[ವರ್ಗಾವಣೆ ಬೆದರಿಕೆ] ನ್ಯಾ. ಸಂದೇಶ್‌ರಿಗೆ ಭದ್ರತೆ ನೀಡಲು, ತನಿಖೆಗೆ ಎಸ್‌ಐಟಿ ರಚಿಸಲು ಕೋರಿ ಪಿಐಎಲ್‌ ಸಲ್ಲಿಕೆ

ತುಮಕೂರಿನ ವಕೀಲ ರಮೇಶ್ ಎಲ್ ನಾಯಕ್ ಅವರು ಅರ್ಜಿ ಸಲ್ಲಿಸಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರನ್ನು ಪ್ರತಿವಾದಿಯನ್ನಾಗಿಸಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಪಟ್ಟಿಯಾಗಬೇಕಿದೆ.
Karnataka HC and Justice H P Sandesh
Karnataka HC and Justice H P Sandesh
Published on

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮತ್ತು ಅದರ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಸೀಮಂತ್‌ ಕುಮಾರ್‌ ಸಿಂಗ್‌ ಅವರ ವಿರುದ್ಧ ಕಟುವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ನ್ಯಾಯಮೂರ್ತಿಗಳಿಗೆ ವರ್ಗಾವಣೆ ಬೆದರಿಕೆಯೊಡ್ಡಿದ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮತ್ತು ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರಿಗೆ ಸೂಕ್ತ ಭದ್ರತೆ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ತುಮಕೂರಿನ ವಕೀಲ ರಮೇಶ್ ಎಲ್ ನಾಯಕ್ ಅವರು ಅರ್ಜಿ ಸಲ್ಲಿಸಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರನ್ನು ಪ್ರತಿವಾದಿಯನ್ನಾಗಿಸಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಪಟ್ಟಿಯಾಗಬೇಕಿದೆ.

ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರಿಗೆ ವೈ, ವೈ ಪ್ಲಸ್‌, ಜಡ್, ಜಡ್ ಪ್ಲಸ್‌ ಅಥವಾ ಇನ್ಯಾವುದೇ ರೀತಿಯ ಸೂಕ್ತ ಭದ್ರತೆ ಒದಗಿಸಲು ಹಾಗೂ ನ್ಯಾಯಮೂರ್ತಿಗಳಿಗೆ ವರ್ಗಾವಣೆ ಬೆದರಿಕೆಯೊಡ್ಡಿದ ಆರೋಪದ ತನಿಖೆಗಾಗಿ ಎಸ್‌ಐಟಿ ರಚಿಸಲು ಸರ್ಕಾರಕ್ಕೆ ನಿರ್ದೇಶಿಸಿಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಈ ರೀತಿಯ ಬೆದರಿಕೆಗಳು ನ್ಯಾಯಮೂರ್ತಿಗಳು ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಲು ಅಡ್ಡಿಯಾಗುತ್ತವೆ. ಇದರಿಂದ, ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ನ್ಯಾಯಾಂಗದ ಸ್ವಾತಂತ್ರ್ಯ ರಕ್ಷಿಸುವ ಹಾಗೂ ನ್ಯಾಯಾಂಗದ ಮೇಲಿನ ಜನರ ವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Also Read
ಸಹೋದ್ಯೋಗಿ ನ್ಯಾಯಮೂರ್ತಿ ಬಳಿ ದೆಹಲಿ ವ್ಯಕ್ತಿಯಿಂದ ನನ್ನ ಮಾಹಿತಿ ಸಂಗ್ರಹ: ಆದೇಶದಲ್ಲಿ ದಾಖಲಿಸಿದ ನ್ಯಾ. ಸಂದೇಶ್‌

ಪ್ರಕರಣದ ಹಿನ್ನೆಲೆ: ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಜಾಮೀನು ಕೋರಿ ಉಪ ತಹಸೀಲ್ದಾರ್ ಪಿ ಎಸ್ ಮಹೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರು ಪ್ರಕರಣದಲ್ಲಿ ಸಮರ್ಪಕ ತನಿಖೆ ನಡೆದಿಲ್ಲ ಎಂದು ಎಸಿಬಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಇದೇ ಕಾರಣಕ್ಕೆ ತಮಗೆ ವರ್ಗಾವಣೆಯ ಬೆದರಿಕೆ ಒಡ್ಡಲಾಗಿದೆ ಎಂಬ ಸ್ಫೋಟಕ ವಿಚಾರವನ್ನು ನ್ಯಾಯಮೂರ್ತಿಗಳು ಮುಕ್ತ ನ್ಯಾಯಾಲಯದಲ್ಲಿ ಬಹಿರಂಗಪಡಿಸಿದ್ದರಲ್ಲದೆ, ಬೆದರಿಕೆಯ ವಿಚಾರವನ್ನು ಜು.11ರಂದು ಲಿಖಿತ ಆದೇಶದಲ್ಲಿ ದಾಖಲಿಸಿದ್ದರು.

Kannada Bar & Bench
kannada.barandbench.com