ಟೂಲ್‌ಕಿಟ್‌ ಎಫ್‌ಐಆರ್‌ ಪ್ರಕರಣ: ದಿಶಾ ಜಾಮೀನು ಮನವಿಯ ತೀರ್ಪುನ್ನು ಫೆ. 23ಕ್ಕೆ ಪ್ರಕಟಿಸಲಿರುವ ದೆಹಲಿ ನ್ಯಾಯಾಲಯ

“ದೇವಸ್ಥಾನಕ್ಕೆ ದೇಣಿಗೆ ಪಡೆಯುವ ಸಂಬಂಧ ದರೋಡೆಕೋರನನ್ನು ಭೇಟಿ ಮಾಡಿದರೆ ನನ್ನನ್ನು ದರೋಡೆಯಲ್ಲಿ ಭಾಗಿ ಎಂದು ಹೇಗೆ ಹೇಳುತ್ತೀರಿ? ದಿಶಾ ವಿರುದ್ಧ ಇರುವ ಸಾಕ್ಷ್ಯವಾದರೂ ಏನು?” ಎಂದು ಕಟುವಾಗಿ ಪ್ರಶ್ನಿಸಿದ ನ್ಯಾಯಾಧೀಶ ಧರ್ಮೇಂದ್ರ ರಾಣಾ.
Disha Ravi
Disha Ravi
Published on

ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯಿದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದ ಟೂಲ್‌ಕಿಟ್‌ ಕುರಿತು ದೆಹಲಿ ಪೊಲೀಸರು ಪರಿಸರ ಕಾರ್ಯಕರ್ತೆ ದಿಶಾ ರವಿಯವರ ವಿರುದ್ಧ ದಾಖಲಿಸಿದ್ದ ಪ್ರಥಮ ಮಾಹಿತಿ ವರದಿಗೆ (ಎಫ್‌ಐಆರ್‌) ಸಂಬಂಧಿಸಿದ ಜಾಮೀನು ಮನವಿಯ ತೀರ್ಪನ್ನು ದೆಹಲಿ ನ್ಯಾಯಾಲಯವು ಶನಿವಾರ ಕಾಯ್ದಿರಿಸಿದೆ. ನ್ಯಾಯಾಧೀಶರಾದ ಧರ್ಮೇಂದ್ರ ರಾಣಾ ಫೆಬ್ರವರಿ 23ರಂದು ಈ ಕುರಿತು ಆದೇಶ ಹೊರಡಿಸಲಿದ್ದಾರೆ.

ಇದಕ್ಕೂ ಮುನ್ನ ದೆಹಲಿ ಪೊಲೀಸ್‌ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್‌ ಎಸ್‌ ವಿ ರಾಜು ಅವರು ದಿಶಾ ಅವರು ದುಷ್ಕೃತ್ಯದ ಭಾಗವಾಗಿದ್ದಾರೆ. ಆಕೆಗೆ ಜಾಮೀನು ನೀಡಿದರೆ ಸಾಕ್ಷ್ಯವನ್ನು ತಿರುಚುವ ಸಾಧ್ಯತೆ ಇದೆ ಎಂದು ಬಲವಾಗಿ ವಾದಿಸಿದರು. ಇದನ್ನು ಅಲ್ಲಗಳೆದ ದಿಶಾ ಪರ ವಕೀಲ ಸಿದ್ಧಾರ್ಥ್‌ ಅಗರ್ವಾಲ್‌ ಅವರು ಟೂಲ್‌ಕಿಟ್‌ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ವಕೀಲೆ ನಿಕಿತಾ ಜೇಕಬ್‌ ಮತ್ತು ಶಂತನು ಅವರಿಗೆ ಮಧ್ಯಂತರ ಜಾಮೀನು ದೊರೆತಿದೆ. ಇದೇ ಹಿನ್ನೆಲೆಯಲ್ಲಿ ದಿಶಾಗೆ ಜಾಮೀನು ಮಂಜೂರು ಮಾಡುವ ಮೂಲಕ ನ್ಯಾಯದ ಸಮತೋಲನ ಕಾಪಾಡಬೇಕು ಎಂದು ವಿನಂತಿಸಿದರು.

