ಒಂದೇ ರೀತಿ ಕಾಣುವ ವಾಣಿಜ್ಯ ಪೋಷಾಕು ಬದಲಿಸಿಕೊಳ್ಳುವಿರಾ? ಲಂಡನ್‌ ಪ್ರೈಡ್‌ ವಿಸ್ಕಿ ತಯಾರಕರಿಗೆ ಸುಪ್ರೀಂ ಪ್ರಶ್ನೆ

ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ನಡೆದ ವಿಚಾರಣೆ ಕೆಲ ಸ್ವಾರಸ್ಯಕರ ವಾದಗಳಿಗೂ ಸಾಕ್ಷಿಯಾಯಿತು.
ಬ್ಲೆಂಡರ್ಸ್ ಪ್ರೈಡ್ ಮತ್ತು ಲಂಡನ್ ಪ್ರೈಡ್
ಬ್ಲೆಂಡರ್ಸ್ ಪ್ರೈಡ್ ಮತ್ತು ಲಂಡನ್ ಪ್ರೈಡ್

ಬ್ಲೆಂಡರ್ಸ್ ಪ್ರೈಡ್ ವಿಸ್ಕಿ ತಯಾರಿಸುವ ಪೆರ್ನೋಡ್ ರಿಕಾರ್ಡ್ ಇಂಡಿಯಾ ಹೂಡಿದ್ದ ವಾಣಿಜ್ಯ ಚಿಹ್ನೆ ಉಲ್ಲಂಘನೆ ಅರ್ಜಿಗೆ ಸಂಬಂಧಿಸಿದಂತೆ ಲಂಡನ್‌ ಪ್ರೈಡ್‌ ವಿಸ್ಕಿ ತಯಾರಕ ಜೆಕೆ ಎಂಟರ್ಪ್ರೈಸಸ್ ತನ್ನ ಉತ್ಪನ್ನದ ವಾಣಿಜ್ಯ ಪೋಷಾಕನ್ನು ಬದಲಿಸಿಕೊಳ್ಳಲು ಸಿದ್ಧವಿದೆಯೇ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಪ್ರಶ್ನಿಸಿದೆ (ಪೆರ್ನೋಡ್ ರಿಕಾರ್ಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತಿತರರು ಹಾಗೂ ಕರಣ್‌ವೀರ್‌ ಸಿಂಗ್ ಛಾಬ್ರಾ ನಡುವಣ ಪ್ರಕರಣ)

ಈ ನಿಟ್ಟಿನಲ್ಲಿ ಸೂಚನೆಗಳನ್ನು ಪಡೆಯುವಂತೆ ಜೆಕೆ ಎಂಟಪ್ರೈಸರ್ಸ್‌ ವಕೀಲರಿಗೆ ಸೂಚಿಸಿದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ, ಮನೋಜ್ ಮಿಶ್ರಾ ಅವರಿದ್ದ ಪೀಠ ಪ್ರಕರಣವನ್ನುಎರಡು ವಾರ ಮುಂದೂಡಿತು.

ಲಂಡನ್ ಪ್ರೈಡ್ ತಯಾರಕರು ಒಂದೇ ವಾಣಿಜ್ಯ ಫೋಷಾಕು ಮತ್ತು ಬಣ್ಣ ಅಳವಡಿಸಿಕೊಂಡಿರುವುದು ಏಕೆ? ಅವರು ವಾಣಿಜ್ಯ ಪೋಷಾಕು ಬದಲಿಸಿಕೊಳ್ಳುವರೇ ಎಂಬ ಬಗ್ಗೆ ಸೂಚನೆಗಳನ್ನು ಪಡೆಯಿರಿ. ಶುಕ್ರವಾರದ ದಿನ ವಿಚಾರಣೆ ನಡೆಸುತ್ತೇವೆ. ನೀವು ಇದ್ದಕ್ಕಿದ್ದಂತೆ 'ಪ್ರೈಡ್‌' ಪದ ಏಕೆ ಆರಿಸಿಕೊಂಡಿರಿ ಎಂಬ ಬಗ್ಗೆ ನಿಮ್ಮನ್ನು ನೀವೇ ಕೇಳಿಕೊಳ್ಳಿ ಎಂದು ಸಿಜೆಐ ಕೇಳಿದರು.

ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ.ಪರ್ಡಿವಾಲಾ, ನ್ಯಾಯಮೂರ್ತಿ ಮನೋಜ್ ಮಿಶ್ರಾ
ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ.ಪರ್ಡಿವಾಲಾ, ನ್ಯಾಯಮೂರ್ತಿ ಮನೋಜ್ ಮಿಶ್ರಾ

'ಲಂಡನ್ ಪ್ರೈಡ್' ಚಿಹ್ನೆಯಡಿ ಮದ್ಯ ತಯಾರಿಸುವ ಇಂದೋರ್ ಮೂಲದ ಕಂಪನಿ ಜೆಕೆ ಎಂಟರ್‌ಪ್ರೈಸರ್ಸ್‌ ವಾಣಿಜ್ಯ ಚಿಹ್ನೆ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿ ಬ್ಲೆಂಡರ್ಸ್ ಪ್ರೈಡ್ ವಿಸ್ಕಿ ಬ್ರಾಂಡ್‌ ಮಾಲೀಕತ್ವ ಹೊಂದಿರುವ ಪೆರ್ನೋಡ್ ರಿಕಾರ್ಡ್ ಇಂಡಿಯಾ ಸಲ್ಲಿಸಿದ್ದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಈ ತಿಂಗಳ ಆರಂಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿತ್ತು.

ಲಂಡನ್ ಪ್ರೈಡ್ ವಿಸ್ಕಿ ಮಾರಾಟ ನಿಲ್ಲಿಸುವಂತೆ ಕೋರಿ ಪೆರ್ನೋಡ್ ರಿಕಾರ್ಡ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್‌ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅದು 2023ರ ನವೆಂಬರ್ 3ರಂದು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು .

ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ನಡೆದ ವಿಚಾರಣೆ ಕೆಲ ಸ್ವಾರಸ್ಯಕರ ವಾದಗಳಿಗೂ ಸಾಕ್ಷಿಯಾಯಿತು.

ಪೆರ್ನೋಡ್ ರಿಕಾರ್ಡ್ ಪರವಾಗಿ ಹಾಜರಾದ ಹಿರಿಯ ವಕೀಲ ಡಾ.ಅಭಿಷೇಕ್ ಮನು ಸಿಂಘ್ವಿ ಅವರು, ಲಂಡನ್ ಪ್ರೈಡ್ ತಯಾರಕರು ಬ್ಲೆಂಡರ್ಸ್ ಪ್ರೈಡ್ ಉತ್ಪನ್ನಗಳ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ ಎಂದು ವಾದಿಸಿದರು.

ಜೆಕೆ ಎಂಟರ್ಪ್ರೈಸಸ್ (ಲಂಡನ್ ಪ್ರೈಡ್) ಪ್ರತಿನಿಧಿಸುವ ವಕೀಲ ಅಭಿಮನ್ಯು ಭಂಡಾರಿ ಅವರು, ಲಂಡನ್ ಪ್ರೈಡ್‌ ಹೆಚ್ಚು ಅಗ್ಗವಾಗಿದೆ ಎಂದು ಪ್ರತಿಪಾದಿಸಿದರು.

ಜೆ ಕೆ ಎಂಟರ್ಪ್ರೈಸಸ್ ಪರವಾಗಿಯೂ ಹಾಜರಾಗುವ ಹಿರಿಯ ನ್ಯಾಯವಾದಿ ಡಾ. ಎಸ್ ಮುರಳೀಧರ್ ಅವರು ಶ್ರೀಮಂತ ಗ್ರಾಹಕರು ಲಂಡನ್ ಪ್ರೈಡ್ ಮತ್ತು ಬ್ಲೆಂಡರ್ಸ್ ಪ್ರೈಡ್ ನಡುವಿನ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸಬಹುದು ಎಂದರು.

