ನ್ಯಾ. ಸಂದೇಶ್‌ಗೆ ವರ್ಗಾವಣೆ ಬೆದರಿಕೆ: ತನಿಖೆಗೆ ಆಂತರಿಕ ಸಮಿತಿ ರಚಿಸಲು ಸಿಜೆಐಗೆ ಪತ್ರ ಬರೆಯಲಾಗುವುದು ಎಂದ ಎಎಬಿ

ನ್ಯಾ. ಸಂದೇಶ್‌ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗದ ಕಣ್ಣು ತೆರೆಸಿದ್ದು, ವ್ಯವಸ್ಥೆಯನ್ನು ಸರಿಪಡಿಸುವ ನ್ಯಾಯಮೂರ್ತಿಗಳ ಪ್ರಯತ್ನಕ್ಕೆ ಬೆಂಗಳೂರು ವಕೀಲರ ಸಂಘವು ಬೆಂಬಲವಾಗಿ ನಿಲ್ಲಲಿದೆ ಎಂದು ಎಎಬಿ ಹೇಳಿದೆ.
AAB
AAB
Published on

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರನ್ನು ವರ್ಗಾವಣೆ ಮಾಡಿಸುವ ಬೆದರಿಕೆಗೆ ಸಂಬಂಧಿಸಿದಂತೆ ಆಂತರಿಕ ಸಮಿತಿ ನೇಮಕ ಮಾಡಿ ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರಿಗೆ ಪತ್ರ ಬರೆಯಲಾಗುವುದು ಎಂದು ಬೆಂಗಳೂರು ವಕೀಲರ ಸಂಘ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.

ಉಪ ತಹಶೀಲ್ದಾರ್‌ ಅವರ ಜಾಮೀನು ಮನವಿಯ ವಿಚಾರಣೆಯ ವೇಳೆ ನ್ಯಾ. ಸಂದೇಶ್‌ ಅವರ ಹೇಳಿಕೆಯು ವಕೀಲರು ಮತ್ತು ಸಾರ್ವಜನಿಕರ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸಿದೆ. ಭವಿಷ್ಯದಲ್ಲಿ ಇಂಥ ಘಟನೆಗಳನ್ನು ತಪ್ಪಿಸಲು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದಕ್ಕೆ ಸಂಬಂಧಿಸಿದ ನೀತಿ ಸಂಹಿತೆ ರೂಪಿಸಲು ಸಿಜೆಐ ಅವರನ್ನು ಮನವಿಯ ಮೂಲಕ ಕೋರಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ನ್ಯಾಯಮೂರ್ತಿ ಸಂದೇಶ್‌ ಅವರು ತಮ್ಮ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗದ ಕಣ್ಣು ತೆರೆಸಿದ್ದು, ವ್ಯವಸ್ಥೆಯನ್ನು ಸರಿಪಡಿಸುವ ನ್ಯಾಯಮೂರ್ತಿಗಳ ಪ್ರಯತ್ನಕ್ಕೆ ಬೆಂಗಳೂರು ವಕೀಲರ ಸಂಘವು ಬೆಂಬಲವಾಗಿ ನಿಲ್ಲಲಿದೆ ಎಂದು ಹೇಳಲಾಗಿದೆ.

ಬಾಹ್ಯ ಮತ್ತು ನ್ಯಾಯಾಂಗದಲ್ಲಿ ಆಂತರಿಕ ಶಕ್ತಿಗಳು ನ್ಯಾಯಾಲಯದ ತೀರ್ಪುಗಳನ್ನು ಪ್ರಭಾವಿಸುತ್ತಿರುವುದಕ್ಕೆ ವಕೀಲರ ಸಂಘವು ಗಂಭೀರ ಕಳಕಳಿ ಮತ್ತು ಬೇಸರ ವ್ಯಕ್ತಪಡಿಸುತ್ತಿದ್ದು, ನ್ಯಾಯಮೂರ್ತಿಯೊಬ್ಬರ ನಿರ್ಧಾರವು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಅಚಲಗೊಳಿಸಬೇಕೆ ವಿನಾ ಅನುಮಾನ ಮತ್ತು ಪ್ರಶ್ನೆಗಳನ್ನು ಹುಟ್ಟು ಹಾಕಬಾರದು ಎಂದು ಎಎಬಿ ಹೇಳಿದೆ.

