ಪಕ್ಷಕಾರರ ಆತಂಕದ ಹಿನ್ನೆಲೆಯಲ್ಲಿ ಮಕ್ಕಳ ಕಸ್ಟಡಿ ಪ್ರಕರಣಗಳನ್ನು ಒಂದು ನ್ಯಾಯಾಲಯದಿಂದ ಮತ್ತೊಂದು ನ್ಯಾಯಾಲಯಕ್ಕೆ ಗಾರ್ಡಿಯನ್ಸ್ ಮತ್ತು ವಾರ್ಡ್ಸ್ ಕಾಯಿದೆ ಅಡಿ ವರ್ಗಾಯಿಸಲಾಗದು ಎಂದು ಈಚೆಗೆ ಸುಪ್ರೀಂ ಕೋರ್ಟ್ ಹೇಳಿದೆ.
ಚಂಡಿಗಢದಿಂದ ದೆಹಲಿಗೆ ಪ್ರಕರಣ ವರ್ಗಾಯಿಸುವಂತೆ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ದೀಂಪಕರ್ ದತ್ತಾ ಅವರ ನೇತೃತ್ವದ ಏಸಕದಸ್ಯ ಪೀಠವು ವಜಾ ಮಾಡಿದೆ.
“ಪಕ್ಷಕಾರರ ಆತಂಕ ಮತ್ತು ಊಹೆಗಳಿಗೆ ಅನುಗುಣವಾಗಿ ಯಾವುದೇ ಆದೇಶ ಮಾಡಲಾಗದು. ಈ ಹಂತದಲ್ಲಿ ಮಗುವಿನ ಹಿತಾಸಕ್ತಿ ಅತಿ ಮುಖ್ಯವಾಗಿದ್ದು, ಅರ್ಜಿ ಪುರಸ್ಕರಿಸಲು ಯಾವುದೇ ಸಕಾರಣ ಕಾಣುತ್ತಿಲ್ಲ” ಎಂದು ಪೀಠ ಹೇಳಿದೆ.
ಗಾರ್ಡಿಯನ್ಸ್ ಮತ್ತು ವಾರ್ಡ್ಸ್ ಕಾಯಿದೆ ಸೆಕ್ಷನ್ 25ರ ಅಡಿ ಪುತ್ರನನ್ನು ತನ್ನ ಕಸ್ಟಡಿಗೆ ನೀಡಬೇಕು ಎಂದು ಪತಿಯು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ ಪ್ರಕರಣ ಇದಾಗಿದೆ.
ಪತ್ನಿಯು ಹರಿಯಾಣದ ಪಂಚಕುಲದಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿ ಪುತ್ರನೊಂದಿಗೆ ನೆಲೆಸಿದ್ದಾರೆ. ಹರಿಯಾಣದಿಂದ ಶೀಘ್ರ ವರ್ಗಾವಣೆ ಸಾಧ್ಯತೆ ಇರುವುದರಿಂದ ಅವರು ಪ್ರಕರಣದ ವರ್ಗಾವಣೆ ಕೋರಿದ್ದರು. ಪತಿ-ಪತ್ನಿ ನಡುವಿನ ವೈವಾಹಿಕ ಪ್ರಕರಣವು ದೆಹಲಿಯಲ್ಲಿ ನಡೆಯುತ್ತಿದ್ದು, ಮಗುವಿನ ಕಸ್ಟಡಿ ಪ್ರಕರಣವನ್ನೂ ಅಲ್ಲೇ ಮುಂದುವರಿಸಲು ಆಕೆ ಕೋರಿದ್ದರು.
ಇದಕ್ಕೆ ಆಕ್ಷೇಪಿಸಿದ್ದ ಪತಿಯು, ಮಗು ಸದ್ಯ ನೆಲೆಸಿರುವ ಸ್ಥಳದಿಂದ ದೆಹಲಿಯು 250 ಕಿ ಮೀ ದೂರದಲ್ಲಿದೆ ಎಂದು ವಾದಿಸಿದ್ದರು. ಅಂತಿಮವಾಗಿ ಚಂಡಿಗಢದಿಂದ ಪ್ರಕರಣವನ್ನು ವರ್ಗಾಯಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಅರ್ಜಿದಾರ ಪತ್ನಿಯ ಕೆಲಸದ ಸ್ಥಳವು ಸದ್ಯ ಪಂಚಕುಲವಾಗಿದೆ. ಅಲ್ಲದೆ ಚಂಡಿಗಢವು ತಾಯಿ ಹಾಗೂ ಮಗು ನೆಲೆಸಿರುವ ಸ್ಥಳ ಕೂಡಾ ಆಗಿದೆ ಎಂದು ಆದೇಶದಲ್ಲಿ ಹೇಳಿತು.