ನ್ಯಾಯಾಂಗದ ಎಲ್ಲ ಅಧಿಕಾರಿಗಳು, ನ್ಯಾಯಮೂರ್ತಿಗಳು ಗಾಂಧೀಜಿಯ ಸಹನಶೀಲ ಗುಣ ಮೈಗೂಡಿಸಿಕೊಳ್ಳಬೇಕು: ಸಿಜೆ ಅಭಯ್ ಓಕಾ

“ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ಸಹನೆಯ ಮಹತ್ವ ನಮಗೆ ಅರ್ಥವಾದರೂ ನಾವು ಅದನ್ನು ಅನುಸರಿಸುತ್ತಿಲ್ಲ,” ಎಂದು ಮುಖ್ಯ ನ್ಯಾಯಮೂರ್ತಿ ಓಕಾ ಅವರು ಮಹಾತ್ಮ ಗಾಂಧೀಜಿಯವರ 151ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಹೇಳಿದರು.
Chief Justice Oka
Chief Justice Oka
Published on

“ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಹನಶೀಲತೆಯ ಸಂದೇಶವನ್ನು ನ್ಯಾಯಾಂಗದ ಎಲ್ಲ ಅಧಿಕಾರಿಗಳು ಮತ್ತು ನ್ಯಾಯಮೂರ್ತಿಗಳು ಅಗತ್ಯವಾಗಿ ಮೈಗೂಡಿಸಿಕೊಳ್ಳಬೇಕು” ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಸಲಹೆ ನೀಡಿದ್ದಾರೆ.

ಮಹಾತ್ಮ ಗಾಂಧೀಜಿ ಅವರ 151ನೇ ಜನ್ಮ ದಿನಾಚರಣೆಯ ಅಂಗವಾಗಿ ಶುಕ್ರವಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ, ಬೆಂಗಳೂರಿನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಜಲ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ “2020ರಲ್ಲಿ ಗಾಂಧೀಜಿ ಪ್ರಸ್ತುತತೆ” ಎಂಬ ವೆಬಿನಾರ್ ನಲ್ಲಿ ಅವರು ಮಾತನಾಡಿದರು.

“ನ್ಯಾಯಾಂಗದ ಎಲ್ಲಾ ಅಧಿಕಾರಿಗಳು ಅಗಾಧವಾದ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಶೇಷವಾಗಿ ಇಂದು ಇಡೀ ಜಗತ್ತು ಕೋವಿಡ್ ಸಾಂಕ್ರಾಮಿಕತೆಯ ಹೊಡೆತಕ್ಕೆ ಸಿಲುಕಿದೆ. ಗಾಂಧೀಜಿ ಅವರನ್ನು ಓದಿದ ಬಳಿಕ ನನಗೆ ತಕ್ಷಣಕ್ಕೆ ನೆನಪಾಗಿದ್ದು, ನ್ಯಾಯಾಂಗದ ಎಲ್ಲ ಅಧಿಕಾರಿಗಳು ಮತ್ತು ನ್ಯಾಯಮೂರ್ತಿಗಳು ಸಹನಶೀಲತೆಯನ್ನು ಹೊಂದಿರುಬೇಕು ಎಂಬುದಾಗಿದೆ. ಕೆಲಸದ ಒತ್ತಡದಿಂದಾಗಿ ಸಹನಶೀಲತೆಯ ಪ್ರಾಮುಖ್ಯತೆ ಅರ್ಥವಾದರೂ ಅದನ್ನು ಅನುಸರಿಸಲಾಗುತ್ತಿಲ್ಲ.”
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ

“ಸಹನಶೀಲತೆ, ದೇವರು, ಧರ್ಮ ಇದೆಲ್ಲಕ್ಕೂ ಮುಖ್ಯವಾಗಿ ಸ್ವಾತಂತ್ರ್ಯದ ವಿಚಾರದಲ್ಲಿ ಮಹಾತ್ಮ ಗಾಂಧೀಜಿ ಅವರು ಹೊಂದಿದ್ದ ಆಲೋಚನೆಗಳು ಇಂದಿಗೂ ನಮಗೆ ದಾರಿದೀವಿಗೆಯಾಗಿವೆ” ಎಂದರು.

