ಸುಪ್ರೀಂ ಕೋರ್ಟ್ ಪರಿಹಾರ ನೀಡುತ್ತದೆ ಎಂದು ಭಾವಿಸಿದರೆ ಅದು ಗಂಭೀರವಾದ ತಪ್ಪು ಕಲ್ಪನೆ: ಹಿರಿಯ ನ್ಯಾಯವಾದಿ ಸಿಬಲ್

ಐವತ್ತು ವರ್ಷಗಳಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಾಕ್ಟೀಸ್ ಮಾಡಿರುವ ಕಪಿಲ್ ಸಿಬಲ್ ನ್ಯಾಯಾಲಯದ ಬಗ್ಗೆ ಕೆಟ್ಟ ಮಾತನ್ನಾಡುತ್ತಿರುವುದಕ್ಕೆ ಖೇದ ವ್ಯಕ್ತಪಡಿಸಿದರು ಆದರೆ ಅದನ್ನು ಹೇಳಲೇಬೇಕಾದ ಕಾಲ ಬಂದಿದೆ ಎಂದರು.
Kapil Sibal and Supreme Court
Kapil Sibal and Supreme Court

ಸುಪ್ರೀಂ ಕೋರ್ಟ್‌ನ ತೀರ್ಪುಗಳು ತಳಮಟ್ಟದಲ್ಲಿ ಅನ್ವಯವಾಗುವುದಿಲ್ಲ ಎಂಬ ಕಾರಣಕ್ಕೆ ಅದರ ಬಗ್ಗೆ ಯಾವುದೇ ಭರವಸೆ ಉಳಿದಿಲ್ಲ ಎಂದು ಹಿರಿಯ ನ್ಯಾಯವಾದಿ ಹಾಗೂ ಸಂಸದ ಕಪಿಲ್‌ ಸಿಬಲ್‌ ಹೇಳಿದರು.

ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ಶನಿವಾರ ನಡೆದ ಪೀಪಲ್ಸ್ ಟ್ರಿಬ್ಯೂನಲ್‌ನಲ್ಲಿ ʼನಾಗರಿಕ ಸ್ವಾತಂತ್ರ್ಯಗಳ ನ್ಯಾಯಿಕ ರದ್ದತಿʼ ವಿಷಯವಾಗಿ ಅವರು ಮಾತನಾಡಿದರು.

50 ವರ್ಷಗಳಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಾಕ್ಟೀಸ್‌ ಮಾಡಿರುವ ಸಿಬಲ್‌ ನ್ಯಾಯಾಲಯದ ಬಗ್ಗೆ ಕೆಟ್ಟ ಮಾತನಾಡುತ್ತಿರುವುದಕ್ಕೆ ಖೇದ ವ್ಯಕ್ತಪಡಿಸಿದರು ಆದರೆ ಅದನ್ನು ಹೇಳಲೇಬೇಕಾದ ಕಾಲ ಬಂದಿದೆ ಎಂದರು.

ಸಿಬಲ್‌ ಮಾತಿನ ಪ್ರಮುಖ ಸಂಗತಿಗಳು

  • ಸುಪ್ರೀಂ ಕೋರ್ಟ್‌ ಪರಿಹಾರ ನೀಡುತ್ತದೆ ಎಂದು ಭಾವಿಸಿದ್ದರೆ ನೀವು ಗಂಭೀರವಾದ ತಪ್ಪು ಕಲ್ಪನೆಯಲ್ಲಿದ್ದೀರಿ. ನಾನು ಇದನ್ನು 50 ವರ್ಷಗಳ ಅನುಭವದ ಆಧಾರದಲ್ಲಿ ಹೇಳುತ್ತಿದ್ದೇನೆ" . ಅರ್ಧಶತಮಾನ ಕಾಲ ಸುಪ್ರೀಂ ಕೋರ್ಟ್‌ನಲ್ಲಿ ಅಭ್ಯಾಸ ಮಾಡಿದ ನಾನು ಒಂದು ಸಂಸ್ಥೆಯಾಗಿ ಅದರಿಂದ ಯಾವ ನಿರೀಕ್ಷೆ ಇರಿಸಿಕೊಂಡಿಲ್ಲ."

  • ನೀವು ದೊಡ್ಡ ತೀರ್ಪುಗಳ ಬಗ್ಗೆ ಮಾತನಾಡುತ್ತೀರಿ ಆದರೆ ತಳಮಟ್ಟದಲ್ಲಿ ಏನಾಗುತ್ತಿದೆ ಎಂಬುದನ್ನು ಗಮನಿಸಬೇಕು. ನ್ಯಾಯಾಲಯ ಹೇಳುವುದೇ ಒಂದು, ತಳಮಟ್ಟದಲ್ಲಿ ನಡೆಯುವುದೇ ಇನ್ನೊಂದು. ಸುಪ್ರೀಂ ಕೋರ್ಟ್‌ ಉತ್ತಮ, ಪ್ರಗತಿಪರವಾದ ತೀರ್ಪುಗಳನ್ನು ನೀಡಿದೆ ಎನ್ನುತ್ತೀರಿ, ಆದರೆ ಆ ಬಳಿಕ ತಳಮಟ್ಟದಲ್ಲಿ ಏನಾಗಿದೆ ಹೇಳಿ?

