ಈಗ ಯಾರನ್ನೂ ಯಾವಾಗ ಬೇಕಾದರೂ ಬಂಧಿಸಬಹುದಾಗಿದ್ದು ನ್ಯಾಯಾಲಯಗಳು ಜಾಮೀನು ನೀಡುವುದಿಲ್ಲ: ಹಿರಿಯ ವಕೀಲ ಸಿಬಲ್ ಕಳವಳ

ವಿರೋಧ ಪಕ್ಷಗಳ ನಾಯಕರ ಜೊತೆಗಿನ ವಿವಾದ ಇತ್ಯರ್ಥಪಡಿಸಿಕೊಳ್ಳುವುದಕ್ಕಾಗಿ ಕಾನೂನು ದುರುಪಯೋಗ ಮಾಡಿಕೊಳ್ಳಲಾಗುತ್ತಿದ್ದು, ಅದರ ವಿರುದ್ಧ ನ್ಯಾಯಾಲಯಗಳು ನಿಂತರೆ ಮಾತ್ರ ದುರುಪಯೋಗ ಇಲ್ಲವಾಗುತ್ತದೆ ಎಂದು ಅವರು ಹೇಳಿದರು.
Senior Advocate Kapil Sibal
Senior Advocate Kapil Sibal Twitter

ಜಾಮೀನು ನೀಡಲು ನ್ಯಾಯಾಲಯಗಳು ಹಿಂಜರಿಯುತ್ತಿರುವುದು ದೇಶದ ಸ್ವಾತಂತ್ರ್ಯವನ್ನು ಹರಣ ಮಾಡಿದೆ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಇತ್ತೀಚೆಗೆ ಹೇಳಿದ್ದಾರೆ.

ಪತ್ರಕರ್ತೆ ನಿಧಿ ರಜ್ದಾನ್ ಅವರಿಗೆ ನೀಡಿದ ಸಂದರ್ಶನದಲ್ಲಿಅವರು ವಿರೋಧ ಪಕ್ಷಗಳ ನಾಯಕರ ಜೊತೆಗಿನ ವಿವಾದ ಇತ್ಯರ್ಥಪಡಿಸಿಕೊಳ್ಳುವುದಕ್ಕಾಗಿ ಕಾನೂನು ದುರುಪಯೋಗ ಮಾಡಿಕೊಳ್ಳಲಾಗುತ್ತಿದ್ದು, ಅದರ ವಿರುದ್ಧ ನ್ಯಾಯಾಲಯಗಳು ನಿಂತಾಗ ಮಾತ್ರ ದುರುಪಯೋಗ ನಿಲ್ಲುತ್ತದೆ ಎಂದು ಹೇಳಿದರು.

ಕಾನೂನುಬಾಹಿರ (ಚಟುವಟಿಕೆ) ತಡೆ ಕಾಯಿದೆ ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ)  ಕುರಿತ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ಕಾಯಿದೆಗಳನ್ನು ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಜಾರಿಗೊಳಿಸಲಾಗಿತ್ತು.

ಸಿಬಲ್‌ ಅವರ ಮಾತಿನ ಪ್ರಮುಖಾಂಶಗಳು

  • ಪಿಎಂಎಲ್‌ಎಯನ್ನು ನಾವು ಜಾರಿಗೆ ತಂದಿರಬಹುದು. ಆದರೆ ಅದನ್ನು ಈ ವಿಧಾನದಲ್ಲಿ ಬಳಸುತ್ತಾರೆಂದು ನಮಗೆ ತಿಳಿದಿರಲಿಲ್ಲ. ನಾವು ಅದನ್ನು ಎಂದಿಗೂ ಈ ವಿಧಾನದಲ್ಲಿ ಬಳಸಿರಲಿಲ್ಲ. ಕಾನೂನುಗಳನ್ನು ದುರಪಯೋಗಪಡಿಸಿಕೊಳ್ಳದೇ ಇದ್ದರೆ ಅವು ತಮ್ಮಷ್ಟಕ್ಕೇ ಸಮಸ್ಯೆಯಾಗುವುದಿಲ್ಲ.

  • ಹಣ ವರ್ಗಾವಣೆ ತಡೆ ಕಾಯಿದೆಯನ್ನು ಪ್ರತಿಪಕ್ಷಗಳ ವಿರುದ್ಧ ಅಸ್ತ್ರವಾಗಿ ಬಳಸಲಾಗುತ್ತಿದೆ. ನ್ಯಾಯಾಲಯ ಸೆಟೆದು ನಿಂತು ಈ ರೀತಿ ಮಾಡಬಾರದು ಎಂದಾಗ ಮಾತ್ರ ನ್ಯಾಯ ದೊರೆಯುತ್ತದೆ. ಜಾರ್ಖಂಡ್, ರಾಜಸ್ಥಾನ, ಪಶ್ಚಿಮ ಬಂಗಾಳ, ತೆಲಂಗಾಣ, ಒಡಿಶಾದ ಪ್ರತಿಪಕ್ಷಗಳು ಒಂದೇ ರೀತಿಯ ಸಮಸ್ಯೆ ಎದುರಿಸುತ್ತಿವೆ.

  • ಯಾರನ್ನೂ ಯಾವಾಗ ಬೇಕಾದರೂ ಬಂಧಿಸಬಹುದಾಗಿದ್ದು ನ್ಯಾಯಾಲಯಗಳು ಜಾಮೀನು ನೀಡುವುದಿಲ್ಲ ಎಂಬ ಸ್ಥಿತಿ ಇಂದು ನಮ್ಮ ದೇಶದಲ್ಲಿದೆ. ರಾಷ್ಟ್ರ ಎತ್ತ ಸಾಗುತ್ತಿದೆ? ನೀವು ಎಷ್ಟು ಬಾರಿ ಹೋರಾಡಬಹುದು?

