ಉಡುಪಿಯ ನೇತ್ರ ಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ಗುಪ್ತ ವಿಡಿಯೊ ಚಿತ್ರೀಕರಿಸಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಂತ್ರಸ್ತ ವಿದ್ಯಾರ್ಥಿನಿಯರು ಉಡುಪಿಯ ನ್ಯಾಯಾಲಯದಲ್ಲಿ ಗುರುವಾರ ಹೇಳಿಕೆ ದಾಖಲಿಸಿದ್ದಾರೆ.
ಉಡುಪಿಯ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎಸ್ ನಿರ್ಮಲಾ ಅವರ ಮುಂದೆ ಹಾಜರಾದ ಇಬ್ಬರು ಸಂತ್ರಸ್ತ ವಿದ್ಯಾರ್ಥಿನಿಯರು ಸಿಆರ್‌ಪಿಸಿ ಸೆಕ್ಷನ್ 164ರ ಅಡಿ ಹೇಳಿಕೆ ದಾಖಲಿಸಿದ್ದಾರೆ.
ಘಟನೆಯ ಸಂಬಂಧ ಮಲ್ಪೆ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಸುಷ್ಮಾ ಜಿ ಬಿ ಅವರ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 509, 204, 175, ಜೊತೆಗೆ 34 ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66(ಇ) ಅಡಿ ಮೂವರು ವಿದ್ಯಾರ್ಥಿನಿಯರು ಹಾಗೂ ಆಡಳಿತ ಮಂಡಳಿಯ ರಶ್ಮಿ ಅವರ ವಿರುದ್ಧ ಜುಲೈ 26ರಂದು ಪ್ರಕರಣ ದಾಖಲಿಸಲಾಗಿತ್ತು. ಜುಲೈ 28ರಂದು ವಿಚಾರಣಾಧೀನ ನ್ಯಾಯಾಲಯವು ಆರೋಪಿಗಳೆಲ್ಲರಿಗೂ ಜಾಮೀನು ಮಂಜೂರು ಮಾಡಿತ್ತು.
ಜುಲೈ 25ರಂದು ಆಡಳಿತ ಮಂಡಳಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಾವು ವಿಡಿಯೊ ಮಾಡಿದ್ದೇವೆ ಎಂದು ವಿದ್ಯಾರ್ಥಿನಿಯರು ತಪ್ಪೊಪ್ಪಿಗೆ ನೀಡಿದ್ದು, ಆ ಉದ್ದೇಶಕ್ಕಾಗಿ ಅವರನ್ನು ಅಮಾನತು ಮಾಡಿರುತ್ತೇವೆ ಎಂದು ಆಡಳಿತ ಮಂಡಳಿ ತಿಳಿಸಿರುವ ಬಗ್ಗೆ ವರದಿಯಾಗಿತ್ತು.