ಎರಡು ವರ್ಷ ಮೀರಿ ಮುಚ್ಚಿರುವ ಟಿಎನ್‌ಎನ್‌ಎಲ್‌ಯು; ವಿದ್ಯಾರ್ಥಿಗಳ ಆತಂಕ ಅಲ್ಲಗಳೆದ ಕುಲಪತಿ

ವಿದ್ಯಾರ್ಥಿಗಳು ಕಾಲೇಜು ಆರಂಭಿಸುವಂತೆ ಕೋರಿದ್ದಕ್ಕೆ ಕುಲಪತಿ ಪ್ರೊ. ವಿ ಎಸ್‌ ಎಲಿಜಬೆತ್‌ ಅವರು “ನಾನು ನಾಯಕಿಯೇ ಹೊರತು ಕಾರ್ಯಕರ್ತೆಯಲ್ಲ. ಜೀಸಸ್‌ ಹೊರತುಪಡಿಸಿ ನನ್ನ ಜೀವನದಲ್ಲಿ ಯಾರನ್ನೂ ಅನುಸರಿಸಿಲ್ಲ” ಎಂದು ಇಮೇಲ್‌ ಮಾಡಿದ್ದರು.
TNNLU, Trichy
TNNLU, Trichy

ಕೋವಿಡ್‌ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ ತಿರುಚಿರಾಪಳ್ಳಿಯಲ್ಲಿರುವ ತಮಿಳುನಾಡು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವನ್ನು (ಟಿಎನ್‌ಎನ್‌ಎಲ್‌ಯು) ಮುಚ್ಚಲಾಗಿದ್ದು, ಪುನಾರಂಭಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ವಿಶ್ವವಿದ್ಯಾಲಯ ಮತ್ತು ವಿದ್ಯಾರ್ಥಿಗಳ ನಡುವೆ ಸಂಘರ್ಷ ಏರ್ಪಟ್ಟಿದೆ.

ಭೌತಿಕವಾಗಿ ತರಗತಿ ಆರಂಭಿಸುವಂತೆ ನಾಲ್ಕು ಮತ್ತು ಐದನೇ ವರ್ಷದ ವಿದ್ಯಾರ್ಥಿಗಳು ನಿರಂತರವಾಗಿ ವಿಶ್ವವಿದ್ಯಾಲಯದ ಆಡಳಿತಕ್ಕೆ ಇಮೇಲ್‌ ಮೂಲಕ ಕೋರುತ್ತಲೇ ಇದ್ದಾರೆ. ತಮ್ಮ ಸುತ್ತಮುತ್ತ ಹಾಗೂ ದೇಶಾದ್ಯಂತ ವಸತಿ ಕ್ಯಾಂಪಸ್‌ ಅನ್ನು ಪುನಾರಂಭಿಸಿರುವುದನ್ನು ಅವರು ಇಮೇಲ್‌ನಲ್ಲಿ ಉಲ್ಲೇಖಿಸಿದ್ದಾರೆ.

ಆದರೆ, ಇದಾವುದಕ್ಕೂ ಮಣೆ ಹಾಕದ ಕುಲಪತಿ ಪ್ರೊ. ವಿ ಎಸ್‌ ಎಲಿಜಬೆತ್‌ ಅವರು ಸಾಂಕ್ರಾಮಿಕ ರೋಗ ಇರುವುದರಿಂದ ವಿಶ್ವವಿದ್ಯಾಲಯ ತೆರೆಯಲಾಗದು ಎಂದು ಹೇಳಿದ್ದು, ಅದರಿಂದ ಎದುರಾಗಬಹುದಾದ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಕ್ರಿಯಿಸಿದ್ದಾರೆ.

