ಸಂತ್ರಸ್ತೆ ವರಿಸಿದ ಯುವಕನ ವಿರುದ್ಧದ ಪೋಕ್ಸೊ ಪ್ರಕರಣ ವಜಾ; ಸಮಾಜದ ಅಪಕೀರ್ತಿ ತಪ್ಪಿಸುವುದು ಅಗತ್ಯ ಎಂದ ಹೈಕೋರ್ಟ್‌

ಯುವಕನ ವಿರುದ್ದದ ಕಾನೂನು ಪ್ರಕ್ರಿಯೆ ರದ್ದುಪಡಿಸದಿದ್ದರೆ ಮಗು ಮತ್ತು ತಾಯಿಯ ಬದುಕು ಅತಂತ್ರವಾಗಲಿದ್ದು, ಅವರು ಸಮಾಜದಲ್ಲಿ ಅಪಖ್ಯಾತಿಗೆ ಗುರಿಯಾಗಬೇಕಾಗುತ್ತದೆ. ಸಮಾಜದ ಅಪಕೀರ್ತಿ ತಪ್ಪಿಸಲು ಪ್ರಕರಣ ರದ್ದುಪಡಿಸುವುದು ಸೂಕ್ತ ಎಂದ ಹೈಕೋರ್ಟ್‌.
ನ್ಯಾಯಮೂರ್ತಿ ಎಂ.ನಾಗಪ್ರಸನ್ನ
ನ್ಯಾಯಮೂರ್ತಿ ಎಂ.ನಾಗಪ್ರಸನ್ನ
Published on

ಮಗು ಮತ್ತು ತಾಯಿಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸಮಾಜದ ಅಪಕೀರ್ತಿ ತಪ್ಪಿಸಲು ಪ್ರೇಮಿಗಳನ್ನು ಒಂದಾಗಿ ಬಾಳಲು ಈಚೆಗೆ ಅನುಮತಿಸಿರುವ ಕರ್ನಾಟಕ ಹೈಕೋರ್ಟ್‌ ಯುವಕನ ವಿರುದ್ದದ ಅತ್ಯಾಚಾರ ಮತ್ತು ಪೋಕ್ಸೊ ಪ್ರಕರಣವನ್ನು ರದ್ದುಪಡಿಸಿದೆ.

ಮೈಸೂರಿನ ವರುಣಾ ಹೋಬಳಿಯ ಯಡಹಳ್ಳಿಯ 23 ವರ್ಷದ ಮಂಜುನಾಥ್‌ ವಿರುದ್ದದ ಮೈಸೂರಿನ ಪೋಕ್ಸೊ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ರದ್ದುಪಡಿಸಿ, ಅರ್ಜಿ ಇತ್ಯರ್ಥಪಡಿಸಿದೆ.

ಜೈಲಿನಲ್ಲಿರುವ ಮಂಜುನಾಥ್‌ ಬಿಡುಗಡೆಗೆ ರಿಜಿಸ್ಟ್ರಿ ಅಗತ್ಯ ಕ್ರಮಕೈಗೊಳ್ಳಬೇಕು. ಅರ್ಜಿ ಇತ್ಯರ್ಥವಾಗಿದೆ ಎಂದು ಮಗು ಮತ್ತು ತಾಯಿಯನ್ನು ಮತ್ತೆ ಬಿಕ್ಕಟ್ಟಿಗೆ ದೂಡಿದರೆ ಮಂಜುನಾಥ್‌ ವಿರುದ್ಧದ ಪ್ರಕರಣ ಮರು ಚಾಲನೆ ಪಡೆಯಲಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದ ನ್ಯಾಯಾಲಯ.

