ಕಟ್ಟಡ ರಕ್ಷಣೆ ಇಲ್ಲವೇ ವಾಣಿಜ್ಯ ಚಟುವಟಿಕೆಗೆಂದು ಮರ ಕಡಿಯುವಂತಿಲ್ಲ: ಕೇರಳ ಹೈಕೋರ್ಟ್

"ವಿನಾಕಾರಣ ಮರ ಕಡಿಯುವುದು ನಮ್ಮ ತಾಯ್ನಾಡಿನ ಪ್ರಕೃತಿ ಮತ್ತು ಪರಿಸರದ ಹತ್ಯಾಕಾಂಡವಲ್ಲದೆ ಬೇರೇನೂ ಅಲ್ಲ" ಎಂದಿದೆ ನ್ಯಾಯಾಲಯ.
Trees
Trees

ವಾಣಿಜ್ಯ ಕಟ್ಟಡಗಳಿಗೆ ಅಡ್ಡಿ ಎಂಬ ಕಾರಣಕ್ಕಾಗಿ ರಸ್ತೆ ಬದಿಯ  ಮರಗಳನ್ನು ಕಡಿಯದೆ ಇರುವಂತೆ ನೋಡಿಕೊಳ್ಳಬೇಕು ಎಂದು ಕೇರಳ ಹೈಕೋರ್ಟ್ ಈಚೆಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. [ಮುಸ್ತಫಾ ಮತ್ತಿತರರು ಹಾಗೂ ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಸಾರ್ವಜನಿಕರು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುವಂತಹ ಮರಗಳನ್ನು ಕಡಿಯಲು ಸೂಕ್ತ ಕಾರಣಗಳಿರಬೇಕು ಎಂದು  ನ್ಯಾಯಮೂರ್ತಿ ಪಿವಿ ಕುಂಞಿಕೃಷ್ಣನ್ ಅವರಿದ್ದ ಏಕಸದಸ್ಯ ಪೀಠ ತಿಳಿಸಿತು.

ಆದ್ದರಿಂದ ಸರ್ಕಾರಿ ಜಮೀನುಗಳಲ್ಲಿನ ಮರಗಳನ್ನು ಕಡಿಯುವುದು ಮತ್ತು ವಿಲೇವಾರಿ ಮಾಡುವುದನ್ನು ನಿಯಂತ್ರಿಸುವ ಫೆಬ್ರುವರಿ 10, 2010 ರ ಸರ್ಕಾರಿ ಆದೇಶವನ್ನು ಪಾಲಿಸಲು ಅಗತ್ಯ ಆದೇಶ ನೀಡುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ  ಅದು ಸೂಚಿಸಿತು.

ತೀರ್ಪಿನಲ್ಲಿ ನ್ಯಾಯಮೂರ್ತಿ ಕುಂಞಿಕೃಷ್ಣನ್ ಅವರು ಖ್ಯಾತ ಕವಿ ಮತ್ತು ಹೋರಾಟಗಾರ್ತಿ ದಿವಂಗತ ಸುಗತಕುಮಾರಿ ಟೀಚರ್ ಅವರ ಕವಿತೆಯೊಂದನ್ನು ಉಲ್ಲೇಖಿಸಿದ್ದಾರೆ

ಸಸಿ ನೆಡೋಣ ನಮ್ಮ ಅವ್ವನಿಗಾಗಿ
ನೆಡೋಣ ಸಸಿಯನು ನಮ್ಮ ಕಂದಮ್ಮಗಳಿಗಾಗಿ
ನೂರಾರು  ಹಕ್ಕಿಗಳಿಗಾಗಿ ಗಿಡ ನೆಡೋಣ
ಉತ್ತಮ ನಾಳೆಗಾಗಿ ಸಸಿ ನೆಡೋಣ
ನೆಡೋಣ ಇದನು ಉಸಿರಿಗಾಗಿ
ಧನ್ಯತೆಯಿಂದ ನೆಡೋಣ ಮಳೆಗಾಗಿ
ಚೆಲುವಿಗಾಗಿ, ನೆಳಲಿಗಾಗಿ, ಜೇನಿನಂತಹ ಫಲಗಳಿಗಾಗಿ
ನೂರಾರು ಗಿಡಗಳನು ನೆಡೋಣ

