
ಕರ್ನಾಟಕ ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳನ್ನು ಅಕಾಲಿಕವಾಗಿ ವರ್ಗಾವಣೆ ಮಾಡಲು ಶಿಫಾರಸ್ಸು ಮಾಡಿರುವುದು ನ್ಯಾಯಾಂಗ ಸ್ವಾತಂತ್ರ್ಯ, ಪಾರದರ್ಶಕತೆ ಮತ್ತು ಸಾಂಸ್ಥಿಕ ಸ್ಥಿರತೆ ಬಗ್ಗೆ ಗಂಭೀರ ಕಳಕಳಿ ಹುಟ್ಟು ಹಾಕಿದೆ. ಸ್ಪಷ್ಟವಾದ ಸಾರ್ವಜನಿಕ ವಿವರಣೆ ನೀಡದೆ ಇಂಥ ನಿರ್ಣಯಗಳನ್ನು ಮಾಡಿದಾಗ ನ್ಯಾಯಾಂಗ ಮತ್ತು ಕೊಲಿಜಿಯಂ ವ್ಯವಸ್ಥೆಯ ಮೇಲೆ ಜನರ ನಂಬಿಕೆ ಕಡಿಮೆಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ಮಂಗಳವಾರ ಬರೆದಿರುವ ಪತ್ರದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ಅಧ್ಯಕ್ಷ ಎಸ್ ಎಸ್ ಮಿಟ್ಟಲಕೋಡ ಆತಂಕ ವ್ಯಕ್ತಪಡಿಸಿದ್ದಾರೆ.
ನ್ಯಾಯಮೂರ್ತಿಗಳಿಗೆ ಸ್ಥಳೀಯ ಕಾನೂನು ವಿಚಾರಗಳು, ಸದ್ಯ ವಿಚಾರಣೆ ನಡೆಯುತ್ತಿರುವ ಪ್ರಕರಣಗಳು ಮತ್ತು ಹೈಕೋರ್ಟ್‌ನ ಆಡಳಿತದ ಬಗ್ಗೆ ಆಳವಾದ ಅರಿವಿರುತ್ತದೆ. ಏಕಾಏಕಿ ಅವರನ್ನು ವರ್ಗಾವಣೆ ಮಾಡುವುದರಿಂದ ಈ ನಿರಂತರತೆಗೆ ಹೊಡೆತ ಬೀಳುತ್ತದೆ. ಇದು ಹಾಲಿ ಬೇರೆ ನ್ಯಾಯಮೂರ್ತಿಗಳಿಗೆ ಸಮಸ್ಯಾತ್ಮಕ ಸೂಚನೆ ರವಾನಿಸಲಿದ್ದು, ಸಕಾರಣ ಅಥವಾ ನೋಟಿಸ್ ನೀಡದೇ ಅವರ ಪೋಸ್ಟಿಂಗ್‌ನಲ್ಲಿ ಬದಲಾವಣೆಯಾಗಲಿದೆ. ಆ ಮೂಲಕ ನಿಷ್ಪಕ್ಷಪಾತ ನ್ಯಾಯಾಂಗ ನಡತೆಗೆ ಅಡ್ಡಿ ಉಂಟು ಮಾಡುತ್ತದೆ ಎಂದು ಕೆಎಸ್‌ಬಿಸಿ ಹೇಳಿದೆ.
ಕರ್ನಾಟಕ ಹೈಕೋರ್ಟ್ ದೇಶದಲ್ಲೇ ಅತ್ಯಂತ ಬ್ಯುಸಿಯಾಗಿರುವ ಹೈಕೋರ್ಟ್ ಆಗಿದ್ದು, ಏಕಕಾಲಕ್ಕೆ ಹಲವು ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡುವುದರಿಂದ ನ್ಯಾಯಾಲಯದ ದಕ್ಷತೆ ಮತ್ತು ನ್ಯಾಯದಾನ ವಿಳಂಬವಾಗುವ ಸಾಧ್ಯತೆ ಇದೆ. ವರ್ಗಾವಣೆ ಅಗತ್ಯವಿದ್ದರೆ ಅದನ್ನು ಸೂಕ್ತ ಕಾರಣಗಳನ್ನು ನೀಡುವ ಮೂಲಕ ಕ್ರಮೇಣವಾಗಿ ಪಾರದರ್ಶಕ ತತ್ವಗಳ ಪಾಲಿಸುವ ಮೂಲಕ ಮಾಡಬೇಕೆ ವಿನಾ ಸ್ವೇಚ್ಛೆಯಾಗಿ ನಿರ್ಧರಿಸಬಾರದು. ನ್ಯಾಯಾಂಗ ಸ್ವಾತಂತ್ರ್ಯದ ಗಂಭೀರ ಆತಂಕ ಇರುವ ಈ ಸಂದರ್ಭದಲ್ಲಿ ತಕ್ಷಣ ಈ ರೀತಿ ವರ್ಗಾವಣೆ ಮಾಡುವುದು ಬಾಧಿತವಾಗಿರುವ ವ್ಯವಸ್ಥೆಯನ್ನು ಮತ್ತಷ್ಟು ತ್ರಾಸಗೊಳಿಸಿದಂತಾಗುತ್ತದೆ. ಇದು ನ್ಯಾಯಾಂಗ ನೇಮಕಾತಿಯ ಮೇಲಿನ ಪಾವಿತ್ರ್ಯದ ಮೇಲೆ ಸಾರ್ವಜನಿಕ ನಂಬಿಕೆಗೆ ಹಾನಿ ಮಾಡಲಿದೆ. ಸಕಾರಣವಿಲ್ಲದೇ ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆಯು ಹಲವು ರೀತಿಯಲ್ಲಿ ನ್ಯಾಯಾಂಗದ ಮನೋಬಲಕ್ಕೆ ಹಾನಿ ಮಾಡುತ್ತದೆ ಎಂದು ಕೆಎಸ್‌ಬಿಸಿ ಹೇಳಿದೆ.
