
ಪಠಾಣ್‌ಕೋಟ್‌ನಿಂದ ಜಮ್ಮುವಿನ ಉಧಾಂಪುರದವರೆಗೆ ರಾಷ್ಟ್ರೀಯ ಹೆದ್ದಾರಿ - 44ರ ಕಾಮಗಾರಿ ಪೂರ್ಣಗೊಳ್ಳುವವರೆಗೆ ಎರಡು ಟೋಲ್ ಸಂಗ್ರಹ ಕೇಂದ್ರಗಳಲ್ಲಿ ಕೇವಲ ಶೇಕಡಾ 20 ರಷ್ಟು ಮಾತ್ರ ಶುಲ್ಕ ಸಂಗ್ರಹಿಸಬೇಕು ಎಂದು ಜಮ್ಮು, ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಮಂಗಳವಾರ ಆದೇಶಿಸಿದ್ದು ಇದರಿಂದ ಹೆದ್ದಾರಿ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ [ಸುಗಂಧ ಸಾಹ್ನಿ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಕಾಮಗಾರಿ ಕಾರಣಕ್ಕೆ ಹೆದ್ದಾರಿ ಕಳಪೆ ಸ್ಥಿತಿಯಲ್ಲಿದ್ದರೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಅಥವಾ ಶುಲ್ಕ ವಸೂಲಾತಿ ಮಾಡುವ ಸಂಸ್ಥೆ ಪ್ರಯಾಣಿಕರಿಂದ ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ತಾಶಿ ರಬ್ಸ್ತಾನ್ ಮತ್ತು ನ್ಯಾಯಮೂರ್ತಿ ಎಂಎ ಚೌಧರಿ ಅವರಿದ್ದ ಪೀಠ ತಿಳಿಸಿದೆ.
ಉತ್ತಮ ನಿರ್ವಹಣೆ ಇರುವ ಮೂಲಸೌಕರ್ಯವನ್ನು ಬಳಕೆದಾರರಿಗೆ ಒದಗಿಸುವುದಕ್ಕಾಗಿ ಟೋಲ್ ಸಂಗ್ರಹಿಸಬೇಕು ಎಂಬುದು ತತ್ವ. ಹೆದ್ದಾರಿ ಹದಗೆಟ್ಟು ವಾಹನ ಚಲಾಯಿಸಲು ಅನಾನುಕೂಲ ಉಂಟಾದಾಗ ಪ್ರಯಾಣಿಕರು ಟೋಲ್ ಪಾವತಿಸುವುದು ಅನ್ಯಾಯ ಮಾತ್ರವಲ್ಲದೆ ಅವರಿಗೆ ನ್ಯಾಯಯುತ ಸೇವೆ ದೊರೆಯದಂತಾಗುತ್ತದೆ. ತಾವು ಹಣ ಪಾವತಿ ಮಾಡಿ ಬಳಸುತ್ತಿರುವ ರಸ್ತೆಯ ಕಳಪೆ ಸ್ಥಿತಿ ಖಂಡಿತಾ ಪ್ರಯಾಣಿಕರನ್ನು ನಿರಾಶರನ್ನಾಗಿ ಮಾಡಿರುತ್ತದೆ. ಸುಗಮ, ಸುರಕ್ಷಿತ ಮತ್ತು ಉತ್ತಮ ನಿರ್ವಹಣೆ ಇರುವ ಹೆದ್ದಾರಿಗಳಿಗೆ ಮಾತ್ರ ಟೋಲ್ ಸಂಗ್ರಹಿಸಬೇಕು ಎಂಬುದು ಮೂಲ ತತ್ವವಾಗಿದೆ ಎಂದು ನ್ಯಾಯಾಲಯ ನುಡಿಯಿತು.
ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇ ಯೋಜನೆಯಡಿ ನಿರ್ಮಾಣ ಹಂತದಲ್ಲಿರುವ ಪಠಾಣ್‌ಕೋಟ್‌ನಿಂದ ಉಧಮ್‌ಪುರವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಲಖನ್‌ಪುರ, ಥಂಡಿ ಖುಯಿ ಮತ್ತು ಬಾನ್ ಟೋಲ್ ಪ್ಲಾಜಾಗಳಲ್ಲಿ ಟೋಲ್ ಸಂಗ್ರಹದಿಂದ ವಿನಾಯಿತಿ ನೀಡುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಲಾಗಿತ್ತು.
ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಎರಡು ಟೋಲ್ ಪ್ಲಾಜಾಗಳ ನಡುವೆ ಕಡಿಮೆ ಅಂತರ ಇರುವುದು ಮತ್ತು ಗುತ್ತಿಗೆದಾರರು ಕ್ರಿಮಿನಲ್ ಹಿನ್ನೆಲೆಯುಳ್ಳವರನ್ನು ನೇಮಿಸಿಕೊಳ್ಳುವುದನ್ನು ಇದೇ ವೇಳೆ ಗಮನಿಸಿದ ನ್ಯಾಯಾಲಯ ಅದನ್ನು ತಡೆಯುವುದಕ್ಕಾಗಿ ವಿವಿಧ ನಿರ್ದೇಶನಗಳನ್ನೂ ನೀಡಿತು.