  • ʼನನ್ನಪ್ಪನ ರಾಜ್ಯʼ ಎಂಬ ಸಂಸ್ಕೃತಿ ಇರುವ ಕಡೆ ಯಾವುದೇ ಸಂಸ್ಥೆ ಸ್ವತಂತ್ರವಾಗಿರುವುದಿಲ್ಲ. ಸ್ವಾತಂತ್ರ್ಯ ಮತ್ತೆ ಬೇಕು ಎಂದು ಎದ್ದು ನಿಂತರೆ ಮಾತ್ರ ಸ್ವಾತಂತ್ರ್ಯ ಸಿಗುತ್ತದೆ. ಇಂದು ನಾವು ಸ್ವತಂತ್ರರಲ್ಲ, ಇದು ಹಿಂದೂಸ್ತಾನದ ವಾಸ್ತವ.

  • ಸರ್ವೋಚ್ಚ ನ್ಯಾಯಾಲಯದ ಪ್ರಗತಿಪರ ತೀರ್ಪುಗಳ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದರೂ ಅದು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ.

  • ನೀವು ಗೌಪ್ಯತೆಯ ತೀರ್ಪು ನೀಡಿದ್ದೀರಿ ... ಆದರೆ ಜಾರಿ ನಿರ್ದೇಶನಾಲಯದ

    (ಇ ಡಿ) ಅಧಿಕಾರಿ ನಿಮ್ಮ ಮನೆಗೆ ಬಂದಾಗ, ಗೌಪ್ಯತೆ ಎಲ್ಲಿ ಉಳಿಯುತ್ತದೆ? ಕಾಗದದ ಮೇಲೆ ಬರೆಯುವುದು ಬೇರೆ ವಿಷಯ, ಆದರೆ ಅದನ್ನು ಕಾರ್ಯಗತಗೊಳಿಸುವುದು ಮತ್ತೊಂದು ಸಂಗತಿ.

  • ಈ ದೇಶದ ಅತ್ಯಂತ ಅಪಾಯಕಾರಿ ಸಂಸ್ಥೆ ಎಂದರೆ ಅದು ಜಾರಿ ನಿರ್ದೇಶನಾಲಯ. ಅದು ವೈಯಕ್ತಿಕ ಸ್ವಾತಂತ್ರ್ಯದ ಎಲ್ಲಾ ಎಲ್ಲೆಗಳನ್ನು ಮೀರಿದೆ.

  • ಸಮಾಜದ ಮನಸ್ಥಿತಿ ಬದಲಾಗುವವರೆಗೆ ಕಾನೂನು, ಸಮಾಜ ಬದಲಾಗುವುದಿಲ್ಲ. ಸಮಾಜದ ಮನಸ್ಥಿತಿ ಬದಲಾದರೆ ಮಾತ್ರ ಈ ರಾಷ್ಟ್ರದ ಯಾವುದೇ ಸಂಸ್ಥೆ ಸ್ವತಂತ್ರವಾಗಿರಲು ಸಾಧ್ಯ. ಜನ ಬೀದಿಗೆ ಬರಬೇಕಾಗುತ್ತದೆ.

  • ಸುಪ್ರೀಂ ಕೋರ್ಟ್‌ನ ಸತ್ಯ ಏನೆಂದರೆ ಎಲ್ಲಾ ಸೂಕ್ಷ್ಮ ಪ್ರಕರಣಗಳು ಕೆಲವು ನ್ಯಾಯಮೂರ್ತಿಗಳ ಬಳಿಗೆ ಹೋಗುತ್ತವೆ. ಬಳಿಕ ಅದರ ಫಲಿತಾಂಶ ಏನಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುತ್ತದೆ.

  • ರಾಜಿ ಪ್ರಕ್ರಿಯೆಗೊಳಗಾಗಿ ನ್ಯಾಯಮೂರ್ತಿಗಳು ವಿಚಾರಣೆ ನಡೆಸುವ ನ್ಯಾಯಾಲಯದಲ್ಲಿ ವ್ಯವಸ್ಥೆ ಎಂಬುದು ಇರುವುದಿಲ್ಲ. ಯಾವ ಪ್ರಕರಣವನ್ನು ಯಾರು ಮತ್ತು ಯಾವಾಗ ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ನಿರ್ಧರಿಸುವ ಕಡೆಗಳಲ್ಲಿ ಯಾವುದೇ ವ್ಯವಸ್ಥೆ ಇರುವುದಿಲ್ಲ. ಅಂತಹ ನ್ಯಾಯಾಲಯ ಎಂದಿಗೂ ಸ್ವತಂತ್ರವಾಗಿರಲು ಸಾಧ್ಯವಿಲ್ಲ. ಸಾಧ್ಯವೇ ಎಂಬುದನ್ನು ನೀವು ನನಗೆ ಹೇಳಿ?

