ಐಪಿಸಿ, ಸಿಆರ್‌ಪಿಸಿ ಕನ್ನಡ ಅವತರಣಿಕೆ ತಾಲ್ಲೂಕು ಕಚೇರಿ, ಪೊಲೀಸ್‌ ಠಾಣೆಗಳಲ್ಲಿ ಲಭ್ಯವಾಗಲಿ: ಸಿಎಂ ಬೊಮ್ಮಾಯಿ

ಐಪಿಸಿ ಮತ್ತು ಸಿಆರ್‌ಪಿಸಿ ಕನ್ನಡ ಆವೃತ್ತಿಗಳನ್ನು ರಿಯಾಯತಿ ದರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
ಐಪಿಸಿ, ಸಿಆರ್‌ಪಿಸಿ ಕನ್ನಡ ಅವತರಣಿಕೆ ತಾಲ್ಲೂಕು ಕಚೇರಿ, ಪೊಲೀಸ್‌ ಠಾಣೆಗಳಲ್ಲಿ ಲಭ್ಯವಾಗಲಿ: ಸಿಎಂ ಬೊಮ್ಮಾಯಿ
Published on

“ಕನ್ನಡಕ್ಕೆ ಭಾಷಾಂತರಗೊಂಡಿರುವ ಅಪರಾಧ ದಂಡ ಸಂಹಿತೆ (ಸಿಅರ್‌ಪಿಸಿ) ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಪುಸ್ತಕಗಳು ತಾಲ್ಲೂಕು ಕಚೇರಿ ವಿಶೇಷವಾಗಿ ಎಲ್ಲಾ ಪೊಲೀಸ್‌ ಠಾಣೆಗಳಲ್ಲಿ ಲಭ್ಯವಾಗುವಂತೆ ಗೃಹ ಇಲಾಖೆ ಮಾಡಬೇಕು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ರಾಜಾಭಾಷಾ (ವಿಧಾಯೀ) ಆಯೋಗ ಹಾಗೂ ಭಾಷಾಂತರ ನಿರ್ದೇಶನಾಲಯದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಐಪಿಸಿ ಮತ್ತು ಸಿಆರ್‌ಪಿಸಿ ಮತ್ತು ಭಾರತ ಸಾಕ್ಷ್ಯ ಅಧಿನಿಯಮಗಳ ದ್ವಿ-ಭಾಷಾ ಕನ್ನಡ ಆವೃತ್ತಿ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

“ಕಾನೂನಿನ ಜ್ಞಾನ ಮತ್ತು ಅರಿವು ಬಹಳ ಮುಖ್ಯ. ಐಪಿಸಿ, ಸಿಆರ್‍ಪಿಸಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬಹುತೇಕ ಕಾನೂನುಗಳು ಇಂಗ್ಲಿಷ್‌ನಲ್ಲಿವೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯು ಐಪಿಸಿ ಮತ್ತು ಸಿಆರ್‌ಪಿಸಿ ಕಾನೂನಗಳನ್ನು ಕನ್ನಡದಲ್ಲಿ ಹೊರತಂದಿರುವುದು ಮಹತ್ವದ ಕಾರ್ಯವಾಗಿದೆ. ಇದರಿಂದ ಜನಸಾಮಾನ್ಯರಿಗೆ, ಗ್ರಾಮೀಣ ಪ್ರದೇಶದ ಜನರಿಗೆ ಕಾನೂನನ್ನು ಅರ್ಥಮಾಡಿಕೊಂಡು, ಅವಶ್ಯಕತೆಯಿದ್ದಾಗ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ” ಎಂದರು.

ರಿಯಾಯತಿ ದರದಲ್ಲಿ ಮಾರಾಟ: ಹಲವು ಪ್ರಮುಖ ಕಾನೂನುಗಳ ಜೊತೆಗೆ ಕೃಷ್ಣಾ ಮತ್ತು ಕಾವೇರಿ ಜಲ ವಿವಾದ ಸೇರಿದಂತೆ ಪ್ರಮುಖ ಅಂತಾರಾಜ್ಯ ನ್ಯಾಯ ಮಂಡಳಿಗಳ ತೀರ್ಪು, ವರದಿಗಳನ್ನೂ ಈಗಾಗಲೇ ಕನ್ನಡದಲ್ಲಿ ಹೊರತರಲಾಗಿದೆ. ಇವುಗಳು ಸರ್ಕಾರದ ಗ್ರಂಥಾಲಯಗಳಲ್ಲಿ ಜನರ ಬಳಕೆಗೆ ಲಭ್ಯವಾಗಬೇಕು. ಪ್ರತಿಯೊಂದು ತಾಲ್ಲೂಕು ಕಚೇರಿ ಹಾಗೂ ಪೊಲೀಸ್ ಠಾಣೆಗಳಲ್ಲಿಯೂ ಗೃಹ ಇಲಾಖೆ ಒದಗಿಸಬೇಕು. ಇವುಗಳನ್ನು ವೆಬ್‍ಸೈಟ್‍ಗಳಲ್ಲಿ ಸಾರ್ವಜನಿಕರಿಗೆ ಸುಲಭವಾಗಿ ದೊರೆಯುವಂತೆ ವ್ಯವಸ್ಥೆ ಮಾಡಬೇಕು ಎಂದರು.

ಐಪಿಸಿ ಮತ್ತು ಸಿಆರ್‌ಪಿಸಿ ಕನ್ನಡ ಆವೃತ್ತಿಗಳನ್ನು ರಿಯಾಯತಿ ದರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ, ಗೃಹ ಸಚಿವ ಅರಗ ಜ್ಞಾನೇಂದ್ರ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ಸುನಿಲ್ ಕುಮಾರ್, ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಉಪಸ್ಥಿತರಿದ್ದರು.

Kannada Bar & Bench
kannada.barandbench.com