“ಮದುವೆಗೂ ಮುನ್ನ ಅರ್ಜಿದಾರ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿರುವುದರಿಂದ ಮಗು ಜನಿಸಿದೆ. ಮಗುವಿಗೆ ಏನೆಲ್ಲಾ ಘಟನೆ ನಡೆದಿದೆ ಎಂಬುದು ತಿಳಿದಿಲ್ಲ. ಪ್ರಕರಣ ಇತ್ಯರ್ಥಪಡಿಸಿ, ಅರ್ಜಿದಾರನನ್ನು ಬಿಡುಗಡೆ ಮಾಡದಿದ್ದರೆ ಮಗು ಮತ್ತು ತಾಯಿಯ ಬದುಕು ಬಿಕ್ಕಟ್ಟಿಗೆ ಸಿಲುಕಲಿದೆ. ಅರ್ಜಿದಾರ ಮತ್ತು ಸಂತ್ರಸ್ತೆ ವಿವಾಹವಾಗಲು ಈಗಾಗಲೇ ನ್ಯಾಯಾಲಯವು ಮಧ್ಯಂತರ ಜಾಮೀನು ನೀಡಿದೆ. ಮದುವೆಯ ಬಳಿಕ ಅರ್ಜಿದಾರ ಜೈಲಿಗೆ ಮರಳಿದ್ದಾನೆ. ಈಗ ಕಾನೂನು ಪ್ರಕ್ರಿಯೆ ರದ್ದುಪಡಿಸದಿದ್ದರೆ ಮಗು ಮತ್ತು ತಾಯಿಯ ಬದುಕು ಅತಂತ್ರವಾಗಲಿದ್ದು, ಅವರು ಸಮಾಜದಲ್ಲಿ ಅಪಖ್ಯಾತಿಗೆ ಗುರಿಯಾಗಬೇಕಾಗುತ್ತದೆ. ಸಮಾಜದ ಅಪಕೀರ್ತಿ ತಪ್ಪಿಸಲು ಪ್ರಕರಣ ರದ್ದುಪಡಿಸುವುದು ಸೂಕ್ತ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮುಂದುವರಿದು, “ವಾಸ್ತವಿಕ ಅಂಶಗಳು ಹೀಗಿರುವಾಗ ಸಂತ್ರಸ್ತೆಯು ನಿಸ್ಸಂಶಯವಾಗಿ ವಿರುದ್ಧ ಸಾಕ್ಷಿ ನುಡಿಯಲಿದ್ದು, ಅರ್ಜಿದಾರನಿಗೆ ಶಿಕ್ಷೆಯಾಗುವುದು ಅಸಾಧ್ಯವಾಗಲಿದೆ. ಹೀಗಾಗಿ, ವಾಸ್ತವಿಕ ಸಂಗತಿಗಳಿಂದ ದೂರ ಉಳಿದು ಕ್ರಿಮಿನಲ್‌ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಈ ನ್ಯಾಯಾಲಯ ಹೇಳಲಾಗದು. ಇದು ಕೊನೆಯವರೆಗೂ ವೇದನೆ ಉಂಟು ಮಾಡಲಿದ್ದು, ಇದು ಖುಲಾಸೆಯ ಸಂತೋಷಕ್ಕೆ ಮುಸುಕು ಕವಿಯುವಂತೆ ಮಾಡುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರನ ಪರ ವಕೀಲರಾದ ಎಸ್‌ ವಿ ರೋಹಿತ್‌ ಮತ್ತು ಎಂ ಶರತ್ ಚಂದ್ರ ಅವರು “ಸಂತ್ರಸ್ತೆ ಮತ್ತು ಮಂಜುನಾಥ್‌ ಪ್ರೇಮಿಗಳಾಗಿದ್ದು, ಘಟನೆ ನಡೆದ ಸಂದರ್ಭದಲ್ಲಿ ಮಂಜುನಾಥ್‌ಗೆ 21 ವರ್ಷ ವಯಸ್ಸಾಗಿತ್ತು. ಸಂತ್ರಸ್ತೆಗೆ 16 ವರ್ಷ 9 ತಿಂಗಳಾಗಿತ್ತು. ಸಂತ್ರಸ್ತೆಯ ತಾಯಿ ಮಗಳನ್ನು ಮದುವೆ ಮಾಡಿಕೊಡಲು ಒಪ್ಪದೇ ದೂರು ದಾಖಲಿಸಿದ್ದರು. ಈ ಸಂದರ್ಭದಲ್ಲಿ ಸಂತ್ರಸ್ತೆಯು ಗರ್ಭಿಣಿಯಾಗಿದ್ದರು. ಎರಡೂ ಕುಟುಂಬಗಳು ಮದುವೆಗೆ ನಿಶ್ಚಿಯಿಸಿದ್ದು, ಅರ್ಜಿದಾರನೂ ಸಂತ್ರಸ್ತೆಯನ್ನು ಪ್ರೀತಿಸುತ್ತಿದ್ದರಿಂದ ಮದುವೆಯಾಗಿದ್ದಾನೆ. ಹೀಗಾಗಿ, ಕಾನೂನು ಪ್ರಕ್ರಿಯೆ ವಜಾ ಮಾಡಬೇಕು” ಎಂದು ಕೋರಿದ್ದರು.