ಮರಗಳು ಕಡಿದು ತೆಗೆಯಲು ಕೊಡಲಿ ಹಿಡಿದಾಗಲೆಲ್ಲಾ ಕವಿಯ ಈ ಮಾತನ್ನು ನಾಡಿನ ಪ್ರತಿಯೊಬ್ಬರೂ ನೆನೆಯಬೇಕು. ವಿನಾಕಾರಣ ಮರ ಕಡಿಯುವುದು ನಮ್ಮ ತಾಯ್ನಾಡಿನ ಪ್ರಕೃತಿ ಮತ್ತು ಪರಿಸರದ ಹತ್ಯಾಕಾಂಡವಲ್ಲದೆ ಬೇರೇನೂ ಅಲ್ಲ ಎಂದು ಅದು ಎಚ್ಚರಿಕೆ ನೀಡಿತು.  

ತಮ್ಮ ಕಟ್ಟಡದ ಮೇಲೆ ಬೀಳುತ್ತದೆ ಎಂಬ ಕಾರಣಕ್ಕೆ ಸಮೀಪವಿದ್ದ ಮರ ಕಡಿಯಲು ವಾಣಿಜ್ಯ ಕಟ್ಟಡದ ಮಾಲೀಕರೊಬ್ಬರು ಅನುಮತಿ ಕೋರಿದ್ದರು. ಸ್ಥಳಕ್ಕೆ ಧಾವಿಸಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅರ್ಜಿದಾರರ ನಿಲುವಿಗೆ ಸಮ್ಮತಿಸಿದ್ದರು. ಆದರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮನವಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಮಾಲೀಕ ಹೈಕೋರ್ಟ್‌ ಮೆಟ್ಟಿಲೇರಿದ್ದರು.  

ವಿಚಾರಣೆ ವೇಳೆ, ʼಮರ ಅತ್ಯಂತ ಉಪಯುಕ್ತ. ಸ್ಥಳದಲ್ಲಿ ಮರ ಕಡಿಯುವುದನ್ನು ವಿರೋಧಿಸಿ ಜನ ಪ್ರತಿಭಟನೆ ನಡೆಸಿದ್ದರುʼ ಎಂದು ಸಹಾಯಕ ಅರಣ್ಯ  ಸಂರಕ್ಷಣಾಧಿಕಾರಿ ನ್ಯಾಯಾಲಯಕ್ಕೆ ತಿಳಿಸಿದರು.

ಅವರ ಮಾತುಗಳಿಗೆ ತಲೆದೂಗಿದ ನ್ಯಾಯಾಲಯ ಕೊಂಬೆಗಳು ಅಪಾಯಕಾರಿಯಾಗಿ ವಾಲುತ್ತಿದ್ದರೆ, ಸಂಪೂರ್ಣ ಮರ ಕಡಿಯುವ ಬದಲು ಅವುಗಳನ್ನು ಕತ್ತರಿಸಬಹುದು ಎಂದಿತು. ಜೊತೆಗೆ ಸಹಾಯಕ ಸಂರಕ್ಷಣಾಧಿಕಾರಿಯ ವಿವರಣೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವರದಿಯ ನಡುವೆ ವ್ಯತ್ಯಾಸ ಇರುವುದನ್ನು ಗಮನಿಸಿದ ನ್ಯಾಯಾಲಯ, ಅಧಿಕಾರಿಗಳ ಕರ್ತವ್ಯಲೋಪ ಕಂಡುಬಂದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿತು.

"ರಸ್ತೆ ಬದಿಯ ಮರಗಳನ್ನು ರಕ್ಷಿಸುವುದು ಲೋಕೋಪಯೋಗಿ ಇಲಾಖೆ ಕರ್ತವ್ಯವೇ ವಿನಾ ಅದನ್ನು ನಾಶಪಡಿಸುವುದಿಲ್ಲ" ಎಂದ ನ್ಯಾಯಾಲಯ ಅರ್ಜಿದಾರರ ವಾದದಲ್ಲಿ ಹುರುಳಿಲ್ಲ ಎಂಬುದಾಗಿ ತೀರ್ಮಾನಿಸಿ ಅರ್ಜಿ ವಜಾಗೊಳಿಸಿತು.

Kannada Bar & Bench
kannada.barandbench.com