ರಿಪಬ್ಲಿಕ್ ಟಿವಿಗೆ ಅಗ್ರಸ್ಥಾನ ದೊರಕಿಸಿಕೊಡಲು ಅಕ್ರಮ: ಬಾರ್ಕ್ ಮಾಜಿ ಅಧಿಕಾರಿ ಬಂಧನ

ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಹದಿನೈದು ಮಂದಿಯನ್ನು ಬಂಧಿಸಲಾಗಿದ್ದು ರಿಪಬ್ಲಿಕ್ ಟಿವಿ ಮಾಲೀಕ ಅರ್ನಾಬ್ ಗೋಸ್ವಾಮಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ರಿಪಬ್ಲಿಕ್ ಟಿವಿಗೆ ಅಗ್ರಸ್ಥಾನ ದೊರಕಿಸಿಕೊಡಲು ಅಕ್ರಮ: ಬಾರ್ಕ್ ಮಾಜಿ ಅಧಿಕಾರಿ ಬಂಧನ

ಟೈಮ್ಸ್‌ ನೌ ಸುದ್ದಿವಾಹಿನಿಗೆ ಅತಿ ಹೆಚ್ಚು ವೀಕ್ಷಕರಿದ್ದರೂ ಅದನ್ನು ಎರಡನೇ ಸ್ಥಾನದಲ್ಲಿಟ್ಟು ಅರ್ನಾಬ್‌ ಗೋಸ್ವಾಮಿ ಮಾಲೀಕತ್ವದ ರಿಪಬ್ಲಿಕ್‌ ಟಿವಿ ಮೊದಲ ಸ್ಥಾನಕ್ಕೆ ಬರುವಂತೆ ಟಿಆರ್‌ಪಿಯನ್ನು ತಿರುಚಲಾಗಿತ್ತು ಎಂಬುದು ತನಿಖೆಯಿಂದ ಬಹಿರಂಗಗೊಂಡಿರುವುದಾಗಿ ಮುಂಬೈ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಬ್ರಾಡ್‌ಕಾಸ್ಟ್‌ ಆಡಿಯನ್ಸ್‌ ರಿಸರ್ಚ್‌ ಕೌನ್ಸಿಲ್ಲ್‌ನ (ಬಾರ್ಕ್‌) ಮಾಜಿ ಅಧಿಕಾರಿಗಳು ಈ ಅಕ್ರಮದಲ್ಲಿ ಶಾಮೀಲಾಗಿದ್ದರು ಎಂದು ಪತ್ರಿಕಾಗೋಷ್ಠಿಯಲ್ಲಿ ಅಪರಾಧ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಮಿಲಿಂದ್‌ ಭರಾಂಬೆ ಮಾಹಿತಿ ನೀಡಿದ್ದಾರೆ.

Also Read
ರಿಪಬ್ಲಿಕ್‌ ಟಿವಿ ಅಧಿಕಾರಿಗೆ ಟ್ರಾನ್ಸಿಟ್‌ ಜಾಮೀನು ನೀಡಿದ ಕರ್ನಾಟಕ ಹೈಕೋರ್ಟ್
Also Read
ಟಿಆರ್‌ಪಿ ಹಗರಣ: ಫಕ್ತ್ ಮರಾಠಿ, ರಿಪಬ್ಲಿಕ್ ಟಿವಿ, ಬಾಕ್ಸ್ ಸಿನಿಮಾಗೆ ಅನುಕೂಲ-ಮುಂಬೈ ಪೊಲೀಸರಿಂದ ಆರೋಪಪಟ್ಟಿ ಸಲ್ಲಿಕೆ

