ನಿವೃತ್ತಿ ದಿನ ಮದ್ರಾಸ್ ಹೈಕೋರ್ಟ್ ಹಂಗಾಮಿ ಸಿಜೆ ಟಿ ರಾಜಾ ನೆನಪಿನ ಯಾನ: ಹಿರಿಯ ವಕೀಲ ಸಾಳ್ವೆಯವರ ಬಗ್ಗೆ ಹೇಳಿದ್ದೇನು?
ತಾವು ಸಂತೋಷ ಮತ್ತು ಸಂತೃಪ್ತಿಯಿಂದ ನಿವೃತ್ತಿ ಹೊಂದುತ್ತಿರುವುದಾಗಿ ಮದ್ರಾಸ್ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಟಿ ರಾಜಾ ಅವರು ತಮ್ಮ ನಿವೃತ್ತಿಯ ದಿನವಾದ ಬುಧವಾರ ತಿಳಿಸಿದರು.
ನ್ಯಾ. ರಾಜಾ ಅವರನ್ನು ರಾಜಸ್ಥಾನ ಹೈಕೋರ್ಟ್‌ಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಪದೇ ಪದೇ ಮಾಡಿದ್ದ ಶಿಫಾರಸು ಜಾರಿಗೆ ಬಾರದೆ ಕೇಂದ್ರ ಸರ್ಕಾರದ ಬಳಿಯೇ ಉಳಿದಿತ್ತು.
ಬುಧವಾರ ಮದ್ರಾಸ್ ಹೈಕೋರ್ಟ್ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದ ವೇಳೆ ಮಾಡಿದ ಭಾಷಣದಲ್ಲಿ ನ್ಯಾಯಮೂರ್ತಿ ರಾಜಾ ಅವರು ನ್ಯಾಯಾಧೀಶರ ವರ್ಗಾವಣೆ ಆದೇಶಗಳನ್ನು ಪ್ರಶ್ನಿಸುವುದರಲ್ಲಿ ಯಾವುದೇ ಅರ್ಥವಿಲ್ಲ, ಏಕೆಂದರೆ ಇದು ಕೆಲಸದ ಷರತ್ತುಗಳಲ್ಲಿ ಒಂದಾಗಿದೆ ಎಂದರು.
ತಾವು ವಕೀಲರಾಗಿದ್ದ ಸಂದರ್ಭದಲ್ಲಿ ಪ್ರಕರಣವೊಂದರ ಬಗ್ಗೆ ಮಾಹಿತಿ ನೀಡಲು ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ ಅವರ ಬಳಿಗೆ ತೆರಳಿದಾಗ ನಡೆದ ಘಟನೆಯೊಂದನ್ನು ಅವರು ವಿವರಿಸಿದರು. “ನಾನು ವಕೀಲನಾಗಿದ್ದಾಗ (ಈಗಿನ ತಮಿಳುನಾಡಿನ ಅಡ್ವೊಕೇಟ್ ಜನರಲ್) ಆರ್ ಶುಣ್ಮುಗಸುಂದರಂ ಅವರೊಂದಿಗೆ ಪ್ರಕರಣವೊಂದರ ಬಗ್ಗೆ ಮಾಹಿತಿ ನೀಡಲು ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ ಅವರ ಬಳಿಗೆ ಹೋಗಿದ್ದೆವು; ಅವರು ನಮಗೆ ಕಾಫಿ ಇರಲಿ ನೀರು ಸಹ ಕೊಡಲಿಲ್ಲ. ಅವರು ವಾರ್ಷಿಕ ₹ 100 ಕೋಟಿಯಷ್ಟು ತೆರಿಗೆ ಪಾವತಿಸುವ ವಕೀಲರು. ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಪಾವತಿಸಿದ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ಅವರು ತೆರಿಗೆ ರೂಪದಲ್ಲಿ ಪಾವತಿಸುತ್ತಾರೆ… ಸಾಳ್ವೆ ಅವರು ತಮ್ಮ ಕಿರಿಯ ವಕೀಲರು ಅಥವಾ ನ್ಯಾಯಾಧೀಶರೊದಿಗೆ ವರ್ತಿಸುವ ರೀತಿಯನ್ನು ಕಂಡ ಬಳಿಕ ನಾನು ಕೆಲ ವಿಚಾರಗಳನ್ನು ಅರಿತೆ” ಎಂದರು.
ಕಿರಿಯ ವಕೀಲರು ಸದಾ ಕಲಿಕೆಯಲ್ಲಿ ತೊಡಗಿರಬೇಕು, ಅವರು ಇಂಗ್ಲಿಷ್ ಮಾತನಾಡುವ ಕೌಶಲ್ಯವನ್ನು ಸುಧಾರಿಸಿಕೊಳ್ಳಬೇಕು, ನಿಗರ್ವಿಗಳಾಗಿರಬೇಕು ಹಾಗೂ ಪ್ರಕರಣದ ಕಾನೂನುಗಳನ್ನು ಅಧ್ಯಯನ ಮಾಡಲು ನೆನಪಿಟ್ಟುಕೊಳ್ಳಲು ಸಿದ್ಧರಿರಬೇಕು ಎಂದು ಕಿವಿಮಾತು ಹೇಳಿದರು.
ತಾವು ವಕೀಲರಾಗಿದ್ದ ಮತ್ತು ನ್ಯಾಯಾಧೀಶರಾಗಿದ್ದ ದಿನಗಳಲ್ಲಿ ಹಿರಿಯ ನ್ಯಾಯವಾದಿಗಳು ಮತ್ತು ಸಹೋದ್ಯೋಗಿಗಳಿಂದ ಸಾಕಷ್ಟು ಕಲಿತಿರುವುದಾಗಿ ನೆನೆದರು. ಅವರಲ್ಲಿ ಕೆಲವರು ವಿನಮ್ರತೆ ಮತ್ತು ಕರುಣೆಯ ಸಾಕಾರ ರೂಪಗಳಂತಿದ್ದರು. ಉಳಿದವರು ಆ ಮಟ್ಟಿಗೆ ಇರಲಿಲ್ಲ ಎಂದು ಹೇಳಿದರು.
ನ್ಯಾಯಮೂರ್ತಿ ರಾಜಾ ಅವರು 13 ವರ್ಷಗಳ ಕಾಲ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಮತ್ತು ಎಂಟು ತಿಂಗಳ ಕಾಲ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ.