ನ್ಯಾಯಾಧೀಶರಲ್ಲಿ ಅಭದ್ರತೆ: ತಾವು ತೆಗೆದುಕೊಳ್ಳುವ ಮುಕ್ತ ಅಥವಾ ಜನಪ್ರಿಯವಲ್ಲದ ನಿರ್ಧಾರಗಳು ವರ್ಗಾವಣೆ ನಾಂದಿಗೆ ದಾರಿಯಾಗಬಹುದು ಎಂಬ ಅಳುಕು ನ್ಯಾಯಮೂರ್ತಿಗಳಲ್ಲಿ ಉಂಟಾಗಬಹುದು. ಇದು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಹಾನಿ ಮಾಡುತ್ತದೆ ಎಂದು ಕೆಎಸ್‌ಬಿಸಿ ಪ್ರಕಟಣೆಯಲ್ಲಿ ವಿವರಿಸಿದೆ.
ವೃತ್ತಿ ಅಗೌರವ (ಪ್ರೊಫೆಶನಲ್ ಡಿಷರಪ್ಷನ್): ನಿರ್ದಿಷ್ಟ ಹೈಕೋರ್ಟ್‌ನಲ್ಲಿ ಕಾನೂನು, ಸಾಂಸ್ಕೃತಿಕ ಮತ್ತು ಆಡಳಿತಾತ್ಮಕ ಪರಿಸರಕ್ಕೆ ಹೊಂದಿಕೊಳ್ಳಲು ನ್ಯಾಯಮೂರ್ತಿಗಳು ಹಲವು ವರ್ಷಗಳನ್ನು ತೆಗೆದುಕೊಳ್ಳುತ್ತಾರೆ. ಅಕಾಲಿಕವಾಗಿ ವರ್ಗಾವಣೆ ಮಾಡುವುದರಿಂದ ನಿರಂತರತೆಗೆ ಹೊಡೆತ, ವೃತ್ತಿ ಅತೃಪ್ತಿಗೆ ಕಾರಣವಾಗಬಹುದು. ಸ್ಥಳೀಯ ಆಚಾರ-ವಿಚಾರ, ಸಾಮಾಜಿಕ-ಆರ್ಥಿಕ ವಿಚಾರಗಳ ಬಗ್ಗೆ ಅರಿವಿರುವ ಮತ್ತು ಸ್ಥಳೀಯ ಭಾಷೆಯನ್ನು ಚೆನ್ನಾಗಿ ಬಲ್ಲ ಅನುಭವಿ ನ್ಯಾಯಮೂರ್ತಿಗಳನ್ನು ವರ್ಗಾಯಿಸುವುದರಿಂದ ನ್ಯಾಯದಾನ ವ್ಯವಸ್ಥೆ ಮತ್ತು ಹೈಕೋರ್ಟ್‌ನ ಕಾರ್ಯನಿರ್ವಹಣೆಗೆ ಹಾನಿ ಮಾಡುವ ಸಾಧ್ಯತೆ ಇರುತ್ತದೆ.
ಸಹೋದ್ಯೋಗಿ ನ್ಯಾಯಮೂರ್ತಿಗಳಲ್ಲಿ ಪ್ರೇರಣೆ ಕಡಿಮೆಯಾಗಬಹುದು: ಸಕಾರಣವಿಲ್ಲದೇ ಹಿರಿಯ ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಿದರೆ ಸಹೋದ್ಯೋಗಿ ನ್ಯಾಯಮೂರ್ತಿಗಳಿಗೆ ಮೆರಿಟ್, ಅನುಭವವು ಅವರ ಹುದ್ದೆಯನ್ನು ರಕ್ಷಿಸುವುದಿಲ್ಲ ಎಂಬ ಸಂದೇಶ ರವಾನೆಯಾಗಬಹುದು. ಇದು ಅನಿಶ್ಚಿತತೆ ಸೃಷ್ಟಿಸಲಿದ್ದು, ನ್ಯಾಯಾಂಗ ಶ್ರೇಣಿಯಲ್ಲಿ ಭ್ರಮನಿರಸನ ಉಂಟು ಮಾಡಬಹುದು.