  • ಕೆಲವರು ವಕೀಲರಿಗೆ ಪಾವತಿಸಲು ಯೋಚಿಸುವುದಿಲ್ಲ. ಕೆಲವರು ಬಡವರಿದ್ದು ತೊಂದರೆ ಎದುರಿಸುತ್ತಾರೆ. ಈ ಸ್ಥಿತಿಯಲ್ಲಿ ವಕೀಲರಾಗಿ ನೀವೇನು ಮಾಡುತ್ತೀರಿ?

  • ಭಾರತದಲ್ಲಿ ಸ್ವಾತಂತ್ರ್ಯ ಸತ್ತು ಹೋಗಿದ್ದು ಯಾವುದೇ ಸಂವಿಧಾನ ಅಥವಾ ನ್ಯಾಯಾಲಯ ಅದನ್ನು ಉಳಿಸಲು ಸಾಧ್ಯವಿಲ್ಲ ಏಕೆಂದರೆ ಅದು ಜನರ ಹೃದಯದಲ್ಲೇ ಸಾವನ್ನಪ್ಪಿದೆ.

  • ಪ್ರಕರಣ ಆಧಾರರಹಿತವಾಗಿದ್ದರೂ ವಿಚಾರಣಾ ನ್ಯಾಯಾಲಯಗಳು ಜಾಮೀನು ನೀಡಲು ಹಿಂದೇಟು ಹಾಕುತ್ತಿದ್ದು, ಆರೋಪಿಗಳು ವರ್ಷಗಟ್ಟಲೆ ಜೈಲಿನಲ್ಲಿಯೇ ಇರುವಂತಾಗಿದೆ.

  • ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರು ನಾಗರಿಕ ಸ್ವಾತಂತ್ರ್ಯಗಳನ್ನು ರಕ್ಷಿಸುವ ಕರ್ತವ್ಯದ ಬಗ್ಗೆ ಆಗಾಗ್ಗೆ ಮಾತನಾಡುತ್ತಿದ್ದರೂ ಉಮರ್ ಖಾಲಿದ್ ಪ್ರಕರಣದ ರೀತಿಯ ವಿಚಾರಗಳಿಗೆ ಬಂದಾಗ ಕ್ರಮ ಕೈಗೊಳ್ಳುವುದು ಏಕೆ ನಿಧಾನವಾಗುತ್ತಿದೆ? ನಾವೇಕೆ ಜಾಮೀನು ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಖುದ್ದು ಹೇಳಿದ್ದಾರೆ.

  • ದ್ವೇಷ ಭಾಷಣ ಹತ್ತಿಕ್ಕಲು ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳನ್ನು ಏಕೆ ಪಾಲಿಸುತ್ತಿಲ್ಲ ಎಂದರೆ ಜನ ಸುಪ್ರೀಂ ಕೋರ್ಟನ್ನು ಧಿಕ್ಕರಿಸುತ್ತಿದ್ದಾರೆ. ನಾವು ಹೆದರುವುದಿಲ್ಲ ಎಂದು ಅವರು ಹೇಳುತ್ತಿದ್ದಾರೆ. ಸ್ವಾತಂತ್ರ್ಯ ಎಂಬುದು ಜನರೊಳಗೇ ಸತ್ತರೆ ಯಾವುದೇ ಸಂವಿಧಾನ, ಯಾವುದೇ ನ್ಯಾಯಾಲಯಗಳು, ಯಾವುದೇ ಕಾನೂನು ಅದನ್ನು ಉಳಿಸಲು ಸಾಧ್ಯವಿಲ್ಲ. ಈಗ ಅದು ಘಟಿಸುತ್ತಿದೆ.

  • ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನು ನ್ಯಾಯಾಲಯ ಪರಿಗಣಿಸುತ್ತಿದೆಯೇ? ಸುಪ್ರೀಂ ಕೋರ್ಟ್‌ನ ದಿವಂಗತ ನ್ಯಾಯಮೂರ್ತಿ ಪಿಎನ್ ಭಗವತಿ ಅವರು ಇಂದು ಬದುಕಿದ್ದರೆ ಸ್ವಯಂ ಪ್ರೇರಿತ ಕ್ರಮಕ್ಕೆ ಆದೇಶಿಸುತ್ತಿದ್ದರು.

  • (ನ್ಯೂಸ್‌ಕ್ಲಿಕ್ ಸುದ್ದಿತಾಣದ ವಿರುದ್ಧ ದಾಖಲಾದ್ ಯುಎಪಿಎ ಪ್ರಕರಣ ಕುರಿತು ಚರ್ಚಿಸುತ್ತಾ)ಯಾವುದೇ ಪೂರಕ ದಾಖಲೆಗಳಿಲ್ಲದೆ ಅಧಿಕಾರಿಗಳು ವ್ಯಕ್ತಿಯ ಫೋನ್ ವಶಕ್ಕೆ ತೆಗೆದುಕೊಳ್ಳುವುದು ಖಾಸಗಿತನದ ಮೇಲಿನ ಆಕ್ರಮಣವಾಗುತ್ತದೆ.

Related Stories

No stories found.
Kannada Bar & Bench
kannada.barandbench.com