ಪ್ರತಿಯೊಬ್ಬರೂ ನ್ಯಾಯ ಪಡೆಯುವಂತಾಗಲು, ಕಾನೂನು ಜಾಗೃತಿ ಮೂಡಿಸುವ ಅಗತ್ಯವಿದೆ: ನ್ಯಾ. ಬಿ ಎನ್ ಶ್ರೀಕೃಷ್ಣ

ಎನ್‌ಜಿಒ ʼನ್ಯಾಯʼ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಮಾರ್ಚ್ 7ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ʼನ್ಯಾಯ ಹಬ್ಬ- 2024ʼ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ನ್ಯಾಯ ಪಡೆಯುವಂತಾಗಲು, ಕಾನೂನು ಜಾಗೃತಿ ಮೂಡಿಸುವ ಅಗತ್ಯವಿದೆ: ನ್ಯಾ. ಬಿ ಎನ್ ಶ್ರೀಕೃಷ್ಣ

ಪ್ರತಿಯೊಬ್ಬರಿಗೂ ನ್ಯಾಯ ದೊರೆಯುವಂತಾಗಲು ಮೊದಲು ಅವರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಿ ಎನ್‌ ಶ್ರೀಕೃಷ್ಣ ಈಚೆಗೆ ತಿಳಿಸಿದರು.

ಸರ್ಕಾರೇತರ ಸಂಸ್ಥೆಯಾದ ʼನ್ಯಾಯʼ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಮಾರ್ಚ್‌ 7ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ʼನ್ಯಾಯ ಹಬ್ಬ- 2024ʼ ಸಮಾರಂಭದಲ್ಲಿ ವರ್ಚುವಲ್‌ ವಿಧಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಯ ಅಗತ್ಯತೆ ಮತ್ತು ಸಂದರ್ಭಗಳ ಆಧಾರದಲ್ಲಿ ನ್ಯಾಯ ಎಂಬುದು ಭಿನ್ನ ವಿಷಯಗಳನ್ನು ಅರ್ಥೈಸುತ್ತದೆ. ಆದರೆ ಮುಖ್ಯ ಸಂಗತಿ ಏನೆಂದರೆ ಪ್ರತಿಯೊಬ್ಬರೂ ನ್ಯಾಯ ಪಡೆಯುವಂತಾಗಲು ಅವರಲ್ಲಿ ಕಾನೂನು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಶಂಕರ್‌ ಅವರು ಮಾತನಾಡಿ “ನಾನು ನ್ಯಾಯವನ್ನು ಜನರಿಗೆ ತಲುಪಿಸುವ ಕೆಲಸವನ್ನು ಸಾಕಷ್ಟು ವರ್ಷಗಳಿಂದ ಮಾಡುತ್ತಿದ್ದರೂ ಅದನ್ನು ಹಬ್ಬದಂತೆ ಸಂಭ್ರಮಿಸುವುದು ಕನಸಾಗಿತ್ತು. ʼನ್ಯಾಯʼ ಸಂಸ್ಥೆ ಅದನ್ನು ಈಡೇರಿಸುತ್ತಿದೆ” ಎಂದು ಸಂತಸ ವ್ಯಕ್ತಪಡಿಸಿದರು.

ನಂತರ ನಡೆದ ʼನ್ಯಾಯಾಲೋಚನೆʼ ಗೋಷ್ಠಿಯಲ್ಲಿ ವಕೀಲೆ ಪೂರ್ಣಿಮಾ ಹಟ್ಟಿ, ರೋಹಿಣಿ ನಿಲೇಕಣಿ ಫಿಲಾಂಥ್ರಫೀಸ್‌ ಸಂಸ್ಥೆಯ ಸಹನಾ ಜೊಸೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಹೆಸರಾಂತ ಗಾಯಕಿ ಎಂ ಡಿ ಪಲ್ಲವಿ ಅವರ ನೇತೃತ್ವದಲ್ಲಿ ʼನಮ್ಮ ಕಡೆ ನ್ಯಾಯದ ಕಡೆʼ ಎಂಬ ಸಂಗೀತ ಕಚೇರಿ ಹಾಗೂ ನ್ಯಾಯಾಂತರ ರಂಗ ಪ್ರಸ್ತುತಿ ಕೂಡ ಈ ಸಂದರ್ಭದಲ್ಲಿ ನಡೆಯಿತು.

ಪ್ರಾಧಿಕಾರದ ಉಪ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್‌, ಸಾರ್ವಜನಿಕ ಸಂಪರ್ಕಾಧಿಕಾರಿ ಬಾಲಸುಬ್ರಮಣಿ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Related Stories

No stories found.
Kannada Bar & Bench
kannada.barandbench.com