ಸಮಾಜವನ್ನು ಬಾದಿಸುತ್ತಿರುವ ಮತ್ತು ಜನ ಸಾಮಾನ್ಯರಿಗೆ ಎರವಾಗಿರುವ ಭ್ರಷ್ಟಾಚಾರದ ಬಗ್ಗೆ ಯಾವುದೇ ವಿನಾಯಿತಿ ನೀಡದೇ ಎಲ್ಲಾ ಸಂಸ್ಥೆಗಳಲ್ಲೂ ಭ್ರಷ್ಟಾಚಾರ ಹಾಸು ಹೊಕ್ಕಾಗಿದೆ ಎಂದು ನ್ಯಾ. ಸಂದೇಶ್‌ ಅವರು ನೀಡಿರುವ ಹೇಳಿಕೆಗೆ ವಕೀಲರ ಸಂಘವು ಮೆಚ್ಚುಗೆ ಸೂಚಿಸುತ್ತದೆ ಎಂದು ಹೇಳಿದ್ದಾರೆ.

ತಮ್ಮನ್ನು ವರ್ಗಾವಣೆ ಮಾಡುವ ಬೆದರಿಕೆ ಕುರಿತು ನ್ಯಾ. ಸಂದೇಶ್‌ ಅವರು ನೀಡಿರುವ ಹೇಳಿಕೆಯು ಅತ್ಯಂತ ಪ್ರಾಮುಖ್ಯತೆ ಹೊಂದಿದ್ದು, ವರ್ಗಾವಣೆಯ ಕುರಿತು ನ್ಯಾಯಮೂರ್ತಿಯೊಬ್ಬರು ಇಂಥದ್ದೇ ಮತ್ತೊಂದು ಪ್ರಕರಣ ಉಲ್ಲೇಖಿಸಿ ತಿಳಿಸಿದ್ದಾರೆ ಎಂದು ನ್ಯಾ. ಸಂದೇಶ್‌ ಅವರು ಹೇಳಿರುವುದು ಆಘಾತಕಾರಿ. ನ್ಯಾಯಮೂರ್ತಿಯೊಬ್ಬರಿಗೆ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ ಅವರ ಹೇಳಿಕೆಯು ಅವರ ತೀರ್ಪಿನ ಮೇಲೆ ಪ್ರಭಾವ ಉಂಟು ಮಾಡಬಹುದಾದರೆ ಅದು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡುತ್ತದೆ. ಈ ನಿಟ್ಟಿನಲ್ಲಿ ನ್ಯಾಯಮೂರ್ತಿಗಳು ಏನು ಹೇಳಬೇಕು ಮತ್ತು ಏನು ಹೇಳಬಾರದು ಎಂಬುದರ ಕುರಿತಾದ ತಮ್ಮ ನಡತೆಯ ಕುರಿತು ಗಂಭೀರ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇಂದು ಎಲ್ಲಾ ಸಂಸ್ಥೆಗಳು ಲಕ್ಷ್ಮಣ ರೇಖೆಯನ್ನು ಪಾಲಿಸಬೇಕು. ಇದಕ್ಕೆ ನ್ಯಾಯಾಂಗವೂ ಹೊರತಾಗಿಲ್ಲ. ತಮ್ಮ ಮುಂದೆ ಇರುವ ಅಥವಾ ಬಾಕಿ ಉಳಿದಿರುವ ಪ್ರಕರಣಗಳ ಕುರಿತು ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳು ಚರ್ಚಿಸಬಾರದು, ಆ ಮೂಲಕ ನಿರ್ಧಾರ ಕೈಗೊಳ್ಳುವುದರ ಮೇಲೆ ಪ್ರಭಾವ ಬೀರಬಾರದು ಎಂದು ಸಂವಿಧಾನ ನಿರೀಕ್ಷಿಸುತ್ತದೆ. ಇದೆಲ್ಲದರ ಮಧ್ಯೆ, ನ್ಯಾ. ಸಂದೇಶ್‌ ಅವರ ಹೇಳಿಕೆಯು ಸುದೀರ್ಘವಾಗಿ ಚರ್ಚೆಗೆ ಒಳಗಾಗಿರುವ ನ್ಯಾಯಾಂಗವನ್ನು ಪಾರದರ್ಶಕವಾಗಿಡುವುದು ಹೇಗೆ ಎಂಬ ವಿಷಯದ ಬಗ್ಗೆ ಅನುಮಾನಗಳನ್ನು ಮೂಡಿಸುತ್ತದೆ ಎಂದು ಉಲ್ಲೇಖಿಸಲಾಗಿದೆ.