  • ನ್ಯಾಯಾಧೀಶರು ಯಾವಾಗಲೂ ಕಾನೂನಿನ ಪ್ರಕಾರ ಪ್ರಕರಣಗಳನ್ನು ತೀರ್ಮಾನಿಸುತ್ತಾರೆ ಎಂದು ನಂಬಿದರೆ ಅದು ತಪ್ಪು ಕಲ್ಪನೆ.

  • ನ್ಯಾಯಾಲಯದ ಆಚೆಗೆ ಅನೇಕ ಸಂಗತಿಗಳಿರುತ್ತವೆ ಎಂಬುದು ವಾಸ್ತವಾಂಶ. ಅವರು ಕೂಡ ಮನುಷ್ಯರೇ, ನಾವೆಲ್ಲರೂ ಮನುಷ್ಯರೇ…ನಾವು ಪ್ರಭಾವಕ್ಕೊಳಗಾಗುತ್ತೇವೆ. ಇಡೀ ವ್ಯವಸ್ಥೆಯನ್ನೇ ಹಿಡಿತಕ್ಕೆ ತೆಗೆದುಕೊಂಡಾಗ ಅದು ಪ್ರಕರಣವನ್ನು ನಿರ್ಧರಿಸುವವರ ಮೇಲೂ ಪ್ರಭಾವ ಬೀರುತ್ತದೆ. ಈ ಸಮಸ್ಯೆಯನ್ನು ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಪರಿಹರಿಸಬೇಕಾಗಿದೆ ಮತ್ತು ಸುಪ್ರೀಂ ಕೋರ್ಟ್‌ ತೀರ್ಪುಗಳನ್ನು ಅನುಷ್ಠಾನಕ್ಕೆ ತಾರದೆ ಅವುಗಳನ್ನು ವಿಶ್ಲೇಷಿಸುವುದರಲ್ಲಿ ಯಾವುದೇ ಅರ್ಥವಿಲ್ಲ.

  • ಸಲಿಂಗಕಾಮ ಅಪರಾಧ ಎನ್ನುತ್ತಿದ್ದ ಐಪಿಸಿ ಸೆಕ್ಷನ್‌ 377ನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದ ಬಗ್ಗೆ ನಾವು ಮಾತನಾಡುತ್ತೇವೆ. ಏನಾಗುತ್ತಿದೆ ನೋಡಿ! ಅವರನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆಯೇ? ಇಲ್ಲ. ಈ ದೇಶದಲ್ಲಿ ಮಹಿಳೆಯರನ್ನು ಉತ್ತಮವಾಗಿ ನಡೆಸಲಾಗಿದೆಯೇ? ಇಲ್ಲ!

  • ಧರ್ಮ ಸಂಸದ್ ರೀತಿಯ ಭಾಷಣಗಳು ನಾವು ಯಾವ ರೀತಿಯ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದು ಆಶ್ಚರ್ಯಪಡುವಂತೆ ಮಾಡುತ್ತವೆ. ನಾವು ಈ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ ಮುಂದಿಟ್ಟಾಗ ಅದು ಏನು ಮಾಡಿತು? ಕನಿಷ್ಠ ಕ್ರಮಗಳನ್ನು ತೆಗೆದುಕೊಂಡಿತೆ? ಯಾರನ್ನಾದರೂ ಬಂಧಿಸಲಾಗಿದೆಯೇ? ಹಾಗೊಂದು ವೇಳೆ ಆದರೂ, ಒಂದೆರಡು ದಿನಗಳಲ್ಲಿ ಅವರು ಜಾಮೀನು ಪಡೆಯುತಾರೆ.

  • ತಮಗೆ ಜಾಮೀನು ದೊರೆಯಬಹುದು ಎಂದು ಆರೋಪಿ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುತ್ತಾನೆ. ಆದರೆ ಸತ್ಯ ಏನೆಂದರೆ ಆವನಿಗೆ ಅದು ಸಿಗುವುದಿಲ್ಲ. ನೀವು ತಪ್ಪಿತಸ್ಥರಲ್ಲ ಎಂದು ನ್ಯಾಯಾಧೀಶರಿಗೆ ಸಾಬೀತುಪಡಿಸಬೇಕು ಎಂಬಂತಹ ಜಾಮೀನು ನಿಯಮಗಳಿವೆ. ಅದನ್ನು ನಾನು ಹೇಗೆ ಮಾಡಲು ಸಾಧ್ಯ? ಈ ಕಾನೂನನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ. ಅಂತಹ ಸುಪ್ರೀಂ ಕೋರ್ಟ್‌ನಲ್ಲಿ ನೀವು ಹೇಗೆ ವಿಶ್ವಾಸ ಇರಿಸಲು ಸಾಧ್ಯ?

ವೀಡಿಯೊವನ್ನು ಇಲ್ಲಿ ನೋಡಿ

Related Stories

No stories found.
Kannada Bar & Bench
kannada.barandbench.com