ಸೌದಿಯಲ್ಲಿ ಭಾರತದ ಪ್ರಜೆಗೆ ಶಿಕ್ಷೆ: ಕೇಂದ್ರ ಸರ್ಕಾರ ಗಂಭೀರತೆ ತೋರಬೇಕು ಎಂದು ಬೇಸರ ದಾಖಲಿಸಿದ ಹೈಕೋರ್ಟ್‌

ಭಾರತದ ಪ್ರಜೆ ವಿದೇಶದಲ್ಲಿ ಯಾತನೆ ಅನುಭವಿಸುತ್ತಿರುವಾಗ ಸರ್ಕಾರಿ ಸಂಸ್ಥೆಗಳು ಗಂಭೀರ ಪ್ರಯತ್ನದ ಮೂಲಕ ಅವರಿಗೆ ನ್ಯಾಯ ದೊರಕಿಸಲು ಯತ್ನಿಸಬೇಕು. ಇದಕ್ಕಿಂತ ಹೆಚ್ಚನ್ನು ಉಲ್ಲೇಖಿಸುವ ಅಗತ್ಯವಿಲ್ಲ ಎಂದು ಆದೇಶಿಸಿರುವ ನ್ಯಾಯಾಲಯ.
Shailesh Kumar and Karnataka HC
Shailesh Kumar and Karnataka HC

ಸೌದಿ ಅರೇಬಿಯಾದಲ್ಲಿ ದೇಶದ್ರೋಹ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಮಂಗಳೂರಿನ ಶೈಲೇಶ್‌ ಕುಮಾರ್‌ ಅವರ ವಿಚಾರದಲ್ಲಿ ಕೇಂದ್ರ ಸರ್ಕಾರವು ಗಂಭೀರತೆ ತೋರಿಸಬೇಕು ಎಂದು ಮಂಗಳವಾರ ಕರ್ನಾಟಕ ಹೈಕೋರ್ಟ್‌ ಮೌಖಿಕವಾಗಿ ಬೇಸರ ವ್ಯಕ್ತಪಡಿಸಿದೆ. ಅಲ್ಲದೇ, ರಾಜ್ಯದ ತನಿಖಾಧಿಕಾರಿಯ ನಡೆಯ ಬಗ್ಗೆಯೂ ತೀವ್ರ ಅಸಮಾಧಾನ ದಾಖಲಿಸಿದೆ.

ಸೌದಿ ಅರೇಬಿಯಾದ ದೊರೆ ಹಾಗೂ ಇಸ್ಲಾಂ ಕುರಿತು ಆಕ್ಷೇಪಾರ್ಹ ಮಾಹಿತಿ ಪೋಸ್ಟ್‌ ಮಾಡಿದ್ದ ಆರೋಪದ ಮೇಲೆ ಸೌದಿ ಅರೇಬಿಯಾದಲ್ಲಿ ಮಂಗಳೂರಿನ ಶೈಲೇಶ್‌ ಕುಮಾರ್‌ ಪತ್ನಿ ಕವಿತಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