ದಿಶಾ ಜಾಮೀನು ಮನವಿಯ ವಾದ-ಪ್ರತಿವಾದದ ಸಂದರ್ಭದಲ್ಲಿ ಕೇಳಿಬಂದ ಪ್ರಮುಖ ಅಂಶಗಳು ಇಂತಿವೆ:

  • ಆರೋಪಿ ದಿಶಾ ಹಾರಿಕೆಯ ಉತ್ತರ ನೀಡುತ್ತಿದ್ದು, ಆಕೆಯನ್ನು ಸಹ ಆರೋಪಿಗಳ ಜೊತೆಗೆ ಮುಖಾಮುಖಿಯಾಗಿಸಬೇಕಿದೆ. ಈ ಹಿನ್ನೆಲೆಯಲ್ಲಿ ಶಂತನುಗೆ ನೋಟಿಸ್‌ ಜಾರಿಗೊಳಿಸಲಾಗಿದೆ. ಹೀಗಾಗಿ ಆರೋಪಿಯ ನ್ಯಾಯಾಂಗ ಬಂಧನವನ್ನು ಫೆಬ್ರವರಿ 22ರ ವರೆಗೆ ಮುಂದುವರಿಸಬೇಕು ಎಂದು ಸರ್ಕಾರಿ ಅಭಿಯೋಜಕ ಇರ್ಫಾನ್‌ ಅಹ್ಮದ್‌ ಮನವಿ ಮಾಡಿದರು.

  • ಪೊಯಟಿಕ್‌ ಜಸ್ಟೀಸ್‌ ಫೌಂಡೇಶನ್‌ ಎಂಬ ಸಂಸ್ಥೆಯು ಖಲಿಸ್ಥಾನ ರಾಜ್ಯ ಹೋರಾಟ ನಡೆಸುತ್ತಿದೆ. ಇದಕ್ಕೆ ಬೆಂಬಲ ಗಳಿಸಲು ಮತ್ತು ತನ್ನ ಚಟುವಟಿಕೆಗಳನ್ನು ವಿಸ್ತರಿಸಲು ರೈತರ ಹೋರಾಟದ ಲಾಭ ಪಡೆಯಲು ಯತ್ನಿಸುತ್ತಿದೆ. ಇದೇ ಕಾರಣಕ್ಕಾಗಿ ಕೆನಡಾ ಮೂಲದ ಆರೋಪಿಯ ಜೊತೆ ಸೇರಿ ಟೂಲ್‌ಕಿಟ್‌ ಸೃಷ್ಟಿಸಲಾಗಿದೆ. ಇದು ಐಪಿಸಿ ಸೆಕ್ಷನ್‌ 124ಎ ಕ್ಕೆ ಸಮನಾಗಿದೆ ಎಂದು ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ)‌ ಎಸ್‌ ವಿ ರಾಜು.

  • ದಿಶಾ ಮತ್ತು ನಿಖಿತಾ ಅವರು ದುಷ್ಕೃತ್ಯದ ಸ್ಥಳೀಯ ದೃಢೀಕರಣಕಾರರು. ಅಂತಾರಾಷ್ಟ್ರೀಯ ಖ್ಯಾತಿಯ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್‌ ಅವರು ಟ್ವೀಟ್‌ ಮಾಡಿದ್ದ‌ ಟೂಲ್‌ಕಿಟ್‌ ಅನ್ನು ಅಳಿಸಿಹಾಕುವಂತೆ ದಿಶಾ ಕೋರಿದ್ದಾರೆ. ಏಕೆ ಹೀಗೆ ಮಾಡಿದರು? ಇದು ದುಷ್ಕೃತ್ಯದ ಭಾಗ ಎಂದ ಎಎಸ್‌ಜಿ ರಾಜು.

  • ಒಂದೊಮ್ಮೆ ನಾನು ಒಂದು ಹೋರಾಟದ ಜೊತೆ ಗುರುತಿಸಿಕೊಂಡು ಕೆಲವರನ್ನು ಕೆಲವು ಉದ್ದೇಶಗಳಿಗೆ ಭೇಟಿ ಮಾಡಿದರೆ, ಅದೇ ಉದ್ದೇಶವನ್ನು ನೀವು ನನಗೆ ಹೇಗೆ ಅನ್ವಯಿಸುತ್ತೀರಿ? ಎಂದ ನ್ಯಾಯಾಧೀಶ ಧರ್ಮೇಂದ್ರ ರಾಣಾ.

