ರಸ್ತೆಯ ಮೇಲೆ ರೈಲಿನಂತೆ ಚಲಿಸುವ ಟ್ರಾಮ್‌ಗಳು ಕೋಲ್ಕತ್ತಾ ನಗರದ ಹೆಗ್ಗುರುತಾಗಿದ್ದು ಹಳದಿ ಬಣ್ಣದ ಟ್ಯಾಕ್ಸಿಗಳಂತೆಯೇ ಅವು ನಗರದ ಪರಂಪರೆಯ ಭಾಗವಾಗಿವೆ. ಇವುಗಳನ್ನು ಸರ್ಕಾರ ರಕ್ಷಿಸಬೇಕು ಎಂದು ಕಲ್ಕತ್ತಾ ಹೈಕೋರ್ಟ್ ಬುಧವಾರ ತಿಳಿಸಿದೆ.
ಸರ್ಕಾರದ ನಿರ್ಲಕ್ಷ್ಯ ಮತ್ತು ನಿರ್ವಹಣಾ ದೋಷದಿಂದಾಗಿ ಟ್ರಾಮ್‌ವೇಗಳು ಹಂತಹಂತವಾಗಿ ರದ್ದಾಗುತ್ತಿವೆ ಎಂದು ವಕೀಲ ಹಾಗೂ ಟ್ರಾಮ್ ಪ್ರೇಮಿಯೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ ನೇತೃತ್ವದ ಪೀಠ ನಡೆಸಿತು.
ಅಲ್ಲದೆ ಟ್ರಾಮ್ ವ್ಯವಸ್ಥೆ ಉಳಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ನೀತಿ ರೂಪಿಸಿಲ್ಲ ಎಂದು ಅರಿತ ನ್ಯಾಯಾಲಯ ಹಾಗೆ ಮಾಡುವಂತೆ ಸರ್ಕಾರಕ್ಕೆ ಆದೇಶಿಸಿತು.
ಕಲ್ಕತ್ತಾದ ಜನ ಟ್ರಾಮ್‌ಗಳ ಬಗ್ಗೆ ಉತ್ಸುಕರಾಗಿದ್ದಾರೆ. ಹಳದಿ ಟ್ಯಾಕ್ಸಿಗಳಂತೆ ಅವು ನಗರದ ಹೆಮ್ಮೆಯ ಸಂಕೇತಗಳಾಗಿವೆ.
ಟ್ರಾಮ್ ವ್ಯವಸ್ಥೆ ಇರುವ ಪ್ರಪಂಚದ ಬೇರೆಡೆ ಹಳೆಯ ಟ್ರಾಮ್‌ಗಳಿಗೆ ಬದಲು ಇತ್ತೀಚಿನ ತಂತ್ರಜ್ಞಾನದೊಂದಿಗೆ ಹೊಸ ಟ್ರಾಮ್‌ಗಳನ್ನು ಪರಿಚಯಿಸಿ ಆ ವ್ಯವಸ್ಥೆಯನ್ನು ಉಳಿಸಿಕೊಳ್ಳಲಾಗಿದೆ.
ಹೀಗಾಗಿ ಸರ್ಕಾರ ಅದನ್ನು ಮುಂದುವರಿಸಲು ಬಯಸುವುದಾದರೆ ಖಂಡಿತಾ ಹಾಗೆ ಮಾಡಬಹುದು.
ಟ್ರಾಮ್‌ಗಳ ಬಗ್ಗೆ ಭಾವನಾತ್ಮಕತೆ ಹೊಂದಿರುವ ಕೋಲ್ಕತ್ತಾದ ಜನರ ಅಭಿಪ್ರಾಯವನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಬೇಕಿದೆ.
ಈ ವಿಚಾರದಲ್ಲಿ ಮತ್ತಷ್ಟು ಮುಂದಡಿ ಇಡಬೇಕಿದ್ದು ಟ್ರಾ,ಮ್ ವ್ಯವಸ್ಥೆಯನ್ನು ಕಿತ್ತುಹಾಕುವುದು ಇಲ್ಲವೇ ತೆಗೆದುಹಾಕವುದು ಪರಿಹಾರ ಆಗದು.
ಕೋಲ್ಕತ್ತಾದಲ್ಲಿ ಟ್ರಾಮ್‌ಗಳನ್ನು ಸರ್ಕಾರ ಸಂಪೂರ್ಣ ತೆಗೆದುಹಾಕಬಾರದು ಇಲ್ಲವೇ ವಿಸರ್ಜಿಸಬಾರದು.
ಮುಂದಿನ ಆದೇಶದವರೆಗೆ ಕಲ್ಕತ್ತಾ ಟ್ರಾಮ್‌ವೇಸ್ ಕಾರ್ಪೊರೇಷನ್‌ಗೆ (ಸಿಟಿಸಿ) ಸೇರಿದ ಆಸ್ತಿಗಳನ್ನು ಹರಾಜು ಮಾಡುವಂತಿಲ್ಲ.
ಸಮಸ್ಯೆ ಪರಿಶೀಲಿಸಲು ಸರ್ಕಾರದ ಪ್ರತಿನಿಧಿಗಳು ಮತ್ತು ತಜ್ಞರನ್ನು ಒಳಗೊಂಡ ಸಮಿತಿ ರಚನೆಯಾಗಬೇಕು. 3 ವಾರಗಳಲ್ಲಿ ಸಮಿತಿಗೆ ಸರ್ಕಾರ ಹೆಸರುಗಳನ್ನು ಸೂಚಿಸಬೇಕು.
ಕೇವಲ ಆದಾಯದ ದೃಷ್ಟಿಯಿಂದ ಸಮಸ್ಯೆಯನ್ನು ನೋಡಬಾರದು. ಪರಂಪರೆಯ ಭಾಗವಾಗಿರುವ ಇವುಗಳನ್ನು ರಕ್ಷಿಸದೇ ಹೋದರೆ ಮುಂದಿನ ಪೀಳಿಗೆಗೆ ಏನನ್ನು ಬಿಟ್ಟು ಹೋಗಲು ಸಾಧ್ಯ?