ಈ ಸಂಬಂಧ ಬಾರ್ಕ್‌ನ ಮಾಜಿ ಅಧಿಕಾರಿ ಪಾರ್ಥೊ ದಾಸ್‌ಗುಪ್ತ ಎಂಬುವರನ್ನು ಬಂಧಿಸಲಾಗಿದ್ದು ಮುಂಬೈನ ಸ್ಥಳೀಯ ನ್ಯಾಯಾಲಯ ಅವರನ್ನು ಮೂರು ದಿನಗಳ ಕಾಲ ಪೊಲೀಸ್‌ ವಶಕ್ಕೆ ಒಪ್ಪಿಸಿದೆ. ಟೈಮ್ಸ್‌ ನೌ ವಾಹಿನಿಯ ಟಿಆರ್‌ಪಿಯನ್ನು ಎರಡನೇ ಸ್ಥಾನಕ್ಕೆ ಕುಸಿಯುವಂತೆ ಮಾಡಲು ಮತ್ತು ಎರಡನೇ ಸ್ಥಾನದಲ್ಲಿದ್ದ ಸಿಎನ್‌ಎನ್‌- ನ್ಯೂಸ್‌ 18 ವಾಹಿನಿಯನ್ನು ಮೂರನೇ ಸ್ಥಾನಕ್ಕೆ ತರಲು ಬಾರ್ಕ್‌ನ ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತ ಹಾಗೂ ಮತ್ತೊಬ್ಬ ಅಧಿಕಾರಿ ರೊಮಿಲ್‌ ರಾಮ್‌ಗರ್ಹಿಯಾ ಎಂಬುವರು ಅಕ್ರಮ ಎಸಗಿದ್ದರು. (ರೊಮಿಲ್‌ನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.) ಈ ಅಧಿಕಾರಿಗಳೇ ಟಿಆರ್‌ಪಿಯನ್ನು ನಿರ್ಧರಿಸುತ್ತಿದ್ದರು. ಅವರಿಬ್ಬರಿಗೂ ರಾಜೀನಾಮೆ ನೀಡುವಂತೆ ಬಾರ್ಕ್‌ ಈ ಹಿಂದೆಯೇ ಸೂಚಿಸಿತ್ತು. ಆದರೆ ಮೂರು ತಿಂಗಳ ಹಿಂದೆ ಟಿಆರ್‌ಪಿ ಹಗರಣ ದೊಡ್ಡ ಸುದ್ದಿ ಮಾಡಿದಾಗ ಇಬ್ಬರೂ ರಾಜೀನಾಮೆ ನೀಡಲು ಮುಂದಾದರು ಎಂಬುದಾಗಿ ಪೊಲೀಸರು ವಿವರಿಸಿದ್ದಾರೆ.

ಬಾರ್ಕ್‌ನಲ್ಲಿ ಉನ್ನತ ಹುದ್ದೆಯಲ್ಲಿದ್ದವರು ಬದಲಾದ ಬಳಿಕ ದತ್ತಾಂಶವನ್ನು ವಿಧಿವಿಜ್ಞಾನ ಪರಿಶೀಲನೆಗೆ ಒಪ್ಪಿಸಲಾಯಿತು. ಸುಮಾರು ನಾಲ್ಕು ವರ್ಷಗಳ ಕಾಲ ಟಿಆರ್‌ಪಿಯನ್ನು ತಿರುಚಲಾಗಿದೆ. 44 ವಾರಗಳ ಮಾಹಿತಿ ಕಲೆ ಹಾಕಿ ತನಿಖೆ ನಡೆಸಿದಾಗ ಟಿಆರ್‌ಪಿ ತಿರುಚಿರುವುದು ಬಹಿರಂಗವಾಗಿದೆ. ಒಂದು ನಿರ್ದಿಷ್ಟ ವಾಹಿನಿಯ ನಿರ್ದಿಷ್ಟ ಟಿಆರ್‌ಪಿ ಹೆಚ್ಚಿದೆ ಎಂದು ತೋರಿಸುವ ಸಲುವಾಗಿ ಕೆಲ ದತ್ತಾಂಶಗಳನ್ನಷ್ಟೇ ಆಯ್ದು ವಿಶ್ಲೇಷಣೆ ನಡೆಸಲಾಗಿತ್ತು. ಅಲ್ಲದೆ ಅಧಿಕಾರಿಗಳು ನಡೆಸಿರುವ ಇಮೇಲ್, ಚಾಟ್‌ ಮತ್ತಿತರ ಅಂಶಗಳಿಂದಲೂ ಅಪರಾಧ ನಡೆದಿರುವುದು ಸಾಬೀತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಹದಿನೈದು ಮಂದಿಯನ್ನು ಬಂಧಿಸಲಾಗಿದ್ದು ರಿಪಬ್ಲಿಕ್‌ ಟಿವಿ ಮಾಲೀಕ ಅರ್ನಾಬ್‌ ಗೋಸ್ವಾಮಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

Related Stories

No stories found.