ಈ ಮಧ್ಯೆ, ಸಂತ್ರಸ್ತೆಯನ್ನು ವರಿಸಲು ಹೈಕೋರ್ಟ್‌ ಅರ್ಜಿದಾರ ಮಂಜುನಾಥ್‌ಗೆ ಮಧ್ಯಂತರ ಜಾಮೀನು ನೀಡಿದ್ದು, 2024ರ ಜೂನ್‌ 21ರಂದು ಮದುವೆಯೂ ನೆರವೇರಿತ್ತು. ತಾಯಿ-ತಂದೆ ಮತ್ತು ಮಗುವಿನ ವಂಶವಾಹಿ ಪರೀಕ್ಷೆ ನಡೆಸಲಾಗಿದ್ದು, ಮಗುವಿನ ಪೋಷಕರು ಅರ್ಜಿದಾರ ಮತ್ತು ಸಂತ್ರಸ್ತೆ ಎಂದು ರುಜುವಾತವಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರ ಮಂಜುನಾಥ್‌ ಮತ್ತು ಸಂತ್ರಸ್ತೆಯು ಒಂದೇ ಶಾಲೆಯ ವಿದ್ಯಾರ್ಥಿಗಳಾಗಿದ್ದು, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆಗಿಂದಾಗ್ಗೆ ಸಂತ್ರಸ್ತೆಯನ್ನು ಭೇಟಿ ಮಾಡುತ್ತಿದ್ದ ಅರ್ಜಿದಾರ ತನ್ನನ್ನು ಭೇಟಿ ಮಾಡುವಂತೆ ಕಿರುಕುಳ ನೀಡುತ್ತಿದ್ದ. ಅಲ್ಲದೆ ನಿರ್ಜನ ಪ್ರದೇಶಕ್ಕೆ ಸಂತ್ರಸ್ತೆಯನ್ನು ಕರೆದೊಯ್ದು ಆಕೆಯ ಮೇಲೆ ಪದೇಪದೇ ಅತ್ಯಾಚಾರ ನಡೆಸಿದ್ದ ಎಂದು ಸಂತ್ರಸ್ತೆಯ ತಾಯಿಯು 2023ರ ಫೆಬ್ರವರಿ 15ರಂದು ಮೈಸೂರಿನ ಉದಯಗಿರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರು ಆಧರಿಸಿ ಪೊಲೀಸರು ಮಂಜುನಾಥ್‌ ವಿರುದ್ಧ ಪೋಕ್ಸೊ ಕಾಯಿದೆಯ ಸೆಕ್ಷನ್‌ಗಳಾದ 5(ಎಲ್‌), 5(ಜೆ)(II), 6 ಹಾಗೂ ಐಪಿಸಿ ಸೆಕ್ಷನ್‌ಗಳಾದ 376(2)(ಎನ್), 506 ಅಡಿ ಎಫ್‌ಐಆರ್‌ ದಾಖಲಿಸಿದ್ದರು. ಇದರ ಬೆನ್ನಿಗೇ ಮಂಜುನಾಥ್‌ನನ್ನು ಬಂಧಿಸಲಾಗಿತ್ತು.

ಸಂತ್ರಸ್ತೆಯ ತಾಯಿ ಪರವಾಗಿ ವಕೀಲ ಎಚ್‌ ಆರ್‌ ನಾಗರಾಜು ಮತ್ತು ಸರ್ಕಾರದ ಪರವಾಗಿ ಪಿ ತೇಜಸ್‌ ವಾದಿಸಿದ್ದರು.

Kannada Bar & Bench
kannada.barandbench.com