ಕಾರಿನಲ್ಲಿ 277 ಕೆಜಿಯಷ್ಟು ಗಾಂಜಾ ಸಾಗಣೆ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿಯೊಬ್ಬನ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ವಜಾ ಮಾಡಿದೆ.
ಕೊಡಗು ಜಿಲ್ಲೆ ಕುಶಾಲನಗರದ ನಿವಾಸಿ ಸೈಯ್ಯದ್ ಮೊಹಮ್ಮದ್ ಅಲಿಯಾಸ್ ನಸೀಮ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
"ಕಾರಿನ ಡಿಕ್ಕಿಯಲ್ಲಿ ಸಾಗಣೆ ಮಾಡುತ್ತಿದ್ದುದು ಗಾಂಜಾ ಎಂಬುದನ್ನು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿ ದೃಢಪಡಿಸಿದೆ. ಹೀಗಾಗಿ, ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ" ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ಮೊಹಮ್ಮದ್ ತೆರಳುತ್ತಿದ್ದ ಕಾರಿನಲ್ಲಿ 60 ಕೆಜಿ ಮತ್ತು ಆ ಕಾರನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದ ಲಾರಿಯೊಳಗೆ ಇದ್ದ 217 ಕೆಜಿಯಷ್ಟು ಪ್ರಮಾಣದ ಗಾಂಜಾವನ್ನು ಮಂಗಳೂರು ನಗರದ ಆರ್ಥಿಕ ಅಪರಾಧಗಳ ತನಿಖೆ ಮತ್ತು ಮಾದಕ ವಸ್ತು ಸಾಗಣೆ ನಿಗ್ರಹ ದಳದ ಪೊಲೀಸರು ವಶಪಡಿಸಿಕೊಂಡಿದ್ದರು. ಈ ಕುರಿತಂತೆ ಆರೋಪಿ ವಿರುದ್ಧ ಮಾದಕ ವಸ್ತು ಸಾಗಣೆ ಕಾಯಿದೆ-1985 (ಎನ್‌ಡಿಪಿಎಸ್), ಶಸ್ತ್ರಾಸ್ತ್ರ ಕಾಯಿದೆ-1959 ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಆರೋಪಿ ಸೈಯದ್ ಮೊಹಮ್ಮದ್ ಕಳೆದ ಒಂದು ವರ್ಷ ಏಳು ತಿಂಗಳಿನಿಂದ ಜೈಲಿನಲ್ಲಿದ್ದಾರೆ.