ಟೂಲ್‌ಕಿಟ್‌ ಪ್ರಕರಣ: ವಿದೇಶ ಪ್ರಯಾಣ ಷರತ್ತು ಸಡಿಲಿಸಬೇಕೆಂಬ ದಿಶಾ ರವಿ ಮನವಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಕಾರಣವಿಲ್ಲ ಎಂದು ತೀರ್ಮಾನಿಸಿದ ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರು ಇಂದು ಮನವಿ ತಿರಸ್ಕರಿಸಿದರು.
Disha Ravi, Delhi high court
Disha Ravi, Delhi high court

ತಾನು ಪ್ರತಿಬಾರಿಯೂ ವಿದೇಶಕ್ಕೆ ಪ್ರಯಾಣಿಸುವಾಗ ನ್ಯಾಯಾಲಯದ ಅನುಮತಿ ಪಡೆಯಬೇಕು ಎಂಬ ಜಾಮೀನು ಷರತ್ತನ್ನು ಮಾರ್ಪಡಿಸುವಂತೆ ಕೋರಿ ʼರೈತರ ಟೂಲ್‌ ಕಿಟ್‌ ಪ್ರಕರಣʼದ ಆರೋಪಿ, ಬೆಂಗಳೂರು ಮೂಲದ ಸಾಮಾಜಿಕ ಕಾರ್ಯಕರ್ತೆ ದಿಶಾ ರವಿ ಅವರು ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಕಾರಣವಿಲ್ಲ ಎಂದು ಇಂದು ನ್ಯಾ. ಸ್ವರಣಾ ಕಾಂತ ಶರ್ಮಾ ಅವರಿದ್ದ ಏಕಸದಸ್ಯ ಪೀಠ  ಮನವಿ ತಿರಸ್ಕರಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್‌ 21 ರಂದು ಅವರು ತೀರ್ಪು ಕಾಯ್ದಿರಿಸಿದ್ದರು.

Also Read
'ಮುದ್ರೆರಹಿತ ಮಧ್ಯಸ್ಥಿಕೆ ಒಪ್ಪಂದ ಮಾನ್ಯವೇ?' ಏಳು ನ್ಯಾಯಮೂರ್ತಿಗಳ ಪೀಠಕ್ಕೆ ಪ್ರಕರಣ ವರ್ಗಾಯಿಸಿದ ಸುಪ್ರೀಂ ಕೋರ್ಟ್‌

ಫೆಬ್ರವರಿ 2021ರಲ್ಲಿ, ರೈತರ ಪ್ರತಿಭಟನೆಯ ಟೂಲ್‌ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ  ದಿಶಾ ಅವರನ್ನು ಪೊಲೀಸರು ಬಂಧಿಸಿದ್ದರು. ನಂತರ, ವಿಚಾರಣಾ ನ್ಯಾಯಾಲಯವು ಫೆಬ್ರವರಿ 23, 2021ರಂದು ದಿಶಾರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು. ಆದರೆ, ಜಾಮೀನು ಷರತ್ತಿನ ಪ್ರಕಾರ ಆಕೆ ಪ್ರತಿ ಬಾರಿ ವಿದೇಶ ಪ್ರಯಾಣಿಸುವ ಸಂದರ್ಭದಲ್ಲಿ ವಿಚಾರಣಾ ನ್ಯಾಯಾಲಯದಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ನ್ಯಾಯಾಲಯ ನಿರ್ದೇಶಿಸಿತು.

ಷರತ್ತನ್ನು ಮಾರ್ಪಾಡು ಮಾಡುವಂತೆ ರವಿ ಅವರು ಈ ಹಿಂದೆ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯ ಆಗಸ್ಟ್ 9 ರಂದು ಮನವಿ ತಿರಸ್ಕರಿಸಿತ್ತು. ನಂತರ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು.

Also Read
ದಿಶಾ ರವಿ ಪ್ರಕರಣದ ಆದೇಶದಿಂದ ಹೈಕೋರ್ಟ್‌ಗಳು, ಸುಪ್ರೀಂಕೋರ್ಟ್ ಪಾಠ ಕಲಿಯಬೇಕಿದೆ: ಮಾಜಿ ಅಟಾರ್ನಿ ಜನರಲ್ ರೋಹಟ್ಗಿ

ದೇಶದ್ರೋಹದ ಕಾನೂನಿನಡಿಯಲ್ಲಿ ತನ್ನ ವಿರುದ್ಧದ ವಿಚಾರಣೆಯನ್ನು ಈಗಾಗಲೇ ತಡೆಹಿಡಿಯಲಾಗಿದ್ದು  ತನಗೆ ವಿಧಿಸಲಾದ ಜಾಮೀನು ಷರತ್ತುಗಳನ್ನು ಪಾಲಿಸಿದ್ದೇನೆ ಎಂದು ಅವರು ವಾದಿಸಿದ್ದರು.

ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಆಕೆ ಮೂರು ಬಾರಿ ವಿದೇಶ ಪ್ರವಾಸ ಮಾಡಿದ್ದಾರೆ. ಹಾಗಾಗಿ ವಿದೇಶಕ್ಕೆ ತೆರಳುವಾಗ ನ್ಯಾಯಾಲಯದ ಅನುಮತಿ ಪಡೆಯುವ ಷರತ್ತನ್ನು ಮಾರ್ಪಾಡು ಮಾಡಬೇಕು ಮತ್ತು ಕೇವಲ ಮಾಹಿತಿ ನೀಡಿದರೆ ಸಾಕೆನಿಸುತ್ತದೆ ಎಂದು ರವಿ ಪರ ವಕೀಲರು ವಾದಿಸಿದ್ದರು.
ಆದರೆ ಈಗ ಅನಾನುಕೂಲತೆ ಉಂಟಾಗಿದೆ ಎಂಬುದು ನ್ಯಾಯಾಲಯದ ತೀರ್ಪನ್ನು ಬದಲಿಸುವುದಕ್ಕೆ ಆಧಾರವಾಗದು ಎಂದು ದೆಹಲಿ ಪೊಲೀಸರು ಪ್ರತಿಪಾದಿಸಿದ್ದರು.

Related Stories

No stories found.
Kannada Bar & Bench
kannada.barandbench.com