“ಕೇಂದ್ರ ಸರ್ಕಾರಕ್ಕೆ ಹಾಕಿರುವ ಮೂರು ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡಿಲ್ಲ. ನ್ಯಾಯಾಲಯದ ಆದೇಶ ಪಾಲಿಸದಿರುವುದಕ್ಕೆ ನ್ಯಾಯಾಲಯವು ಆಕ್ರೋಶ ದಾಖಲಿಸುತ್ತಿದೆ. ಭಾರತದ ಪ್ರಜೆ ವಿದೇಶದಲ್ಲಿ ಯಾತನೆ ಅನುಭವಿಸುತ್ತಿರುವಾಗ ಸರ್ಕಾರಿ ಸಂಸ್ಥೆಗಳು ಗಂಭೀರ ಪ್ರಯತ್ನದ ಮೂಲಕ ಅವರಿಗೆ ನ್ಯಾಯ ದೊರಕಿಸಲು ಯತ್ನಿಸಬೇಕು. ಇದಕ್ಕಿಂತ ಹೆಚ್ಚನ್ನು ಉಲ್ಲೇಖಿಸುವ ಅಗತ್ಯವಿಲ್ಲ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ಕೆಲವು ದುಷ್ಕರ್ಮಿಗಳು ನಡೆಸಿರುವ ಪಿತೂರಿಯಿಂದ ಭಾರತದ ಪ್ರಜೆಯು ವಿದೇಶದಲ್ಲಿ ದೇಶದ್ರೋಹ ಪ್ರಕರಣದಲ್ಲಿ ಅಪರಾಧಿಯಾಗಿದ್ದು, ಅದನ್ನು ಖಾತರಿಪಡಿಸಲಾಗಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರವು ಗಂಭೀರತೆಯನ್ನು ತೋರಿಸಬೇಕು. ಇಷ್ಟು ಮಾತ್ರ ನಾನು ಈ ಸಂದರ್ಭದಲ್ಲಿ ಹೇಳುತ್ತೇನೆ. ಇನ್ನೂ ಹಲವು ವಿಚಾರಗಳು ಹೇಳುತ್ತಿಲ್ಲ. ಇದು ತುಂಬಾ ಬೇಸರ ಉಂಟು ಮಾಡಿದೆ” ಎಂದು ಮೌಖಿಕವಾಗಿ ನ್ಯಾಯಾಲಯ ಹೇಳಿತು.

ಕೇಂದ್ರ ಸರ್ಕಾರದ ವಕೀಲ ಮಧುಕರ್‌ ದೇಶಪಾಂಡೆ ಅವರು “ಭಾರತದ ರಾಯಭಾರ ಕಚೇರಿಯು ಸೌದಿ ಅರೇಬಿಯಾದಲ್ಲಿ ಸಂಬಂಧಿತ ನ್ಯಾಯಾಲಯದಿಂದ ತೀರ್ಪಿನ ಪ್ರತಿ ಕೋರಿದೆ. ಅದನ್ನು ತುರ್ತಾಗಿ ಪಡೆಯುವ ಪ್ರಯತ್ನ ಮಾಡಲಾಗಿದೆ. ಇದರ ಆಧಾರದಲ್ಲಿ ಸೌದಿ ಅರೇಬಿಯಾದ ದೊರೆಗೆ ಕ್ಷಮಾದಾನ ಅರ್ಜಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

ಭಾರತದ ರಾಯಭಾರ ಕಚೇರಿಯ ಅಧಿಕಾರಿ ಮೋಯಿನ್‌ ಖಾನ್‌ ಅವರು ನ್ಯಾಯಾಲಯದ ಜೊತೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದ್ದು, ಸರಿಯಾದ ದಿಕ್ಕಿನಲ್ಲಿ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ ಎಂದು ವಿವರಿಸಿದ್ದಾರೆ. ಅರ್ಜಿದಾರರ ಪರ ಹಿರಿಯ ವಕೀಲ ಪಿ ಪಿ ಹೆಗ್ಡೆ ಅವರು ಶಿಕ್ಷೆಯ ಆದೇಶ ಮಾತ್ರವಲ್ಲ ಅದನ್ನು ಖಾತರಿಪಡಿಸಿರುವ ಆದೇಶವನ್ನು ಪಡೆಯಬೇಕು ಎಂದು ಸರಿಯಾಗಿ ಹೇಳಿದ್ದಾರೆ. ಭಾರತ ಸರ್ಕಾರವು ಶೈಲೇಶ್‌ ಕುಮಾರ್‌ ಅವರಿಗೆ ವಿಧಿಸಿರುವ ಶಿಕ್ಷೆಯ ಆದೇಶ ಮತ್ತು ಅದನ್ನು ಖಾತರಿಪಡಿಸಿರುವ ಆದೇಶಗಳನ್ನು ಆದಷ್ಟು ಬೇಗ ಪಡೆಯಬೇಕು” ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.