  • ಟ್ರ್ಯಾಕ್ಟರ್‌ ರ್ಯಾಲಿಯ ಸಂದರ್ಭದಲ್ಲಿನ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಿಶಾ ವಿರುದ್ಧ ಯಾವ ಸಾಕ್ಷಿಯಿದೆ? ಯಾವುದಾದರು ಸಾಕ್ಷಿ ಇದೆಯೇ? ಅಥವಾ ಅನುಮಾನಗಳ ಮೇಲೆ ತೀರ್ಮಾನಿಸಲಾಗುತ್ತಿದೆಯೇ? ಎಂದು ಪ್ರಶ್ನಿಸಿದ ನ್ಯಾಯಾಲಯ.

  • ದೇವಸ್ಥಾನಕ್ಕೆ ದೇಣಿಗೆ ಪಡೆಯುವ ಸಂಬಂಧ ನಾನು ದರೋಡೆಕೋರನನ್ನು ಭೇಟಿ ಮಾಡಿದರೆ ನಾನು ದರೋಡೆ ಸಂಚಿನ ಭಾಗಿ ಎಂದು ಹೇಗೆ ಹೇಳುತ್ತೀರಿ? ದಿಶಾ ವಿರುದ್ಧ ಇರುವ ಸಾಕ್ಷ್ಯವಾದರೂ ಏನು? ಎಂದು ಕಟುವಾಗಿ ಪ್ರಶ್ನಿಸಿದ ನ್ಯಾಯಾಧೀಶ ಧರ್ಮೇಂದ್ರ ರಾಣಾ.

  • ರೈತರ ಹೋರಾಟವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಬಿಂಬಿಸುವುದು ದೇಶದ್ರೋಹ ಎಂದಾದರೆ ನಾನು ಅಪರಾಧಿ. ಆ ರೀತಿ ಯೋಜನೆ ಮಾಡಿದರೆ ಅದು ಸಮಸ್ಯೆ… ನಮಗಿಂತ ಭಿನ್ನವಾದ ಆಲೋಚನೆ ಹೊಂದುವುದು ತಪ್ಪು ಎನ್ನುವ ರೀತಿಯಲ್ಲಿ ನಾವು ಅದನ್ನು ಕೆಳಮಟ್ಟಕ್ಕೆ ಇಳಿಸುತ್ತಿದ್ದೇವೆ… ಟೂಲ್‌ಕಿಟ್‌ ಎಂಬುದು ದೇಶದ್ರೋಹಕ್ಕೆ ಸಮನಾಗುವುದಿಲ್ಲ.. ಗ್ರೆಟಾ ಥನ್‌ಬರ್ಗ್‌ ಜೊತೆ ಮಾತನಾಡಿ, ರೈತರ ಹೋರಾಟಕ್ಕೆ ಟ್ವೀಟ್‌ ಮೂಲಕ ಅವರ ಬೆಂಬಲ ಸೂಚಿಸಲು ಮನವೊಲಿಸಿದ್ದು ಸಮಸ್ಯೆಯಾಗಿದೆ. ಆ ಟ್ವೀಟ್‌ ಖಲಿಸ್ತಾನ ಹೋರಾಟಕ್ಕೆ ಸಂಬಂಧಿಸಿದ್ದಲ್ಲ ಎಂದು ದಿಶಾ ಪರ ವಕೀಲ ಸಿದ್ಧಾರ್ಥ್‌ ಅಗರ್ವಾಲ್‌ ವಾದಿಸಿದರು.

  • ನಾನು ದೆಹಲಿಯನ್ನು ತೊರೆಯುವುದಿಲ್ಲ. ಅಲ್ಲದೇ ತನಿಖೆಗೆ ಯಾವುದೇ ರೀತಿಯಲ್ಲೂ ಹಿನ್ನಡೆ ಉಂಟು ಮಾಡುವುದಿಲ್ಲ. ನಾನು ಸಮಾನತೆ ಕಾಪಾಡುವಂತೆ ಕೋರುತ್ತಿದ್ದೇನೆ ಎಂದು ದಿಶಾ ಪರ ವಕೀಲರು ಜಾಮೀನು ನೀಡುವಂತೆ ಮನವಿ ಮಾಡಿದರು.

Kannada Bar & Bench
kannada.barandbench.com