“… ವಿಶ್ವವಿದ್ಯಾಲಯ ಆಡಳಿತ ಮತ್ತು ಉದ್ಯೋಗಿಗಳು ಪ್ರಾಯೋಗಿಕವಾಗಿ ಎದುರಿಸುವ ಸಮಸ್ಯೆ ಮತ್ತು ಅವರ ಕಳಕಳಿ ನಿಮಗೆ ಅರ್ಥವಾಗಿಲ್ಲ. ವಿಶ್ವವಿದ್ಯಾಲಯ ಪುನಾರಂಭಿಸುವುದು ಆಡಳಿತಾತ್ಮಕ ವಿಚಾರವಾಗಿದ್ದು, ಕ್ಯಾಂಪಸ್‌ನಲ್ಲಿ ತರಗತಿ ನಡೆಸುವುದನ್ನು ವಿದ್ಯಾರ್ಥಿ ಸಂಘಟನೆಯ ಜೊತೆ ಸಮಾಲೋಚನೆ ಮಾಡುವ ಅಗತ್ಯವಿಲ್ಲ. ವಿಶ್ವವಿದ್ಯಾಲಯ ಆಡಳಿಯ ಮಂಡಳಿಯು ಭೌತಿಕ ತರಗತಿ ಆರಂಭಿಸುವ ವಿಚಾರವನ್ನು ಕುಲಪತಿಗೆ ಬಿಟ್ಟಿದೆ. ಹಾಗಿದ್ದರೂ, ಹಾಲಿ ಸಾಂಕ್ರಾಮಿಕ ರೋಗದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಿಜಿಸ್ಟ್ರಾರ್‌, ಟಿಎನ್‌ಎನ್‌ಎಲ್‌ಯು ಬೋಧಕರು ಮತ್ತು ಕಾರ್ಯಕಾರಿ ಸಮಿತಿಯ ಜೊತೆ ಚರ್ಚಿಸಿ ನಿರ್ಧಾರ ಕೈಗೊಂಡಿದ್ದೇನೆ” ಎಂದು ಫೆಬ್ರವರಿಯಲ್ಲಿ ವಿದ್ಯಾರ್ಥಿಗಳಿಗೆ ಬರೆದ ಇಮೇಲ್‌ನಲ್ಲಿ ಅವರು ವಿವರಿಸಿದ್ದಾರೆ.

“ವೈದ್ಯಕೀಯ ಕ್ಷೇತ್ರದ ತಜ್ಞರ ಅಭಿಪ್ರಾಯ ಆಧರಿಸಿ ಸಂಸ್ಥೆಗಳನ್ನು ತೆರೆಯಬಹುದು ಎಂದು ತಮಿಳುನಾಡು ಸರ್ಕಾರ ಹೇಳಿದೆ ಎಂದು ನೀವು ಉಲ್ಲೇಖಿಸಿರುವುದು ಸರಿಯಾಗಿದೆ. ವೈದ್ಯಕೀಯ ಕ್ಷೇತ್ರದ ತಜ್ಞರೂ ಹೊಸ ತಳಿಯ ವೈರಸ್‌ನಿಂದ ಹೆಚ್ಚು ಮಂದಿ ಆಸ್ಪತ್ರೆ ಸೇರುವುದಿಲ್ಲ ಎಂದಿದ್ದಾರೆ. ನಾವು ವಿಶ್ವವಿದ್ಯಾಲಯ ಪುನಾರಂಭಿಸಬೇಕು ಎಂದರೆ ಪುನಾರಂಭ ಮಾಡಬಹುದು. ಆದರೆ, ಹಿಂದಿನ ತಳಿಗಿಂತ ಸದ್ಯದ ವೈರಸ್‌ ವೇಗವಾಗಿ ಹರಡುತ್ತಿದ್ದು, ಇಬ್ಬರಲ್ಲಿ ಒಬ್ಬರಿಗೆ ತಗುಲುತ್ತಿದೆ…” ಎಂದು ವಿವರಿಸಿದ್ದಾರೆ.