ಸಾಂಸ್ಥಿಕ ದೃಢತೆಗೆ ಹಾನಿ: ವರ್ಗಾವಣೆಗಳು ಸ್ವೇಚ್ಛೆ ಅಥವಾ ಬಾಹ್ಯ ಶಕ್ತಿಗಳ ಒತ್ತಡದಿಂದಾಗಿದೆ ಎಂದೆನಿಸಿದಾಗ ಅದು ಸಂಸ್ಥೆಯ ಘನತೆಗೆ ಹಾನಿ ಮಾಡಲಿದ್ದು, ತಾವು ಆಡಳಿತಕ್ಕೆ ಒಳಪಟ್ಟ ವ್ಯವಸ್ಥೆಯ ಮೇಲೆ ನ್ಯಾಯಮೂರ್ತಿಗಳಿಗೆ ನಂಬಿಕೆ ಕಡಿಮೆಯಾಗುವಂತೆ ಮಾಡುತ್ತದೆ.
ಯುವ ನ್ಯಾಯಮೂರ್ತಿಗಳು ಮತ್ತು ಆಕಾಂಕ್ಷಿಗಳ ಮೇಲೆ ಪರಿಣಾಮ: ಹಿರಿಯ ನ್ಯಾಯಮೂರ್ತಿಗಳನ್ನು ಈ ರೀತಿ ನಡೆಸಿಕೊಂಡಾಗ ಬಲಿಷ್ಠ ಮತ್ತು ಸ್ವತಂತ್ರ ನಿಲುವು ಕೈಗೊಳ್ಳಲು ಯುವ ನ್ಯಾಯಮೂರ್ತಿಗಳು ಹಿಂದೆ ಸರಿಯುವ ಸಾಧ್ಯತೆ ಇದ್ದು, ಆಕಾಂಕ್ಷಿಗಳು ಅಧೀರರಾಗಬಹುದು.
ಹೀಗಾಗಿ, ನ್ಯಾಯಯುತವಲ್ಲದ ವರ್ಗಾವಣೆಗಳು ನ್ಯಾಯಾಂಗದ ಸ್ಥೈರ್ಯ ಕುಗ್ಗಿಸಲಿದ್ದು, ಗುಣಾತ್ಮಕತೆ, ದಿಟ್ಟ ನಿರ್ಧಾರ, ಅಸ್ಥಿರತೆ, ನ್ಯಾಯ ವಿಳಂಬಕ್ಕೆ ಕಾರಣವಾಗಲಿದೆ. ಇದು ಕಾನೂನು ವ್ಯವಸ್ಥೆಯನ್ನು ಆಧರಿಸಿರುವ ನಂಬಿಕೆ ಮತ್ತು ದಕ್ಷತೆಗೆ ಚ್ಯುತಿ ಉಂಟು ಮಾಡಲಿದೆ. ಆದ್ದರಿಂದ ನಾಲ್ವರು ನ್ಯಾಯಮೂರ್ತಿಗಳ ವರ್ಗಾವಣೆ ಶಿಫಾರಸ್ಸನ್ನು ಕೊಲಿಜಿಯಂ ಹಿಂಪಡೆಯಬೇಕು ಎಂದು ಕೆಎಸ್‌ಬಿಸಿ ಆಗ್ರಹಿಸಿದೆ.
ಈಚೆಗೆ ಹೈಕೋರ್ಟ್‌ನ ಧಾರವಾಡ ಪೀಠದ ವಕೀಲರ ಸಂಘ ಮತ್ತು ಬೆಂಗಳೂರು ವಕೀಲರ ಸಂಘಗಳು ನಾಲ್ವರು ನ್ಯಾಯಮೂರ್ತಿಗಳ ವರ್ಗಾವಣೆಗೆ ವಿರೋಧಿಸಿ ಸಿಜೆಐಗೆ ಪತ್ರ ಬರೆದಿದ್ದವು. ಇಂದು ಹೈಕೋರ್ಟ್ ಪೀಠಗಳಲ್ಲಿ ಕಲಾಪ ಬಹಿಷ್ಕರಿಸುವ ಮೂಲಕ ವರ್ಗಾವಣೆಗೆ ವಿರೋಧ ದಾಖಲಿಸಲಾಗಿದೆ.