Basangouda Patil Yatnal and Karnataka HC
Basangouda Patil Yatnal and Karnataka HC

ಭಾರತೀಯನನ್ನು ಭಾರತೀಯ ಎಂದು ನೋಡಿ: ಯತ್ನಾಳ್‌ಗೆ ಚಾಟಿ ಬೀಸಿದ ಹೈಕೋರ್ಟ್‌

“ಸನಾತನ ಧರ್ಮದವರು ಮಾತ್ರ ದಸರಾದಲ್ಲಿ ಚಾಮುಂಡಿಗೆ ಹೂವು ಮುಡಿಸಬೇಕು ಹೊರತು ದಲಿತ ಮಹಿಳೆಗೂ ಇದಕ್ಕೆ ಅವಕಾಶವಿಲ್ಲ” ಎಂದಿದ್ದ ಸಂಬಂಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ನಿಷೇಧ ಕಾಯಿದೆ ಅಡಿ ಯತ್ನಾಳ್‌ ವಿರುದ್ಧ ಪ್ರಕರಣ ದಾಖಲಾಗಿದೆ.
Published on

“ಭಾರತೀಯರನ್ನು ಭಾರತೀಯರು ಎಂದು ನೋಡದೆ, ಆ ಜಾತಿ, ಈ ಜಾತಿ ಎಂದು ನೋಡುತ್ತಿರುವುದು ಸಮಸ್ಯೆಯ ಮೂಲ” ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ಕರ್ನಾಟಕ ಹೈಕೋರ್ಟ್‌ ಬುಧವಾರ ಮೌಖಿಕವಾಗಿ ಚಾಟಿ ಬೀಸಿದೆ.

“ಸನಾತನ ಧರ್ಮದವರು ಮಾತ್ರ ದಸರಾದಲ್ಲಿ ಚಾಮುಂಡಿ ದೇವಿಗೆ ಹೂವು ಮುಡಿಸಬೇಕೆ ಹೊರತು ದಲಿತ ಮಹಿಳೆಗೂ ಇದಕ್ಕೆ ಅವಕಾಶವಿಲ್ಲ” ಎಂಬ ಹೇಳಿಕೆ ನೀಡಿದ ಆರೋಪದ ಸಂಬಂಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ನಿಷೇಧ ಕಾಯಿದೆ ಅಡಿ ದಾಖಲಾಗಿರುವ ಪ್ರಕರಣದಲ್ಲಿ ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು ಎಂದು ನ್ಯಾಯಾಲಯ ಆದೇಶಿಸಿದೆ.

ಕೊಪ್ಪಳ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ವಜಾಗೊಳಿಸಬೇಕು ಎಂದು ಕೋರಿ ಯತ್ನಾಳ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice M I Arun
Justice M I Arun

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು “ಪೊಲೀಸರು ಯತ್ನಾಳ್‌ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು. ಆದರೆ, ಯತ್ನಾಳ್‌ ತನಿಖೆಗೆ ಸಹಕರಿಸಬೇಕು” ಎಂದು ಆದೇಶಿಸಿ, ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.

ಇದಕ್ಕೂ ಮುನ್ನ, ಯತ್ನಾಳ್‌ ಪ್ರತಿನಿಧಿಸಿದ್ದ ವಕೀಲ ವೆಂಕಟೇಶ್‌ ದಳವಾಯಿ ಅವರು “ಯತ್ನಾಳ್‌ ನೀಡಿದ್ದಾರೆ ಎನ್ನಲಾದ ಹೇಳಿಕೆಯ ಪೆನ್‌ಡ್ರೈವ್‌ ಸಲ್ಲಿಸಿದ್ದೇನೆ. ಮೊಬೈಲ್‌ನಲ್ಲೂ ಯತ್ನಾಳ್‌ ಹೇಳಿಕೆಯನ್ನು ಪೀಠ ಪರಿಶೀಲಿಸಬಹುದು. ಯತ್ನಾಳ್‌ ಹೇಳಿಕೆಯನ್ನು ತಿರುಚಲಾಗಿದೆ, ಅವರ ಹೇಳಿಕೆಯನ್ನು ತಪ್ಪಾಗಿ ಭಾವಿಸಿ, ಪ್ರಕರಣ ದಾಖಲಿಸಲಾಗಿದೆ” ಎಂದರು.