“ದಕ್ಷಿಣ ಆಫ್ರಿಕಾದಲ್ಲಿ ವಕೀಲರಾಗಿ ಅವರು ಮಾಡಿದ ಕೆಲಸ ವಕೀಲ ವೃಂದ ಮತ್ತು ಕಾನೂನು ಕ್ಷೇತ್ರದಲ್ಲಿರುವ ಎಲ್ಲರಿಗೂ ಪಾಠವಾಗಿದೆ… ಅಲ್ಲಿ ಕಾನೂನು ಸೇವೆ ನೀಡುತ್ತಲೇ ನಾಗರಿಕ ಹಕ್ಕುಗಳ ಕಾರ್ಯಕರ್ತರಾಗಿ ಗಾಂಧೀಜಿ ಹೊರಹೊಮ್ಮಿದರು.”
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ

ಉಭಯ ಕಕ್ಷಿದಾರರನ್ನು ಸೌಹಾರ್ದಯುತ ಮಾತುಕತೆ ಹಾಗೂ ಒಪ್ಪಂದದ ಮೂಲಕ ಸಮಸ್ಯೆ ಬಗೆಹರಿಸುವುದು ವಕೀಲರ ಕರ್ತವ್ಯ ಎಂದು ಮಹಾತ್ಮ ಗಾಂಧೀಜಿ ಸ್ಪಷ್ಟವಾಗಿ ನಂಬಿದಿದ್ದರು. ಲೋಕ ಅದಾಲತ್ ಸಂದರ್ಭದಲ್ಲಿ ನಾವು ಅದನ್ನೇ ಹೇಳುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ಓಕಾ ಹೇಳಿದರು.

“ದೇಶದ ಎಲ್ಲಾ ಗ್ರಾಮಗಳು ಸ್ವಾವಲಂಬಿಯಾಗಬೇಕು ಎಂದು ಅವರು ನಂಬಿದ್ದರು. ಗ್ರಾಮದಲ್ಲಿ ನೆಲೆಸುವ ಎಲ್ಲಾ ನಾಗರಿಕರಿಗೂ ಉದ್ಯೋಗ ದೊರೆಯುವಂತಾಗಬೇಕು. ಗ್ರಾಮ ಕೈಗಾರಿಕೆಗೆ ಗಾಂಧೀಜಿ ಒತ್ತು ನೀಡಿದರು… ಪ್ರಸಕ್ತ ನಾವು ಗಂಭೀರವಾದ ವಲಸೆ ಕಾರ್ಮಿಕರ ಸಮಸ್ಯೆಯನ್ನು ಕಂಡಿದ್ದೇವೆ. ಗಾಂಧೀಜಿ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕಾದ ಸಮಯ ನಮಗೆ ಬಂದಿದೆ.”
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ

ಗಾಂಧೀಜಿ ಅವರ ಚಿಂತನೆಗಳನ್ನು ಚಾಚೂತಪ್ಪದೇ ಪಾಲಿಸಿದ್ದರೆ ವಲಸೆ ಕಾರ್ಮಿಕರು ಉದ್ಯೋಗ ಅರಸಿ ಬೇರೆ ನಗರಗಳಿಗೆ ತೆರಳುವ ಅಗತ್ಯ ಉದ್ಭವಿಸುತ್ತಿರಲಿಲ್ಲ ಎಂದು ಅವರು ಹೇಳಿದರು.

Also Read
ಕಾನೂನು ಎಂದರೆ ಏನು? ಎಂದು ಕೇಳಿದ್ದ ಶಿವಸೇನೆಯ ರಾವತ್‌ಗೆ ಕಾನೂನಿನ ಬಿಸಿ ಮುಟ್ಟಿಸಿದ ಬಾಂಬೆ ಹೈಕೋರ್ಟ್

“ನ್ಯಾಯಾಂಗದ ಅಧಿಕಾರಿಯೇ ಆಗಿರಲಿ, ಕಾನೂನು ವಿದ್ಯಾರ್ಥಿ ಅಥವಾ ಎಂಜಿನಿಯರಿಂಗ್ ವಿದ್ಯಾರ್ಥಿಯೇ ಆಗಿರಲಿ… ಎಲ್ಲರಿಗೂ ಗಾಂಧೀಜಿ ಅವರು ಅಳವಡಿಸಿಕೊಂಡಿದ್ದ ಚಿಂತನೆಗಳು ಪ್ರಸ್ತುತವಾಗಿದ್ದು, ಮುಂದೆಯೂ ಪ್ರಸ್ತುತವಾಗಿರಲಿವೆ” ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರನ್ನು ಅವರ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಓಕಾ ಅವರನ್ನೂ ನೆನೆಪಿಸಿಕೊಂಡು ಗುಣಗಾನ ಮಾಡಿದರು.

Kannada Bar & Bench
kannada.barandbench.com