ಪ್ರಜ್ವಲ್‌ ಅತ್ಯಾಚಾರ ಪ್ರಕರಣ: ಹೈಕೋರ್ಟ್‌ ಮುಂದಿನ ವಿಚಾರಣೆವರೆಗೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಆರೋಪ ನಿಗದಿ ಇಲ್ಲ

ಪ್ರಜ್ವಲ್‌ ವಿರುದ್ಧ ನಾಲ್ಕು ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದ್ದು, ಕಳೆದ ವರ್ಷ ಅವರು ಸಲ್ಲಿಸಿದ್ದ ಎಲ್ಲಾ ಜಾಮೀನು ಅರ್ಜಿಗಳೂ ತಿರಸ್ಕೃತಗೊಂಡಿವೆ.
Prajwal Revanna & Karnataka HC
Prajwal Revanna & Karnataka HC
Published on

ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ವಿರುದ್ದ ಆರೋಪ ನಿಗದಿಗೂ ಮುಂಚಿನ ವಾದ-ಪ್ರತಿವಾದವನ್ನು ವಿಚಾರಣಾಧೀನ ನ್ಯಾಯಾಲಯ ಆಲಿಸಬಹುದು. ಆದರೆ, ಆರೋಪ ನಿಗದಿ ಮಾಡಬಾರದು ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಆದೇಶಿಸಿದೆ.

ಪ್ರಜ್ವಲ್‌ ಕಾರು ಚಾಲಕನ ಸ್ಯಾಮ್‌ಸಂಗ್‌ ಫೋನ್‌ನಿಂದ ಪಡೆದಿರುವ ಫೋಟೊ ಮತ್ತು ಎಲ್ಲಾ ವಿಡಿಯೊಗಳನ್ನು ಒದಗಿಸಲು ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಬೇಕು ಎಂದು ಕೋರಿ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ಅರ್ಜಿದಾರರು ಮತ್ತು ಪ್ರಾಸಿಕ್ಯೂಷನ್‌ ವಕೀಲರ ವಾದ ಆಲಿಸಿದ ಪೀಠವು ಆರೋಪ ನಿಗದಿಗೂ ಮುನ್ನ ವಾದ ಆಲಿಸುವ ಪ್ರಕ್ರಿಯೆಯನ್ನು ವಿಚಾರಣಾಧೀನ ನ್ಯಾಯಾಲಯ ನಡೆಸಬಹುದು. ಆದರೆ, ಮುಂದಿನ ವಿಚಾರಣೆವರೆಗೆ ಆರೋಪ ನಿಗದಿ ಮಾಡಬಾರದು ಎಂದು ವಿಚಾರಣಾಧೀನ ನ್ಯಾಯಾಲಯಕ್ಕೆ ನಿರ್ದೇಶಿಸಿತು.

ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲ ಜಿ ಅರುಣ್‌ ಅವರು “ವಿಚಾರಣಾಧೀನ ನ್ಯಾಯಾಲಯದಲ್ಲಿ ತಮ್ಮನ್ನು ಸಮರ್ಥಿಸಿಕೊಳ್ಳಲು ತನ್ನ ಕಾರು ಚಾಲಕನಿಂದ ಜಫ್ತಿ ಮಾಡಿರುವ ಸ್ಯಾಮ್‌ಸಂಗ್‌ ಮೊಬೈಲ್‌ನಿಂದ ಪಡೆದಿರುವ ಎಲ್ಲಾ ಫೋಟೊ ಮತ್ತು ವಿಡಿಯೊಗಳನ್ನು ಒದಗಿಸಬೇಕು” ಎಂದರು.

ಇದಕ್ಕೆ ಆಕ್ಷೇಪಿಸಿದ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಪ್ರಕರಣಕ್ಕೆ ಸಂಬಂಧಿಸಿದ ಡಿಜಿಟಲ್‌ ಸಾಕ್ಷ್ಯವನ್ನು ಪ್ರಜ್ವಲ್‌ಗೆ ಪೆನ್‌ಡ್ರೈವ್‌ ಮೂಲಕ ಒದಗಿಸಲಾಗಿದೆ. ಕಾರು ಚಾಲಕನ ಮೊಬೈಲ್‌ ಫೋನ್‌ನಲ್ಲಿ ಪಡೆದಿರುವ ಎಲ್ಲಾ 2,000 ವಿಡಿಯೋ ಮತ್ತು 15,000 ಫೋಟೊವನ್ನು ಅವರಿಗೆ ಒದಗಿಸಲಾಗದು. ಏಕೆಂದರೆ ಅಲ್ಲಿ ಹಲವು ಮಹಿಳೆಯರ ಖಾಸಗಿತನಕ್ಕೆ ಸಮಸ್ಯೆಯಾಗುತ್ತದೆ. ವಿಚಾರಣಾಧೀನ ನ್ಯಾಯಾಲಯದಲ್ಲಿ ವಿಚಾರಣೆಯನ್ನು ವಿಳಂಬಗೊಳಿಸುವ ಉದ್ದೇಶದಿಂದ ಪ್ರಜ್ವಲ್‌ ಇಂಥ ಅರ್ಜಿಗಳನ್ನು ಸಲ್ಲಿಸಿದ್ದಾರೆ” ಎಂದರು.

ಆಗ ಪೀಠವು “ದೂರುದಾರರನ್ನು ಹೊರತುಪಡಿಸಿ ಉಳಿದ ಸಂತ್ರಸ್ತರ ಗುರುತು ಬಹಿರಂಗವಾಗುವುದಕ್ಕೆ ನ್ಯಾಯಾಲಯ ಅವಕಾಶ ನೀಡುವುದಿಲ್ಲ. ನೀವು ಕೇಳುತ್ತಿರುವ ದಾಖಲೆ ಸಾವಿರಾರು ಪುಟಗಳಿವೆ ಎಂದು ಪ್ರಾಸಿಕ್ಯೂಷನ್‌ ಹೇಳುತ್ತಿದೆ. ಅದರ ಅವಶ್ಯಕತೆ ನಿಮಗೆ ಏನಿದೆ?” ಎಂದು ಪ್ರಶ್ನಿಸಿತು.

“ಹಾಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಸಿ ಸೆಕ್ಷನ್‌ 207ರ ಅಡಿ ಏನೆಲ್ಲಾ ಒದಗಿಸಬಹುದು ಆ ಸಾಕ್ಷಿಗಳನ್ನು ನೀಡಬೇಕು. ಇತರೆ ಸಂತ್ರಸ್ತರ ಗುರುತು ಬಹಿರಂಗವಾಗುವುದಕ್ಕೆ ಮತ್ತು ಅವರ ಬದುಕಿಗೆ ಎರವಾಗುವುದಕ್ಕೆ ಅವಕಾಶ ನೀಡುವುದಿಲ್ಲ” ಎಂದು ಪೀಠ ಹೇಳಿತು.  

ಅಂತಿಮವಾಗಿ ಪೀಠವು ಅರ್ಜಿಯ ವಿಚಾರಣೆಯನ್ನು ಜನವರಿ 16 ಕ್ಕೆ ಮುಂದೂಡಿತು.

Kannada Bar & Bench
kannada.barandbench.com