“ಭಾರತದ ರಾಯಭಾರ ಕಚೇರಿಯ ಅಧಿಕಾರಿ ಮೋಯಿನ್‌ ಖಾನ್‌ ಅವರು ಕ್ಷಮಾದಾನ ಅರ್ಜಿ ಸಲ್ಲಿಸುವುದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಬಗ್ಗೆ ಮಾಹಿತಿ ಪಡೆಯಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ. ಶಿಕ್ಷೆ ವಿಧಿಸಿರುವ ಆದೇಶವನ್ನು ಅಪರಾಧಿಗೆ ನೀಡಲಾಗುತ್ತದೆ ಎಂದು ಮೋಯಿನ್‌ ಖಾನ್‌ ಅವರು ಹೇಳಿರುವುದರಿಂದ ಅದನ್ನು ಪಡೆದುಕೊಳ್ಳಲು ಕಷ್ಟವಾಗಲಾರದು” ಎಂದೂ ಪೀಠ ಆದೇಶದಲ್ಲಿ ದಾಖಲಿಸಲಾಗಿದೆ.

Also Read
ವಿದೇಶದಲ್ಲಿ ಬಂಧನ: "ಸೌದಿಯಲ್ಲಿ ಶೈಲೇಶ್‌ ತನ್ನಿಚ್ಛೆಯ ವಕೀಲರ ನೇಮಿಸಿಕೊಳ್ಳಬಹುದೇ?" ಕೇಂದ್ರಕ್ಕೆ ಹೈಕೋರ್ಟ್‌ ಪ್ರಶ್ನೆ

ತನಿಖಾಧಿಕಾರಿಯ ನಡೆಗೆ ಆಕ್ಷೇಪ: ರಾಜ್ಯದಲ್ಲಿ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಪೊಲೀಸ್‌ ಅಧಿಕಾರಿ ಎಲ್ಲಿ? ಅಂದಿನಿಂದ ಇಲ್ಲಿಯವರೆಗೆ ಏನು ಮಾಡಲಾಗಿದೆ? ಭಾರತದ ಪ್ರಜೆ ವಿದೇಶದಲ್ಲಿ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ನಿಮ್ಮ ಅಧಿಕಾರಿಗಳು ಎಷ್ಟು ಗಂಭೀರವಾಗಿ ಪ್ರಯತ್ನಿಸಿದ್ದಾರೆ? ತನಿಖಾಧಿಕಾರಿಯನ್ನು ವಶಕ್ಕೆ ಪಡೆಯುವುದೂ ಸೇರಿದಂತೆ ಕಠಿಣ ಆದೇಶ ಮಾಡಬೇಕಾಗುತ್ತದೆ ಎಂದು ಪೀಠವು ಕಟುವಾಗಿ ನುಡಿಯಿತು.

ಅಲ್ಲದೇ, ಇಂದು ತನಿಖಾಧಿಕಾರಿ ಏಕೆ ಬಂದಿಲ್ಲ. ನಮಗೆ ಅಫಿಡವಿಟ್‌ ಬೇಕಿಲ್ಲ. ತನಿಖಾಧಿಕಾರಿಯಿಂದ ಅಪ್‌ಡೇಟ್‌ ಬೇಕಿದೆ. ಭಾರತದ ಪ್ರಜೆ ಜೀವಂತವಾಗಿ ಭಾರತಕ್ಕೆ ಮರಳಬೇಕು. ನ್ಯಾಯಾಲಯದ ಆದೇಶಕ್ಕೆ ಸಂಬಂಧಿಸಿದಂತೆ ಯಾವೆಲ್ಲಾ ಕ್ರಮಕೈಗೊಳ್ಳಲಾಗಿದೆ ಎಂಬುದನ್ನು ಮುಂದಿನ ವಿಚಾರಣೆಯಲ್ಲಿ ತನಿಖಾಧಿಕಾರಿಯು ಎಲ್ಲಾ ದಾಖಲೆಗಳೊಂದಿಗೆ ವೈಯಕ್ತಿಕವಾಗಿ ಬಂದು ವಿವರಿಸಬೇಕು ಎಂದು ಪೀಠವು ಆದೇಶಿಸಿ, ವಿಚಾರಣೆಯನ್ನು ಆಗಸ್ಟ್‌ 17ಕ್ಕೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com