ಇದಕ್ಕೆ ಆಕ್ಷೇಪಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎ ಬೆಳ್ಳಿಯಪ್ಪ ಮತ್ತು ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಇಡೀ ಜಗತ್ತು ಜಾಗತಿಕ ಗ್ರಾಮವಾಗಿದೆ. ಮನುಷ್ಯರನ್ನು ಮನುಷ್ಯರು ಎಂದು ಪರಿಗಣಿಸುವುದನ್ನು ಅವರು ಕಲಿಯಬೇಕಿದೆ” ಎಂದರು.

ಜಗದೀಶ್‌ ಮತ್ತು ದಳವಾಯಿ ಅವರನ್ನು ಪೀಠದ ಮುಂದೆ ಆಹ್ವಾನಿಸಿ, ಅವರ ಸಮ್ಮುಖದಲ್ಲಿ ಮೊಬೈಲ್‌ನಲ್ಲಿ ಯತ್ನಾಳ್‌ ಹೇಳಿಕೆಯನ್ನು ಪೀಠ ವೀಕ್ಷಿಸಿತು. ಕೆಲ ಕಾಲ ಗೌಪ್ಯವಾಗಿಯೂ ವಿಚಾರಣೆ ನಡೆಸಿತು.

ಬಳಿಕ "ಸನಾತನ ಧರ್ಮ ಅನುಯಾಯಿಗಳು ಮಾತ್ರ ದಸರಾ ಉದ್ಘಾಟಿಸಬೇಕು. ದಲಿತ ಮಹಿಳೆ ಅದನ್ನು ಉದ್ಘಾಟಿಸಬಹುದು. ಆದರೆ, ಬೇರೆ ಧರ್ಮದವರು ಅದನ್ನು ಉದ್ಘಾಟಿಸಲಾಗದು ಎಂದು ಹೇಳಿದ್ದು, ಸನಾತನ ಧರ್ಮಕ್ಕೆ ಸೇರಿದ ವ್ಯಕ್ತಿ ಮಾತ್ರ ದಸರಾ ಉದ್ಘಾಟಿಸಬೇಕು. ದಲಿತ ಸಮುದಾಯಕ್ಕೆ ಸೇರಿದ ಮಹಿಳೆ ಸಹ ದಸರಾ ಉದ್ಘಾಟಿಸುವಂತಿಲ್ಲ ಎಂದು ತಮ್ಮ ಹೇಳಿಕೆಯನ್ನು ತಪ್ಪಾಗಿ ವರದಿ ಮಾಡಲಾಗಿದೆ. ಈ ವರದಿ ಆಧರಿಸಿ ದೂರು ದಾಖಲಿಸಲಾಗಿದೆ ಎಂದ ವೆಂಕಟೇಶ್‌ ದಳವಾಯಿ ಹೇಳಿಕೆಯನ್ನು ದಾಖಲಿಸಿದ ನ್ಯಾಯಾಲಯವು “ಯತ್ನಾಳ್‌ ವಿರುದ್ಧ ಪೊಲೀಸರು ಬಲವಂತದ ಕ್ರಮಕೈಗೊಳ್ಳಬಾರದು. ತನಿಖೆಗೆ ಯತ್ನಾಳ್‌ ಸಹಕರಿಸಬೇಕು” ಎಂದು ಆದೇಶಿಸಿತು.

ಅಂತಿಮವಾಗಿ ಪೀಠವು “ಯಾವುದೇ ರಾಜಕೀಯ ಪಕ್ಷವಾಗಿರಲಿ, ಸಮಾಜದ ಒಂದು ಸಮುದಾಯದ ಜನರನ್ನು ಓಲೈಸುತ್ತಿರುವುದರಿಂದ ಈ ಸಮಸ್ಯೆಯಾಗುತ್ತಿದೆ. ಭಾರತೀಯನನ್ನು ಭಾರತೀಯ ಎಂದು ನೋಡದೆ, ಆ ಜಾತಿ-ಈ ಜಾತಿ ಎಂದು ನೋಡುವುದರಿಂದ ಹೀಗಾಗುತ್ತಿದೆ. ಇದು ನಮ್ಮ ದೈನಂದಿನ ಬದುಕಿಗೆ ಹಾನಿ ಮಾಡುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಿಲ್ಲ” ಎಂದು ಮೌಖಿಕವಾಗಿ ಬೇಸರ ವ್ಯಕ್ತಪಡಿಸಿತು.

Kannada Bar & Bench
kannada.barandbench.com