ಈ ಹಂತದಲ್ಲಿ ಸಿಜೆಐ "ಬ್ಲೆಂಡರ್ಸ್‌ ಪ್ರೈಡ್‌ ಖರೀದಿಸಲು ಅಂಗಡಿಗೆ ತೆರಳುವ ವ್ಯಕ್ತಿ ತನಗೆ ಪ್ರೈಡ್‌ ಅಥವಾ ಲಂಡನ್‌ ನೀಡಿ ಎಂದಷ್ಟೇ ಕೇಳುವನೇ?" ಎಂದು ಪ್ರಶ್ನಿಸಿದರು. ಲಂಡನ್ ಪ್ರೈಡ್ ತಯಾರಕರು ಒಂದೇ ರೀತಿಯ ವಾಣಿಜ್ಯ ಪೋಷಾಕನ್ನು ಏಕೆ ಅಳವಡಿಸಿಕೊಂಡಿದ್ದಾರೆ ಎಂದು ಅವರು ಕೇಳಿದರು.

ವಿಚಾರಣೆ ಮುಕ್ತಾಯಗೊಳ್ಳುತ್ತಿದ್ದಂತೆ, ಸಿಜೆಐ ಅವರು ಲಘು ಧಾಟಿಯಲ್ಲಿ"ಡಾ. ಮುರಳೀಧರ್‌ ಅವರು ವಿಸ್ಕಿ ಉತ್ಪನ್ನಗಳ ಬಗ್ಗೆ ಹೆಚ್ಚು ಅಧಿಕಾರಯುತವಾಗಿ ಮಾತನಾಡಿದರು" ಎಂದರು.

ಆಗ ಡಾ. ಮುರಳೀಧರ್‌ ಮುಗುಳ್ನಗೆಯೊಂದಿಗೆ "ನಾನೊಬ್ಬನೇ ಇಲ್ಲಿ ನಶೆರಹಿತವಾಗಿ ಇರುವುದು" ಎಂದು ಚಟಾಕಿ ಹಾರಿಸಿದರು.

ಸಿಂಘ್ವಿ ಅವರಲ್ಲದೆ, ಹಿರಿಯ ವಕೀಲ ಮುಕುಲ್ ರೋಹಟಗಿ ಮತ್ತಿತರ ವಕೀಲರು ಕೂಡ ಪೆರ್ನೋಡ್ ರಿಕಾರ್ಡ್ ಇಂಡಿಯಾವನ್ನು ಪ್ರತಿನಿಧಿಸಿದ್ದರು.

'ರಾಯಲ್ ಚಾಲೆಂಜರ್ಸ್ ಅಮೆರಿಕನ್ ಪ್ರೈಡ್' ಹೆಸರಿನಲ್ಲಿ ವಿಸ್ಕಿ ತಯಾರಿಸುವ ಯುನೈಟೆಡ್ ಸ್ಪಿರಿಟ್ಸ್ ವಿರುದ್ಧದ ಟ್ರೇಡ್ಮಾರ್ಕ್ ಉಲ್ಲಂಘನೆ ಅರ್ಜಿಯಲ್ಲಿ ಪೆರ್ನೋಡ್ ರಿಕಾರ್ಡ್ ಇಂಡಿಯಾಗೆ ಮಧ್ಯಂತರ ಪರಿಹಾರ ನೀಡಲು ಸುಪ್ರೀಂ ಕೋರ್ಟ್ ಕಳೆದ ಸೆಪ್ಟೆಂಬರ್‌ನಲ್ಲಿ ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Kannada Bar & Bench
kannada.barandbench.com