ಪ್ರಸಕ್ತ ವರ್ಷದ ಮಾರ್ಚ್‌ನಲ್ಲಿ ವಿದ್ಯಾರ್ಥಿಗಳು ಭೌತಿಕವಾಗಿ ತರಗತಿ ಆರಂಭಿಸುವಂತೆ ಕೋರಿದ್ದಕ್ಕೆ ಪ್ರೊ. ಎಲಿಜಬೆತ್‌ ಅವರು “20 ವರ್ಷ ವಯಸ್ಸಿನ ವಿದ್ಯಾರ್ಥಿಗಳು ವಿಶ್ವವಿದ್ಯಾಲಯವನ್ನು ಹೇಗೆ ನಡೆಸಬೇಕು ಮತ್ತು ಯಾವ ನಿರ್ಧಾರ ಮಾಡಬೇಕು ಎಂದು ನನಗೆ ಸಲಹೆ ನೀಡುತ್ತಿದ್ದು, ಅವರಿಗೆ ಪ್ರತಿಕ್ರಿಯಿಸಿ ನನಗೆ ಸಾಕಾಗಿ ಹೋಗಿದೆ. ನಾನು ಓರ್ವ ನಾಯಕಿಯಾಗಿದ್ದು, ನಾನು ಯಾರನ್ನೂ ಹಿಂಬಾಲಿಸುವುದಿಲ್ಲ. ಜೀವನದಲ್ಲಿ ಜೀಸಸ್‌ ಒಬ್ಬರನ್ನು ಬಿಟ್ಟು ಯಾರನ್ನೂ ಬದುಕಿನಲ್ಲಿ ನಾನು ಅನುಸರಿಸಿದವಳಲ್ಲ. ನಾನು ನನ್ನದೇ ಹಾದಿ ರೂಪಿಸುವವಳಾಗಿದ್ದು, ಮತ್ತೊಬ್ಬರು ನಡೆದ ಹಾದಿಯಲ್ಲಿ ನಡೆಯುವುದಿಲ್ಲ. ದೇವರ ದಯೆಯಿಂದ ಸುಮಾರು 40 ವರ್ಷಗಳ ನನ್ನ ಸೇವೆಯಲ್ಲಿ ನಾನೆಂದೂ ದಾರಿತಪ್ಪಿಲ್ಲ. ಈಗಲೂ ಸಹ ನಾನು ಹಾದಿ ತಪ್ಪಿಲ್ಲ ಎಂಬುದು ನನಗೆ ಗೊತ್ತಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಸಾಮಾನ್ಯವಾಗಿ ಬೆಸ ಸೆಮಿಸ್ಟರ್‌ಗಳಲ್ಲಿ 3.5 ತಿಂಗಳ ಕಡಿಮೆ ಸಮಯ ಸಿಗಲಿದ್ದು, ಮೊದಲ ತಿಂಗಳು ಆನ್‌ಲೈನ್‌ ತರಗತಿಯಲ್ಲಿ ಕಳೆದು ಹೋಗುತ್ತದೆ. ಇದು ಪರಿಣಾಮಕಾರಿಯಾಗಿಲ್ಲ ಸಂಪೂರ್ಣವಾಗಿ ನಿರರ್ಥಕವಾಗಿದೆ. ಇದನ್ನು ವಿಶ್ವವಿದ್ಯಾಲಯ ಮತ್ತು ವಿದ್ಯಾರ್ಥಿಗಳು ಒಪ್ಪುತ್ತಾರೆ. ಇದನ್ನು ಕುಲಪತಿ ಮತ್ತು ರಿಜಿಸ್ಟ್ರಾರ್‌ಗೆ ಮನವರಿಕೆ ಮಾಡಿಕೊಟ್ಟೆವು. ಆದರೆ, ಅವರಿಗೆ ಹಿರಿಯ ವಿದ್ಯಾರ್ಥಿಗಳ ಬ್ಯಾಚ್‌ ಕ್ಯಾಂಪಸ್‌ಗೆ ಬರುವುದು ಇಷ್ಟವಿಲ್ಲ. ಏಕೆಂದರೆ ಅದರಿಂದ ಅವರ ಮೇಲೆ ಒತ್ತಡ ಹೆಚ್ಚಾಗುತ್ತದೆ ಎಂಬುದಾಗಿದೆ” ಎಂದು ನಾಲ್ಕನೇ ವರ್ಷದ ವಿದ್ಯಾರ್ಥಿಯೊಬ್ಬರು “ಬಾರ್‌ ಅಂಡ್‌ ಬೆಂಚ್‌”ಗೆ ತಿಳಿಸಿದರು.

Related Stories

No stories found.
Kannada Bar & Bench
kannada.barandbench.com