Also Read
ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆ ಬೆದರಿಕೆ ಎದುರಿಸಲೂ ಸಿದ್ಧ: ಹೈಕೋರ್ಟ್‌ ನ್ಯಾ. ಸಂದೇಶ್‌ ಸ್ಫೋಟಕ ನುಡಿ

ಎಸಿಬಿಯಲ್ಲಿನ ಅಕ್ರಮಗಳನ್ನು ಪ್ರಶ್ನಿಸಿರುವುದಕ್ಕೆ ನನಗೆ ವರ್ಗಾವಣೆ ಬೆದರಿಕೆ ಹಾಕಲಾಗಿದೆ. ಈಗ ನ್ಯಾಯಾಲಯಕ್ಕೇ ಬೆದರಿಕೆ ಹಾಕುವ ಪರಿಸ್ಥಿತಿ ಉದ್ಭವಿಸಿದೆ. ನನ್ನನ್ನೇ ವರ್ಗಾವಣೆ ಮಾಡುವ ಕುರಿತು ಬೆದರಿಕೆ ಹಾಕಲಾಗಿದೆ. ಎಸಿಬಿ ಎಡಿಜಿಪಿ ತುಂಬ ಪವರ್‌ಫುಲ್‌ ಆಗಿದ್ದಾರಂತೆ, ಓರ್ವ ವ್ಯಕ್ತಿ ಈ ವಿಚಾರವನ್ನು ನನ್ನ ಸಹೋದ್ಯೋಗಿ ನ್ಯಾಯಮೂರ್ತಿಯೊಬ್ಬರಿಗೆ ಹೇಳಿದ್ದಾರಂತೆ. ಅದನ್ನು ಆಧರಿಸಿ ನನ್ನ ಸಹೋದ್ಯೋಗಿ ನ್ಯಾಯಮೂರ್ತಿಗಳೇ ನನಗೆ ವರ್ಗಾವಣೆಯ ಬೆದರಿಕೆ ಇದೆ ಎಂದು ತಿಳಿಸಿದ್ದಾರೆ. ವರ್ಗಾವಣೆ ಬೆದರಿಕೆಯನ್ನೂ ಆದೇಶದಲ್ಲಿ ಬರೆಸುತ್ತೇನೆ. ಯಾವುದೇ ರೀತಿಯ ಬೆದರಿಕೆ ಎದುರಿಸಲೂ ಸಿದ್ಧನಿದ್ದೇನೆ. ಜನರ ಒಳಿತಿಗಾಗಿ ವರ್ಗಾವಣೆಯಾಗಲೂ ಸಿದ್ಧನಿದ್ದೇನೆ. ಯಾರ ಬಗ್ಗೆಯೂ ನನಗೆ ಭಯವಿಲ್ಲ. ಬೆಕ್ಕಿಗೆ ಗಂಟೆ ಕಟ್ಟಲು ನಾನು ಸಿದ್ಧನಿದ್ದೇನೆ ಎಂದು ನ್ಯಾಯಮೂರ್ತಿಗಳು ಸೋಮವಾರ ಆಕ್ರೋಶದಿಂದ ನುಡಿದಿದ್ದರು.

Kannada Bar & Bench
kannada.barandbench.com