ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕುಟುಂಬದ ವಿರುದ್ಧ ಮೈಸೂರಿನ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿರುವ ಬೆನ್ನಿಗೇ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ ವಹಿಸಬೇಕು ಎಂದು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.
ವಿಚಾರಣಾಧೀನ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿರುವ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನಿರ್ದೇಶನದಂತೆ ಪ್ರಕರಣ ದಾಖಲಾಗಿದೆ. ರಾಜ್ಯಪಾಲರು ತನಿಖೆಗೆ ಅನುಮತಿಸಿರುವ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾ ಮಾಡುವ ಸಂದರ್ಭದಲ್ಲಿ ಹೈಕೋರ್ಟ್‌ನ ಏಕಸದಸ್ಯ ಪೀಠವು ಹಲವು ವಿಚಾರಗಳನ್ನು ಅನಾವರಣಗೊಳಿಸಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನಾಮನಿರ್ದೇಶಿಸುವ ಹಾಲಿ ನ್ಯಾಯಮೂರ್ತಿಯೊಬ್ಬರನ್ನು ಪ್ರಕರಣದ ಮೇಲ್ವಿಚಾರಣೆ ವಹಿಸಲು ಆದೇಶಿಸಬೇಕು. ಇಲ್ಲವೇ, ಹೈಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿ ಮೇಲ್ವಿಚಾರಣೆಯಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಅರ್ಜಿಯಲ್ಲಿ ಕೇಂದ್ರ ಗೃಹ ಇಲಾಖೆ, ದೆಹಲಿಯ ಸಿಬಿಐ ನಿರ್ದೇಶಕರು, ಸಿಬಿಐ ಬೆಂಗಳೂರಿನ ಪೊಲೀಸ್ ವರಿಷ್ಠಾಧಿಕಾರಿ, ಮೈಸೂರು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಮೈಸೂರಿನ ವಿಜಯನಗರ ಪೊಲೀಸ್ ಠಾಣಾಧಿಕಾರಿ ಪ್ರಕರಣದಲ್ಲಿ ಆರೋಪಿಗಳಾಗಿರುವ ಸಿದ್ದರಾಮಯ್ಯ, ಬಿ ಎಂ ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ ಮತ್ತು ಜೆ ದೇವರಾಜು ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಒಂಬತ್ತನೇ ಪ್ರತಿವಾದಿಯಾಗಿರುವ ಸಿದ್ದರಾಮಯ್ಯ ಅವರಿಗೆ ಕ್ರಿಮಿನಲ್ ಹಿನ್ನೆಲೆಯಿದ್ದು, ತಮ್ಮ ಸ್ಥಾನದ ದುರ್ಬಳಕೆ ಮಾಡಿಕೊಂಡು ಬಿಎಂಆರ್‌ಸಿಐನಲ್ಲಿ ಡಯಾಗ್ನಾಸ್ಟಿಕ್ ಕೇಂದ್ರ ತೆರೆಯಲು ಪುತ್ರ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರಗೆ ಗುತ್ತಿಗೆ ಕೊಡಿಸಿದ್ದಾರೆ. ಅರ್ಕಾವತಿ ಲೇಔಟ್ ಅಭಿವೃದ್ಧಿಪಡಿಸಲು ಸ್ವಾಧೀನಪಡಿಸಿಕೊಂಡಿದ್ದ 541 ಎಕರೆ ಭೂಮಿಯನ್ನು ಡಿನೋಟಿಫೈ ಮಾಡಿ ಲಂಚ ಪಡೆದಿದ್ದಾರೆ. ಷರತ್ತು ಮತ್ತು ನಿಯಮಗಳನ್ನು ಉಲ್ಲಂಘಿಸಿ ಕಂಪನಿಯೊಂದಕ್ಕೆ ಗಣಿ ಪರವಾನಗಿ ಕೊಡಿಸಿದ್ದಾರೆ ಎಂಬ ಆರೋಪವಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಯಾವುದೇ ತನಿಖಾ ಸಂಸ್ಥೆಯು ಈ ಕುರಿತು ತನಿಖೆ ನಡೆಸಿಲ್ಲ. ಬೇರೆ ಬೇರೆ ತನಿಖಾ ಸಂಸ್ಥೆಗಳ ಮುಂದಿದ್ದ ಆ ಪ್ರಕರಣಗಳಿಗೆ ಮುಕ್ತಾಯ ಹಾಡಲಾಗಿದೆ. ಇದರರ್ಥ ಪ್ರಭಾವಿಯಾಗಿರುವ ಸಿದ್ದರಾಮಯ್ಯ ಅವರಿಗೆ ಅಧಿಕಾರಿಗಳ ಮೇಲೆ ಭಾರಿ ಹಿಡಿತವಿದ್ದು, ಈ ಮೂಲಕ ಯಾವುದೇ ನ್ಯಾಯಯುತ ತನಿಖೆಯ ಹಿಡಿತಕ್ಕೆ ಸಿಲುಕುತ್ತಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಅಲ್ಲದೆ, ಅರ್ಜಿದಾರರಿಗೆ ಸಂಪೂರ್ಣವಾಗಿ ತನಿಖಾ ಸಂಸ್ಥೆಯ ವಿಶ್ವಾಸಾರ್ಹತೆಯ ಬಗ್ಗೆ ನಂಬಿಕೆಯಿದೆ. ಆದರೆ, ಒಂಬತ್ತನೇ ಪ್ರತಿವಾದಿಯ (ಮುಖ್ಯಮಂತ್ರಿ) ಪ್ರಭಾವದಿಂದಾಗಿ ಇಡೀ ತನಿಖೆಯು ಕಳಂಕಯುತಗೊಂಡು, ಪಕ್ಷಪಾತಿಯಾಗುವ ಹಾಗೂ ಜನತೆಯ ನಂಬಿಕೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದೂ ಅರ್ಜಿಯಲ್ಲಿ ವಿವರಿಸಲಾಗಿದೆ.