Karnataka High Court
Karnataka High Court

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ: ಶಾಲಾ, ಕಾಲೇಜು, ಕಾರ್ಖಾನೆ ಸಮಯ ಬದಲಾವಣೆಗೆ ರಾಜ್ಯ ಸರ್ಕಾರ ನಕಾರ

ಸರ್ಕಾರ ಸಲ್ಲಿಸಿರುವ ವರದಿ ದಾಖಲೆಯಲ್ಲಿ ಸ್ವೀಕರಿಸಿದ ಪೀಠವು ವಿಚಾರಣೆಯನ್ನು ಜನವರಿ ಮೊದಲ ವಾರಕ್ಕೆ ಮುಂದೂಡಿತು.

ರಾಜಧಾನಿ ಬೆಂಗಳೂರು ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಿಸುವ ಸಲುವಾಗಿ ಶಾಲಾ-ಕಾಲೇಜು ಮತ್ತು ಕಾರ್ಖಾನೆಗಳ ಸಮಯ ಬದಲಾವಣೆ ಕುರಿತು ಕರ್ನಾಟಕ ಹೈಕೋರ್ಟ್ ನೀಡಿದ್ದ ಸಲಹೆಯಂತೆ ಸಂಬಂಧಪಟ್ಟ ಭಾಗೀದಾರರೊಂದಿಗೆ ಸಭೆ ನಡೆಸಿರುವ ರಾಜ್ಯ ಸರ್ಕಾರವು ಸಮಯ ಬದಲಾವಣೆ ಮಾಡಲಾಗದು ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

ಬಳ್ಳಾರಿ ರಸ್ತೆ ಅಗಲೀಕರಣ ಕುರಿತು ಸಮರ್ಪಣಾ ಸಾಂಸ್ಕೃತಿಕ ಮತ್ತು ಸಮಾಜ ಸೇವಾ ಸಂಘಟನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ಸೋಮವಾರ ನಡೆಸಿತು.

ಸರ್ಕಾರದ ಪರ ವಕೀಲರು, ನ್ಯಾಯಾಲಯದ ನಿರ್ದೇಶನದಂತೆ ಶಿಕ್ಷಣ ಹಾಗೂ ಕಾರ್ಮಿಕ ಇಲಾಖೆಯ ಸಂಬಂಧಿಸಿದವರೊಂದಿಗೆ ನಡೆಸಿರುವ ಹಲವು ಸುತ್ತಿನ ಮಾತುಕತೆಗಳ ಫಲಿತಾಂಶ ಒಳಗೊಂಡ ವರದಿಯನ್ನು ಸಲ್ಲಿಸಿದರು.

ಸರ್ಕಾರ ಸಲ್ಲಿಸಿರುವ ವರದಿ ಸ್ವೀಕರಿಸಿದ ಪೀಠವು ವಿಚಾರಣೆಯನ್ನು ಜನವರಿ ಮೊದಲ ವಾರಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಕೀಲ ಜಿ ಆರ್ ಮೋಹನ್ ಅವರು ಸುಗಮ ವಾಹನ ಸಂಚಾರಕ್ಕೆ ಏನೇನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ನ್ಯಾಯಾಲಯಕ್ಕೆ ಸಲಹೆಗಳ ಪಟ್ಟಿಯನ್ನು ಸಲ್ಲಿಕೆ ಮಾಡಿದರು.

ಬೆಂಗಳೂರು ನಗರದ ಸಂಚಾರ ದಟ್ಟಣೆಗೆ ಕೇವಲ ಶಾಲಾ ಸಮಯ ಮಾತ್ರ ಕಾರಣವಲ್ಲ. ಕಚೇರಿ, ಕೈಗಾರಿಕೆ ಮತ್ತು ಇತರೆ ಸ್ಥಳಗಳಿಗೆ ತೆರಳುವ ವಾಹನಗಳೂ ಸಂಚಾರ ದಟ್ಟಣೆಗೆ ಕಾರಣವಾಗಿವೆ. ಸಂಚಾರ ದಟ್ಟಣೆ ತಪ್ಪಿಸಲು ಶೀಘ್ರ ಶಾಲೆ ಆರಂಭಿಸಿದಲ್ಲಿ ಮಕ್ಕಳಿಗೆ ನಿದ್ರೆ, ಊಟ, ಉಪಚಾರ ನಿಗದಿತ ಸಮಯಕ್ಕೆ ಆಗದೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಒಟ್ಟಾರೆ ಶಾಲಾ ಸಮಯದಲ್ಲಿ ಯಾವುದೇ ಬದಲಾವಣೆ ಅವಶ್ಯವಿಲ್ಲಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರು ವರದಿಯಲ್ಲಿ ತಿಳಿಸಿದ್ದಾರೆ.

ಹೊರವರ್ತುಲ ರಸ್ತೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಕಂಪೆನಿಗಳು ಹೈಬ್ರಿಡ್ ಮಾದರಿಯನ್ನು ಅಳವಡಿಸಿಕೊಳ್ಳುವುದನ್ನು ಉತ್ತೇಜಿಸಬೇಕು, ಇದರಿಂದ ರಸ್ತೆಗಳಲ್ಲಿನ ಸಂಚಾರ ದಟ್ಟಣೆ ತಗ್ಗುವುದಲ್ಲದೆ, ಕಚೇರಿಗೆ ಆಗಮಿಸುವ ಸಿಬ್ಬಂದಿ ಸಂಖ್ಯೆ ಇಳಿಮುಖವಾಗುತ್ತದೆ. ಕಾರ್ಖಾನೆಗೆ ತೆರಳುವ ಸಿಬ್ಬದಿ 6ರಿಂದ 9ರ ನಡುವೆ ಪ್ರಯಾಣ ಮಾಡುತ್ತಾರೆ. ಸಂಜೆಯ ನಂತರ ದುಡಿಯುವ ಸ್ಥಳದಿಂದ ಮನೆಗೆ ಮರಳುತ್ತಾರೆ. ಕಾರ್ಖಾನೆಗಳ ಸಮಯದ ಬದಲಾವಣೆ ಮಾಡುವುದರಿಂದ ಸಂಚಾರ ದಟ್ಟಣೆಯ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಯಿಸಿನ್ ವರದಿಯಲ್ಲಿ ತಿಳಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com